ಗ್ರೇಟರ್ ನೊಯ್ಡಾದ ಶಿವ ನಾಡರ್ ವಿಶ್ವವಿದ್ಯಾಲಯದ(Shiv Nadar University) ಕ್ಯಾಂಪಸ್ನಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ಯುವತಿಗೆ ಶೂಟ್ ಮಾಡಿ ಕೊಂದು, ಬಳಿಕ ಹಾಸ್ಟೆಲ್ಗೆ ಹೋಗಿ ತಾನೂ ಶೂಟ್ ಮಾಡಿಕೊಂಡು ಮೃತಪಟ್ಟಿದ್ದಾನೆ. ಈ ಇಬ್ಬರಿಗೂ 21 ವರ್ಷ. ಇಬ್ಬರೂ ಬಿಎ ಸೋಷಿಯಾಲಜಿ ಪದವಿಯ ಮೂರನೇ ವರ್ಷದಲ್ಲಿ ಓದುತ್ತಿದ್ದರು. ಆ ವಿದ್ಯಾರ್ಥಿನಿ ಕಾಲೇಜ್ ಕ್ಯಾಂಪಸ್ನಲ್ಲಿರುವ ಹುಡುಗಿಯರ ಹಾಸ್ಟೆಲ್ನಲ್ಲಿ ಇದ್ದರೆ, ಈತ ಹುಡುಗರ ಹಾಸ್ಟೆಲ್ನಲ್ಲಿ ವಾಸವಾಗಿದ್ದ.
ಗುರುವಾರ ಮಧ್ಯಾಹ್ನ 1.30ರ ಹೊತ್ತಿಗೆ ಶಿವ ನಾಡರ್ ಯೂನಿವರ್ಸಿಟಿಯಲ್ಲಿ ಘಟನೆ ನಡೆದಿದೆ. ವಿದ್ಯಾರ್ಥಿನಿ ಹೆಸರು ಸ್ನೇಹಾ ಚೌರಾಸಿಯಾ ಎಂದಾಗಿದ್ದು, ಆಕೆ ಕಾನ್ಪುರ ಮೂಲದವಳು. ಹಾಸ್ಟೆಲ್ಗಳ ವಿದ್ಯಾರ್ಥಿಗಳಿಗಾಗಿ ಇರುವ ಡೈನಿಂಗ್ ಹಾಲ್ನ ಹೊರಭಾಗದಲ್ಲಿ ಆ ಹುಡುಗ ಶೂಟ್ ಮಾಡಿದ್ದಾನೆ. ರಕ್ತದ ಮಡುವಲ್ಲಿ ಇದ್ದ ಸ್ನೇಹಾಳನ್ನು ಗ್ರೇಟರ್ ನೊಯ್ಡಾದ ಯತಾರ್ಥ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅಷ್ಟರಲ್ಲಿ ಅವಳ ಪ್ರಾಣ ಹೋಗಿತ್ತು. ಅಷ್ಟರಲ್ಲಿ ಇತ್ತ ಹುಡುಗ ತನ್ನ ಹಾಸ್ಟೆಲ್ನಲ್ಲಿ ಗುಂಡು ಹಾರಿಸಿಕೊಂಡು ಜೀವ ಬಿಟ್ಟಿದ್ದ. ಸ್ಥಳಕ್ಕೆ ಬಂದ ಪೊಲೀಸರು ಕಂಟ್ರಿ ಮೇಡ್ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ. ಸಿಸಿಟಿವಿ ಫೂಟೇಜ್ಗಳನ್ನೆಲ್ಲ ಪರಿಶೀಲನೆ ಮಾಡಿದ್ದಾರೆ.
