Site icon Vistara News

Pariksha Pe charcha 2023: ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ ‘ಇದು ಔಟ್​ ಆಫ್​ ಸಿಲೇಬಸ್​’ ಎಂದ ಪ್ರಧಾನಿ ಮೋದಿ

Student Asked Out Of Syllabus Question In Pariksha Pe Charcha

Student Asked Out Of Syllabus Question In Pariksha Pe Charcha

ನವ ದೆಹಲಿ: ಇಂದು ದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿದ್ಯಾರ್ಥಿಗಳೊಂದಿಗೆ ನಡೆಸಿದ ಪರೀಕ್ಷಾ ಪೆ ಚರ್ಚಾ (Pariksha Pe charcha 2023) ಸಂವಾದದಲ್ಲಿ ಅವರಿಗೊಂದು ಅನಿರೀಕ್ಷಿತ ಪ್ರಶ್ನೆಯೊಂದು ಎದುರಾಯಿತು. ಅದಕ್ಕೆ ಪ್ರಧಾನಿ ಮೋದಿ ಇದು ‘ಔಟ್​ ಆಫ್ ಸಿಲೆಬಸ್’​ ಪ್ರಶ್ನೆ ಎಂದು ಹೇಳಿದರು. ಆದರೂ ಅದಕ್ಕೆ ಅವರು ಆ ವಿದ್ಯಾರ್ಥಿಗೆ ಅರ್ಥವಾಗುವ ರೀತಿಯಲ್ಲೇ ಉತ್ತರವನ್ನೂ ಕೊಟ್ಟರು.

ಸಂವಾದದ ಮಧ್ಯೆ ವಿದ್ಯಾರ್ಥಿಯೊಬ್ಬ ಎದ್ದು ನಿಂತು ‘ದೇಶದ ಎಲ್ಲ ಪ್ರತಿಪಕ್ಷಗಳ ನಾಯಕರೂ ಮಾಡುವ ಟೀಕೆಗಳನ್ನು ನೀವು ಹೇಗೆ ತೆಗೆದುಕೊಳ್ಳುತ್ತೀರಿ? ನಿಮಗೆ ಏನನ್ನಿಸುತ್ತದೆ?’ ಎಂದು ಪ್ರಶ್ನಿಸಿದ. ಅದಕ್ಕೆ ಚುಟುಕಾಗಿಯೇ ಉತ್ತರಿಸಿದ ಅವರು, ‘ಇದು ಇಲ್ಲಿ ಸಂಬಂಧ ಪಡದ ಪ್ರಶ್ನೆ. ಆದರೂ ಉತ್ತರಿಸುತ್ತಿದ್ದೇನೆ. ಟೀಕೆಗಳೆಂದರೆ ಅವು ಪ್ರಜಾಪ್ರಭುತ್ವವನ್ನು ಶುದ್ಧೀಕರಿಸುವ ಸಾಧನಗಳು. ಒಂದು ಸಮೃದ್ಧ ಪ್ರಜಾಪ್ರಭುತ್ವಕ್ಕೆ ಟೀಕೆಗಳೇ ಶುದ್ಧಿ ಯಜ್ಞ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ ಪ್ರಧಾನಿ ಮೋದಿ ಸಕಾರಾತ್ಮಕ ಟೀಕೆಗಳಿಗೂ, ಅನಗತ್ಯವಾಗಿ ಒಬ್ಬರ ಕೆಲಸವನ್ನು ವ್ಯಂಗ್ಯಮಾಡಬೇಕು ಎಂದೇ ಮಾಡುವ ಟೀಕೆಗಳಿಗೂ ಇರುವ ವ್ಯತ್ಯಾಸ ತಿಳಿಸಿದರು.

ಇದನ್ನೂ ಓದಿ: Pariksha pe charcha 2023: ತಮಿಳು ಭಾಷೆಯ ಬಗ್ಗೆ ನನಗೆ ಅತ್ಯಂತ ಹೆಮ್ಮೆಯಿದೆ ಎಂದ ಪ್ರಧಾನಿ ಮೋದಿ

ನಾವು ಪ್ರಾಮಾಣಿಕವಾಗಿ, ಕಷ್ಟಪಟ್ಟು ಕೆಲಸ ಮಾಡಿದಾಗ್ಯೂ ಯಾರಾದರೂ ಟೀಕೆ-ವ್ಯಂಗ್ಯ ಮಾಡಿದರೆ ನೀವು ಆ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವೇ ಇಲ್ಲ. ಟೀಕಾಕಾರರೇ ನಿಮ್ಮ ಬಲ. ನೀವು ಆ ಬಗ್ಗೆ ಗಮನ ಹರಿಸದೆ ಕೇವಲ ನಿಮ್ಮ ಗುರಿಯತ್ತ ಫೋಕಸ್​ ಮಾಡಿದರೆ ಸಾಕು ಎಂದು ಪ್ರಧಾನಿ ಮೋದಿ ಹೇಳಿದರು. ಇದೇ ವೇಳೆ ಸಮಯ ಪಾಲನೆ ಬಗ್ಗೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ ಅವರು ‘ಸಮಯ ಪರಿಪಾಲನೆ ಎಂಬುದು ಪರೀಕ್ಷೆ ಸಮಯದಲ್ಲಿ ಮಾತ್ರ ಮಾಡುವಂಥದ್ದಲ್ಲ. ಪ್ರತಿದಿನ, ಪ್ರತಿ ಕೆಲಸದಲ್ಲೂ ಸಮಯವನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ವಿದ್ಯಾರ್ಥಿಗಳಾದ ನೀವು, ನಿಮ್ಮ ಕೆಲಸವೇನು ಎಂಬುದನ್ನು ಅರ್ಥ ಮಾಡಿಕೊಂಡು, ಅದಕ್ಕೆ ಮಾತ್ರ ಆದ್ಯತೆ ಕೊಡಿ’ ಎಂದು ಹೇಳಿದರು.

Exit mobile version