2024ರ ಲೋಕಸಭೆ ಚುನಾವಣೆ (Lok Sabha Election 2024) ಸಮೀಪಿಸುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಓಂ ಪ್ರಕಾಶ್ ರಾಜಭರ್ ಅವರ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ (Suheldev Bharatiya Samaj Party (SBSP) ಮತ್ತೆ ಎನ್ಡಿಎ ಒಕ್ಕೂಟವನ್ನು ಸೇರಿಕೊಂಡಿದೆ. ಈ ಬಗ್ಗೆ ಗೃಹ ಸಚಿವ ಅಮಿತ್ ಶಾ ಮತ್ತು ಎಸ್ಬಿಎಸ್ಪಿ ರಾಷ್ಟ್ರೀಯ ಅಧ್ಯಕ್ಷ ಓಂ ಪ್ರಕಾಶ್ ರಾಜಭರ್ ಅವರು ಟ್ವೀಟ್ ಮಾಡಿದ್ದಾರೆ. ‘ಓಂ ಪ್ರಕಾಶ್ ರಾಜಭರ್ ಅವರು ಎನ್ಡಿಎ ಒಕ್ಕೂಟ ಸೇರಲು ನಿರ್ಧರಿಸಿದ್ದಾರೆ. ಅವರನ್ನು ನಾನು ಎನ್ಡಿಎ ಕುಟುಂಬಕ್ಕೆ ಸ್ವಾಗತಿಸುತ್ತೇನೆ’ ಎಂದು ಅಮಿತ್ ಶಾ ಹೇಳಿದ್ದಾರೆ. ‘ರಾಜಭರ್ ಪಕ್ಷ ಸೇರ್ಪಡೆಯಿಂದ ಉತ್ತರ ಪ್ರದೇಶದಲ್ಲಿ ಎನ್ಡಿಎ ಇನ್ನಷ್ಟು ಬಲಿಷ್ಠವಾಗುತ್ತದೆ’ ಎಂದಿದ್ದಾರೆ.
ಎಸ್ಬಿಎಸ್ಪಿ ರಾಷ್ಟ್ರೀಯ ಅಧ್ಯಕ್ಷ ರಾಜ್ಭರ್ ಟ್ವೀಟ್ ಮಾಡಿ ‘ಬಿಜೆಪಿ ಮತ್ತು ಎಸ್ಬಿಎಸ್ಪಿ ಪಕ್ಷಗಳು ಜತೆಯಾಗಿವೆ. ನಮ್ಮ ಎರಡೂ ಪಕ್ಷಗಳು ಒಟ್ಟಾಗಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತೇವೆ. ಈ ದೇಶದ ಭದ್ರತೆ, ರಕ್ಷಣೆ, ಉತ್ತಮ ಆಡಳಿತ, ಹಿಂದುಳಿದವರ, ದಲಿತರ, ಶೋಷಿತರ, ರೈತರ ಮತ್ತು ಯುವಜನರ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ಓಂ ಪ್ರಕಾಶ್ ರಾಜಭರ್ ಅವರು 2002ರಲ್ಲಿ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷವನ್ನು ಸಂಸ್ಥಾಪನೆ ಮಾಡಿದ್ದಾರೆ.
