Site icon Vistara News

ಏಕನಾಥ ಶಿಂಧೆ, ಉದ್ಧವ್‌ ಠಾಕ್ರೆಗೆ ಚುನಾವಣಾ ಆಯೋಗ ನೋಟಿಸ್‌; ಆಗಸ್ಟ್‌ 8 ಡೆಡ್‌ಲೈನ್‌

uddhav- Eknath

ಮುಂಬೈ: ಶಿವಸೇನೆಯಲ್ಲಿ ಎರಡು ಬಣವಾಗಿದೆ. ಒಂದು ಉದ್ಧವ್‌ ಠಾಕ್ರೆ ಬಣ ಮತ್ತೊಂದು ಏಕನಾಥ ಶಿಂಧೆ ಬಣ. ಆದರೆ ಇಲ್ಲಿ ಮೂಲ ಶಿವಸೇನೆ ಯಾವುದು? ಶಿವಸೇನೆಯ ಮೂಲ ಚಿಹ್ನೆ ಯಾವ ಬಣಕ್ಕೆ ಸೇರಬೇಕು ಎಂಬುದೀಗ ಬಹುದೊಡ್ಡ ಪ್ರಶ್ನೆ. ಎರಡೂ ಬಣಗಳೂ ನಾವೇ ನಿಜವಾದ ಶಿವಸೇನೆ ಎಂದು ವಾದಿಸುತ್ತಿವೆ. ಈ ಮಧ್ಯೆ ಏಕನಾಥ ಶಿಂಧೆ ಚುನಾವಣಾ ಆಯೋಗಕ್ಕೆ ಪತ್ರ ಬರೆದು, ʼಶಿವಸೇನೆಯ ಹೆಚ್ಚಿನ ಸದಸ್ಯರು ನಮ್ಮೊಂದಿಗೇ ಇದ್ದಾರೆ. ಹಾಗಾಗಿ ನಮ್ಮನ್ನೇ ಶಿವಸೇನೆ ಎಂದು ಪರಿಗಣಿಸಬೇಕು. ಚಿಹ್ನೆಯ ಬಳಕೆಗೂ ಅವಕಾಶ ಕೊಡಬೇಕುʼ ಎಂದಿದ್ದರು. ಆದರೆ ಅದಕ್ಕೆ ಪ್ರತಿಯಾಗಿ ಪತ್ರ ಬರೆದಿದ್ದ ಉದ್ಧವ್‌ ಠಾಕ್ರೆ, ʼಶಿವಸೇನೆಯ ಆಧಿಪತ್ಯ, ಚಿಹ್ನೆ ಮತ್ತಿತರ ಯಾವುದೇ ಸಂಗತಿಗಳಿದ್ದರೂ ತಮ್ಮನ್ನು ಒಂದು ಮಾತು ಕೇಳಲೇಬೇಕುʼ ಎಂದು ವಾದಿಸಿದ್ದರು.

ಇದೀಗ ಚುನಾವಣಾ ಆಯೋಗ ಏಕನಾಥ ಶಿಂಧೆ ಮತ್ತು ಉದ್ಧವ್‌ ಠಾಕ್ರೆ ಬಣಗಳೆರಡಕ್ಕೂ ಪತ್ರ ಬರೆದು ʼನಿಮ್ಮ ನಿಮ್ಮ ಬಣಕ್ಕೆ ಬಹುಮತ ಇದೆ ಎಂಬುದನ್ನು ಡಾಕ್ಯುಮೆಂಟರಿ ದಾಖಲೆ ಮೂಲಕ ಸಾಕ್ಷೀಕರಿಸಿʼ ಎಂದು ಹೇಳಿದೆ. ಅಷ್ಟೇ ಅಲ್ಲ ಏಕನಾಥ ಶಿಂಧೆ ಗುಂಪಿನವರು ತಮಗೆ ಬರೆದಿರುವ ಪತ್ರವನ್ನು ಉದ್ಧವ್‌ ಠಾಕ್ರೆ ಬಣಕ್ಕೆ ಕಳಿಸಿದೆ ಮತ್ತು ಉದ್ಧವ್‌ ಠಾಕ್ರೆ ಗುಂಪಿನ ಕಡೆಯಿಂದ ಬಂದ ಪತ್ರವನ್ನು ಶಿಂಧೆ ಗುಂಪಿಗೆ ಕಳಿಸಿದೆ. ಎರಡೂ ಬಣಗಳೂ ಆಗಸ್ಟ್‌ 8ರ ಮಧ್ಯಾಹ್ನ 1ಗಂಟೆಯೊಳಗೆ ಉತ್ತರ ನೀಡಬೇಕು ಎಂದೂ ಹೇಳಿದೆ. ಈ ಎರಡೂ ಬಣಗಳು ಸಲ್ಲಿಸುವ ಪುರಾವೆಯನ್ನು ಪರಿಶೀಲಿಸಿದ ಬಳಿಕ ಚುನಾವಣಾ ಆಯೋಗ ವಿಚಾರಣೆ ನಡೆಸಲಿದೆ.

ಮಹಾರಾಷ್ಟ್ರದಲ್ಲಿ ವಿಧಾನ ಪರಿಷತ್‌ ಚುನಾವಣೆಯ ಬಳಿಕ ಶಿವಸೇನೆಯಲ್ಲಿ ಒಡಕು ಮೂಡಿದೆ. ಏಕನಾಥ ಶಿಂಧೆ ಮತ್ತು ಅವರ ಬೆಂಬಲಿಗರು ಬಂಡಾಯ ಎದ್ದ ಬಳಿಕ, ಮಹಾರಾಷ್ಟ್ರದಲ್ಲಿ ಮಹಾವಿಕಾಸ ಅಘಾಡಿ ಸರ್ಕಾರ ಪತನಗೊಂಡಿದೆ. ಇದೀಗ ಶಿವಸೇನೆಯ ಏಕನಾಥ ಶಿಂಧೆ ಬಣ, ಬಿಜೆಪಿಯೊಂದಿಗೆ ಸೇರಿ ಹೊಸ ಸರ್ಕಾರವನ್ನೇ ರಚಿಸಿದೆ. ಆದರೆ ಏಕನಾಥ ಶಿಂಧೆ ಮತ್ತು ಉದ್ಧವ್‌ ಠಾಕ್ರೆ ಗುಂಪಲ್ಲಿ ಯಾವುದು ನಿಜವಾದ ಶಿವಸೇನೆಯೆಂದು ಪರಿಗಣಿತವಾಗುತ್ತದೆ ಎಂಬುದು ಕುತೂಹಲ.

ಇದನ್ನೂ ಓದಿ: Maha politics: ನಮ್ಮದೇ ನಿಜವಾದ ಶಿವಸೇನೆ, ಚು.ಆಯೋಗದ ಮುಂದೆ ಹಕ್ಕು ಮಂಡಿಸಿದ ಶಿಂಧೆ

Exit mobile version