ಡುಮ್ಕಾ: ಈ ಕಾಲದಲ್ಲಿ ಎಂತೆಂಥಾ ಘಟನೆಗಳು ನಡೆಯುತ್ತವೆಯೋ ಗೊತ್ತಿಲ್ಲ. ಹಿಂದೆಲ್ಲ ಮಕ್ಕಳು ತುಂಬ ಕಡಿಮೆ ಅಂಕ ತೆಗೆದುಕೊಂಡರೆ, ಸರಿಯಾಗಿ ಹೋಂ ವರ್ಕ್ ಮಾಡದೆ ಇದ್ದರೆ ಶಿಕ್ಷಕರು ಅವರನ್ನು ಶಿಕ್ಷಿಸುತ್ತಿದ್ದರು. ಆದರೆ ಈಗ ಜಾರ್ಖಂಡದ ಡುಮ್ಕಾದಲ್ಲಿ ಉಲ್ಟಾ ಆಗಿದೆ. ಶಿಕ್ಷಕರು ಸರಿಯಾಗಿ ಮಾರ್ಕ್ಸ್ ಕೊಡಲಿಲ್ಲ ಎಂದು ಮಕ್ಕಳೆಲ್ಲ ಸೇರಿ ಅವರಿಗೇ ಹೊಡೆದಿದ್ದಾರೆ. ಇದು ನಂಬಲು ಕಷ್ಟವಾದರೂ, ಸತ್ಯವಾಗಿ ನಡೆದ ಘಟನೆ.
ಜಾರ್ಖಂಡ್ನ ಡುಮ್ಕಾದ ವಸತಿ ಶಾಲೆಯೊಂದರಲ್ಲಿ ಇಂಥದ್ದೊಂದು ವಿಚಿತ್ರ ಘಟನೆ ನಡೆದಿದೆ. 9ನೇ ತರಗತಿ ಪ್ರಾಯೋಗಿಕ ಪರೀಕ್ಷೆಯಲ್ಲಿ ತಮಗೆ ಶಿಕ್ಷಕರು ಹೆಚ್ಚಿನ ಅಂಕ ನೀಡಲಿಲ್ಲ. ತುಂಬ ಕಡಿಮೆ ಮಾರ್ಕ್ಸ್ ಬಂದಿದೆ ಎಂಬ ಕಾರಣಕ್ಕೆ ಮಕ್ಕಳೆಲ್ಲ ಸೇರಿ ಗಣಿತ ಶಿಕ್ಷಕನನ್ನು ಮರಕ್ಕೆ ಕಟ್ಟಿ ಥಳಿಸಿದ್ದಾರೆ. ಬರೀ ಶಿಕ್ಷಕನಿಗಷ್ಟೇ ಅಲ್ಲ, ಜಾರ್ಖಂಡ್ ಅಕಾಡೆಮಿಕ್ ಕೌನ್ಸಿಲ್ ವೆಬ್ಸೈಟ್ನಲ್ಲಿ ರಿಸಲ್ಟ್ ಅಪ್ಲೋಡ್ ಮಾಡಿದ, ಅದೇ ಶಾಲೆಯ ಕ್ಲರ್ಕ್ನಿಗೂ ಹೊಡೆದಿದ್ದಾರೆ. ಇದು ಸರ್ಕಾರಿ ಬುಡಕಟ್ಟು ಸಮುದಾಯದ ವಸತಿ ಶಾಲೆಯಾಗಿದ್ದು, 9ನೇ ತರಗತಿ ಮಕ್ಕಳು, ಶಿಕ್ಷಕ ಮತ್ತು ಕ್ಲರ್ಕ್ನನ್ನು ಮರಕ್ಕೆ ಕಟ್ಟಿ ಹೊಡೆದಿರುವ ಫೋಟೋ-ವಿಡಿಯೋಗಳೂ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.
9ನೇ ತರಗತಿ ಪ್ರಾಯೋಗಿಕ ಪರೀಕ್ಷೆಯಲ್ಲಿ, ಒಟ್ಟು 32 ವಿದ್ಯಾರ್ಥಿಯರಲ್ಲಿ, 11 ವಿದ್ಯಾರ್ಥಿಗಳಿಗೆ ಡಿಡಿ (ಡಬಲ್ ಡಿ) ಗ್ರೇಡ್ ಬಂದಿತ್ತು. ಅಂದರೆ ಅವರೆಲ್ಲ ಫೇಲ್ ಆಗಿದ್ದರು. ಅವರೆಲ್ಲ ಸೇರಿ ಶಿಕ್ಷಕನನ್ನು-ಗುಮಾಸ್ತನನ್ನು ಥಳಿಸಿದ್ದಾರೆ. ಹೀಗೆ ಮಕ್ಕಳಿಂದ ಹೊಡೆಸಿಕೊಂಡ ಗಣಿತ ಶಿಕ್ಷಕ ಈ ಹಿಂದೆ ಶಾಲೆಯ ಮುಖ್ಯ ಶಿಕ್ಷಕ ಆಗಿದ್ದರು. ಆದರೆ ಬಳಿಕ ಅವರನ್ನು ಆ ಸ್ಥಾನದಿಂದ ತೆಗೆದು ಹಾಕಲಾಗಿತ್ತು. ಅದಕ್ಕೆ ಕಾರಣವೇನೆಂದು ಗೊತ್ತಿರಲಿಲ್ಲ. ಸದ್ಯ ಶಾಲೆಯಲ್ಲಿ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಎರಡು ದಿನಗಳ ಕಾಲ ರಜಾ ಘೋಷಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪರೀಕ್ಷೆ ಫಲಿತಾಂಶದ ಬಗ್ಗೆ ಶಾಲಾ ಆಡಳಿತ ಮಂಡಳಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಹಾಗೆ, ಪ್ರಸ್ತುತ ಘಟನೆಯ ಬಗ್ಗೆ ಪೊಲೀಸರಿಗೆ ಲಿಖಿತ ದೂರು ಕೂಡ ಕೊಟ್ಟಿಲ್ಲ. ‘ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆದ ನಂತರ ನಾವೇ ಹೋಗಿ ಶಾಲೆ ಆಡಳಿತ ಮಂಡಳಿ ಸಿಬ್ಬಂದಿಗೆ, ದೂರು ಕೊಡಿ ಎಂದು ಕೇಳಿದ್ದೇವೆ. ಆದರೆ ಮಕ್ಕಳ ಭವಿಷ್ಯ ಹಾಳಾಗುತ್ತದೆ ಎಂಬ ಕಾರಣಕ್ಕೆ ಅವರು ಒಪ್ಪಲಿಲ್ಲ’ ಎಂದು ಗೋಪಿಕಾಂದರ್ ಪೊಲೀಸ್ ಠಾಣೆ ಅಧಿಕಾರಿ ನಿತ್ಯಾನಂದ ಭೋಕ್ತಾ ತಿಳಿಸಿದ್ದಾರೆ.
ಇದನ್ನೂ ಓದಿ: ಅಂಕಿತಾ ಸಿಂಗ್ ಬೆಡ್ರೂಮಿಗೇ ಹೋಗಿ ಬೆಂಕಿ ಹಚ್ಚಿದ ಶಾರುಖ್; ಆ ಕ್ಷಣ ವಿವರಿಸಿ ಕಣ್ಮುಚ್ಚಿದ ಯುವತಿ