ನವ ದೆಹಲಿ: ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿ ತಮ್ಮದೇ ಪಕ್ಷದ ನಾಯಕರು, ಗಣ್ಯರನ್ನು ಟೀಕಿಸುವುದು ಹೊಸದಲ್ಲ. ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನಂತೂ ಅದೆಷ್ಟೋ ಬಾರಿ ವ್ಯಂಗ್ಯ ಮಾಡಿದ್ದಾರೆ. ಭಾರತದ ಆರ್ಥಿಕತೆ ವಿಚಾರದಲ್ಲಂತೂ ಮೋದಿ, ನಿರ್ಮಲಾ ಸೀತಾರಾಮನ್ ವಿರುದ್ಧ ಹಲವು ಬಾರಿ ಮಾತನಾಡಿದ್ದಾರೆ. ಅದೆಲ್ಲ ಬಿಡಿ, ಈಗ ಹೊಸದಾಗಿ ಅವರು ಮಾತನಾಡಿದ್ದು ಭಾರತದ ಮಾಜಿ ಪ್ರಧಾನಮಂತ್ರಿಗಳಾದ ಜವಾಹರ್ಲಾಲ್ ನೆಹರು ಮತ್ತು ಅಟಲ್ ಬಿಹಾರಿ ವಾಜಪೇಯಿ ಬಗ್ಗೆ. ಈ ಇಬ್ಬರೂ ಮಾಜಿ ಪ್ರಧಾನಮಂತ್ರಿಗಳದ್ದು ದೊಡ್ಡ ಮೂರ್ಖತನ ಎಂಬರ್ಥದಲ್ಲಿ ಸುಬ್ರಹ್ಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.
‘ನಮ್ಮ ಮಾಜಿ ಪ್ರಧಾನಮಂತ್ರಿಗಳಾದ ನೆಹರು ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಮೂರ್ಖತನದ ಕಾರಣಕ್ಕೆ, ನಾವು ಭಾರತೀಯರು ತೈವಾನ್ ಮತ್ತು ಟಿಬೆಟ್ಗಳು ಚೀನಾದ ಭೂಭಾಗ ಎಂದು ಒಪ್ಪಿಕೊಳ್ಳಬೇಕಾಗಿ ಬಂತು. ಆದರೆ ಈಗ ಚೀನಾ ವಾಸ್ತವ ಗಡಿ ನಿಯಂತ್ರಣ ರೇಖೆಗೆ (ಎಲ್ಎಸಿ)ಸಂಬಂಧಪಟ್ಟ ಒಪ್ಪಂದ ಒಂದೇ ಒಂದು ನಿಯಮಗಳನ್ನೂ ಗೌರವಿಸುತ್ತಿಲ್ಲ. ಲಡಾಖನ್ನಲ್ಲಿ ನಮ್ಮ ಭೂಪ್ರದೇಶ ಕಬಳಿಸಲು ನಿರಂತರವಾಗಿ ಪ್ರಯತ್ನ ಮಾಡುತ್ತಿದೆ. ಅಷ್ಟಾದರೂ ಮೋದಿಯವರು ಮಂಪರಿನಲ್ಲಿದ್ದುಕೊಂಡು ‘ಯಾರು ಬರಲಿಲ್ಲ’ ಎಂದೇ ಹೇಳುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ. ಅಂದಹಾಗೇ, ಅಮೆರಿಕದ ಜನಪ್ರತಿನಿಧಿಗಳ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್ಗೆ ಭೇಟಿ ನೀಡಿದ ಬೆನ್ನಲ್ಲೇ ಸುಬ್ರಹ್ಮಣಿಯನ್ ಸ್ವಾಮಿ ಇಂಥದ್ದೊಂದು ಟ್ವೀಟ್ ಮಾಡಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ 60ನೇ ಸಂಸ್ಥಾಪನಾ ದಿನಾಚರಣೆ ನಿಮಿತ್ತ ನಡೆದಿದ್ದ ಸರ್ದಾರ್ ಪಣಿಕ್ಕರ್ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡಿದ್ದ ಸುಬ್ರಹ್ಮಣಿಯನ್ ಸ್ವಾಮಿ ‘ಹಿಂದು ಧರ್ಮದಲ್ಲಿ ನಾಲ್ಕು ವರ್ಣಗಳಿವೆ. ಆ ವರ್ಣಗಳು ರಕ್ತದ ಆಧಾರದಲ್ಲಿ ವಿಭಜಿತಗೊಂಡಿದ್ದಲ್ಲ, ಆದರೆ ಜಾತಿಯೆಂಬುದು ರಕ್ತವನ್ನಾಧರಿಸಿ ರೂಪುಗೊಂಡಿದೆ. ಯಾವ ವ್ಯಕ್ತಿ ಬುದ್ಧಿವಂತ, ಧೈರ್ಯಶಾಲಿ ಮತ್ತು ಉದಾರಿಯಾಗಿರುತ್ತಾನೋ, ಅವನು ಬ್ರಾಹ್ಮಣ ಎಂದು ಭಗವಾನ್ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಆ ದೃಷ್ಟಿಕೋನದಲ್ಲಿ ನೋಡಿದರೆ ಡಾ. ಬಿ.ಆರ್.ಅಂಬೇಡ್ಕರ್ ಅವರು ಜವಾಹರ್ ಲಾಲ್ ನೆಹರೂಗಿಂತಲೂ ಶ್ರೇಷ್ಠ ಬ್ರಾಹ್ಮಣ. ಯಾಕೆಂದರೆ ಅಂಬೇಡ್ಕರ್ ಹಲವು ಪದವಿ ಪಡೆದವರು, ಪಿಎಚ್ಡಿ ಮಾಡಿದ್ದಾರೆ. ಆದರೆ ಜವಾಹರ್ ಲಾಲ್ ನೆಹರೂ ಯಾವೊಂದು ಪರೀಕ್ಷೆಯನ್ನೂ ಪಾಸ್ ಮಾಡಲಿಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ: ವಿಸ್ತಾರ Fact Check: ಆರ್ಥಿಕತೆ ಬೆಳವಣಿಗೆಯಲ್ಲಿ 3ನೇ ಸ್ಥಾನದಿಂದ 164ಕ್ಕೆ ಕುಸಿಯಿತಾ ಭಾರತ?