श्री @oprajbhar जी से दिल्ली में भेंट हुई और उन्होंने प्रधानमंत्री श्री @narendramodi जी के नेतृत्व वाले NDA गठबंधन में आने का निर्णय लिया। मैं उनका NDA परिवार में स्वागत करता हूँ।
— Amit Shah (@AmitShah) July 16, 2023
राजभर जी के आने से उत्तर प्रदेश में एनडीए को मजबूती मिलेगी और मोदी जी के नेतृत्व में एनडीए द्वारा… pic.twitter.com/uLnbgJedbF
ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ 2017ರಲ್ಲಿ ಎನ್ಡಿಒ ಒಕ್ಕೂಟವನ್ನು ಸೇರಿತ್ತು. ಆ ವರ್ಷ ಉತ್ತರ ಪ್ರದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜತೆಗೇ ಸ್ಪರ್ಧಿಸಿತ್ತು. ಬಿಜೆಪಿ ಗೆದ್ದ ಬಳಿಕ ಓಂ ಪ್ರಕಾಶ್ ರಾಜಭರ್ ಅವರನ್ನು ಹಿಂದುಳಿದ ವರ್ಗದವರ ಕಲ್ಯಾಣ ಇಲಾಖೆ ಸಚಿವರಾಗಿ ನೇಮಕ ಮಾಡಲಾಗಿತ್ತು. ಆದರೆ ನಂತರದ ವರ್ಷಗಳಲ್ಲಿ ಭಿನ್ನಾಭಿಪ್ರಾಯದ ಕಾರಣದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. 2022ರಲ್ಲಿ ಎನ್ಡಿಎ ಒಕ್ಕೂಟದಿಂದ ಹೊರಬಿದ್ದು, ಅದೇ ವರ್ಷ ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಜತೆ ಮೈತ್ರಿ ಮಾಡಿಕೊಂಡು ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇದೀಗ ಮತ್ತೆ ವಾಪಸ್ ಎನ್ಡಿಒ ಒಕ್ಕೂಟಕ್ಕೆ ಬಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಸಹಜವಾಗಿಯೇ ಎನ್ಡಿಎಗೆ ಬಲ ಸಿಕ್ಕಂತಾಗಿದೆ.
ಚಿರಾಗ್ ಪಾಸ್ವಾನ್ಗೂ ಆಹ್ವಾನ
ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್ ಪಾಸ್ವಾನ್)ದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಪತ್ರ ಬರೆದು, ಜುಲೈ 18ರಂದು ದೆಹಲಿಯಲ್ಲಿ ನಡೆಯಲಿರುವ ಎನ್ಡಿಎ ಒಕ್ಕೂಟದ ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದಾರೆ. ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್ ಪಾಸ್ವಾನ್) ಅವರೂ ಕೂಡ ಈ ಮೊದಲು ಎನ್ಡಿಎ ಒಕ್ಕೂಟದಲ್ಲೇ ಇದ್ದರು. ಆದರೆ 2020ರಲ್ಲಿ ಬಿಹಾರ ವಿಧಾನಸಭೆ ಚುನಾವಣೆ ವೇಳೆ ನಿತೀಶ್ ಕುಮಾರ್ ಮತ್ತು ಚಿರಾಗ್ ಪಾಸ್ವಾನ್ ಮಧ್ಯೆ ಸೀಟ್ ಶೇರ್ ವಿಚಾರದಲ್ಲಿ ಮನಸ್ತಾಪ ಉಂಟಾದ ಬಳಿಕ, ಎನ್ಡಿಎ ಒಕ್ಕೂಟ ತೊರೆದಿದ್ದರು. ಇದೀಗ ಮತ್ತೆ ಸೇರುವ ಸಾಧ್ಯತೆ ದಟ್ಟವಾಗಿದೆ. ಅಷ್ಟೇ ಅಲ್ಲ, ಚಿರಾಗ್ ಪಾಸ್ವಾನ್ ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ ಎನ್ನಲಾಗಿದೆ. 2020ರಲ್ಲಿ ಬಿಹಾರದಲ್ಲಿ ಚುನಾವಣೆ ನಡೆಯುವ ವೇಳೆ ನಿತೀಶ್ ಕುಮಾರ್ ಅವರ ಜೆಡಿ (ಯು) ಬಿಜೆಪಿಯೊಂದಿಗೇ ಇತ್ತು. ಬಳಿಕ ಎನ್ಡಿಎ ತೊರೆದು, ಆರ್ಜೆಡಿಯೊಟ್ಟಿಗೆ ಮೈತ್ರಿ ಮಾಡಿಕೊಂಡು ಅಲ್ಲಿ ಸರ್ಕಾರ ರಚನೆ ಮಾಡಿದೆ.