‘ಮೇ 17ರಿಂದ ಬೇಸಿಗೆ ರಜೆ ಶುರುವಾಗಿದ್ದರಿಂದ ತುಂಬ ವಿದ್ಯಾರ್ಥಿಗಳು ಯೂನಿವರ್ಸಿಟಿ ಕ್ಯಾಂಪಸ್ನಲ್ಲಿ ಇರಲಿಲ್ಲ. ಹೀಗಾಗಿ ಈ ಘಟನೆ ನಡೆದಾಗ ಹುಡುಗ-ಹುಡುಗಿ ಬಿಟ್ಟರೆ ಬೇರೆ ಯಾರೂ ಪ್ರತ್ಯಕ್ಷದರ್ಶಿಗಳು ಇರಲಿಲ್ಲ. ಡೈನಿಂಗ್ ಹಾಲ್ನ ಎರಡೂ ಬದಿಯಲ್ಲಿ ಹಾಸ್ಟೆಲ್ಗಳು ಇವೆ. ಒಂದು ಹುಡುಗಿಯರದ್ದು, ಇನ್ನೊಂದು ಹುಡುಗರದ್ದು. ಗುರುವಾರ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಡೈನಿಂಗ್ ಹಾಲ್ ಇನ್ನೂ ಲಾಕ್ ಆಗಿಯೇ ಇತ್ತು. ಆ ಇಬ್ಬರೂ ವಿದ್ಯಾರ್ಥಿಗಳು ಹಾಲ್ನ ಬಲ ಬದಿಯ ಮೂಲೆಯಲ್ಲಿ ಭೇಟಿಯಾದರು. ಇಬ್ಬರೂ ಪರಸ್ಪರ ಅಪ್ಪಿಕೊಂಡಿದ್ದಾರೆ. ಏನೋ ಮಾತಾಡಿದ್ದಾರೆ. ಆ ಹುಡುಗ ಹುಡುಗಿಗಾಗಿ ಏನೋ ತಂದಿದ್ದ. ಅದನ್ನು ಕೊಡಲು ಮುಂದಾದಾಗ ಆಕೆ ನಿರಾಕರಿಸಿದಳು. ಆ ಕ್ಷಣಕ್ಕೆ ವಿದ್ಯಾರ್ಥಿ ಪಿಸ್ತೂಲ್ನಿಂದ ಹುಡುಗಿಯ ಹೊಟ್ಟೆಗೆ ಶೂಟ್ ಮಾಡಿದ್ದ. ಆಕೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹುಡುಗನೊಂದಿಗೆ ಫೈಟ್ ಮಾಡಲು ಪ್ರಯತ್ನಿಸಿದಳು. ಆದರೆ ಅದಕ್ಕೆ ಅವನು ಅವಕಾಶ ಕೊಡಲಿಲ್ಲ. ಮೇಲಿಂದ ಮೇಲೆ ಶೂಟ್ ಮಾಡಿದ್ದಾನೆ. ಆಗ ಅವಳು ಕೆಳಗೆ ಬಿದ್ದಳು. ಹುಡುಗ ಅಲ್ಲಿ ನಿಲ್ಲದೆ, ತನ್ನ ಹಾಸ್ಟೆಲ್ಗೆ ಓಡಿ ಹೋದ. ಇವಿಷ್ಟು ದೃಶ್ಯಗಳು ಸಿಸಿಟಿವಿ ಫೂಟೇಜ್ನಲ್ಲಿ ಕಂಡುಬಂದಿವೆ’ ಎಂದು ಗ್ರೇಟರ್ ನೊಯ್ಡಾ ಪೊಲೀಸ್ ಉಪ ಆಯುಕ್ತ ಎಸ್.ಎಂ.ಖಾನ್ ತಿಳಿಸಿದ್ದಾರೆ. ಹಾಗೇ, ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಅವರ ಸಂಬಂಧ ಹಳಸಿತ್ತು ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: ಬಿಟ್ಟು ಹೊರಟ ಲವರ್ ಮೇಲೆ ಅತ್ಯಾಚಾರ ಮಾಡಿ, ಖಾಸಗಿ ಅಂಗಕ್ಕೆ ಖಾರದಪುಡಿ ಚೆಲ್ಲಿದ ವಿವಾಹಿತ!
ಯೂನಿವರ್ಸಿಟಿಯಲ್ಲಿ ನಡೆದ ಘಟನೆ ಬಗ್ಗೆ ವಕ್ತಾರ ವಿಷಾದ ವ್ಯಕ್ತಪಡಿಸಿದ್ದಾರೆ. ನಮ್ಮ ವಿಶ್ವವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳನ್ನು ಕಳೆದುಕೊಂಡೆವು. ಸದ್ಯ ಈ ವಿಷಯವನ್ನು ತನಿಖೆ ನಡೆಸುತ್ತಿದ್ದಾರೆ. ಉಳಿದಂತೆ ಯಾರಿಗೂ ಹಾನಿಯಾಗಿಲ್ಲ. ನಮ್ಮ ಯೂನಿವರ್ಸಿಟಿಯ ಎಲ್ಲ ವಿದ್ಯಾರ್ಥಿಗಳ ಸುರಕ್ಷತೆಯೇ ನಮ್ಮ ಆದ್ಯತೆ. ಇನ್ನೆಂದೂ ಇಂಥ ಪ್ರಮಾದ ಆಗದಂತೆ ಮುನ್ನೆಚ್ಚರಿಕೆ ವಹಿಸುತ್ತೇವೆ ಎಂದಿದ್ದಾರೆ.