Site icon Vistara News

PM Modi: ಪ್ರಧಾನಿ ಮೋದಿ ಭೇಟಿ ವೇಳೆ ಆತ್ಮಾಹುತಿ ದಾಳಿ ನಡೆಸುವುದಾಗಿ ಬೆದರಿಕೆ ಪತ್ರ; ಕೇರಳದಲ್ಲಿ ಹೈಅಲರ್ಟ್!

Narendra Modi Plans To Lok Sabha Election

Narendra Modi Strategy For Lok Sabha Election; Will Launch 42 Key Projects by Jan 26

ತಿರುವನಂತಪುರಂ: ಪ್ರಧಾನಿ ನರೇಂದ್ರ ಮೋದಿ (PM Modi)ಯವರು ಏಪ್ರಿಲ್​ 24ರಂದು ಕೇರಳದ ಕೊಚ್ಚಿಗೆ ಭೇಟಿ ನೀಡಲಿದ್ದಾರೆ. ಆದರೆ ಈ ಬೆನ್ನಲ್ಲೇ ಕೇರಳದಲ್ಲಿರುವ ಭಾರತೀಯ ಜನತಾ ಪಾರ್ಟಿ ಕಚೇರಿಗೆ ಬೆದರಿಕೆ ಪತ್ರವೊಂದು ಬಂದಿದೆ. ‘ಪ್ರಧಾನಿ ನರೇಂದ್ರ ಮೋದಿಯವರು ಕೊಚ್ಚಿಗೆ ಭೇಟಿ ನೀಡಿದ್ದೇ ಆದಲ್ಲಿ ಆತ್ಮಾಹುತಿ ದಾಳಿ ನಡೆಸುತ್ತೇನೆ’ ಎಂದು ಆ ಪತ್ರದಲ್ಲಿ ಬರೆಯಲಾಗಿದೆ. ಹಾಗೇ, ಪತ್ರದಲ್ಲಿ ವ್ಯಕ್ತಿಯೊಬ್ಬನ ಹೆಸರು, ಮತ್ತಿತರ ವಿವರಗಳನ್ನೂ ಉಲ್ಲೇಖಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರಿಗೆ ಬಂದ ಜೀವ ಬೆದರಿಕೆ ಪತ್ರದಲ್ಲಿ ಇರುವ ಹೆಸರಿನ ವ್ಯಕ್ತಿಯನ್ನು ಪೊಲೀಸರು ಗುರುತಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಆತ ತಾನು ಈ ಪತ್ರವನ್ನು ಬರೆದೇ ಇಲ್ಲ ಎಂದು ಹೇಳಿದ್ದಾಗಿ ವರದಿಯಾಗಿದೆ. ಯಾರೋ ತನ್ನ ವೈರಿಗಳು ನನ್ನನ್ನು ಕೇಸ್​​ನಲ್ಲಿ ಸಿಕ್ಕಿಸಲು ಹೀಗೆ ಪತ್ರ ಬರೆದಿದ್ದಾರೆ ಎಂದೂ ಆತ ಪೊಲೀಸರ ಎದುರು ಹೇಳಿಕೊಂಡಿದ್ದಾನೆ.

ಇದನ್ನೂ ಓದಿ: Kerala train fire: ಕೇರಳ ರೈಲು ಬೆಂಕಿ ಪ್ರಕರಣದ ತನಿಖೆ ಹೊಣೆ ಹೊತ್ತ ಎನ್ಐಎ

ಜೀವ ಬೆದರಿಕೆ ಪತ್ರ ಬರುತ್ತಿದ್ದಂತೆ ಕೇರಳದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಕೇಂದ್ರ ತನಿಖಾ ದಳಗಳು ಈ ಪತ್ರದ ಬಗ್ಗೆ ತನಿಖೆ ಕೈಗೊಂಡಿವೆ. ಇದೆಲ್ಲದರ ಮಧ್ಯೆ ಇನ್ನೊಂದು ಎಡವಟ್ಟು ಆಗಿದೆ. ಭದ್ರತಾ ವ್ಯವಸ್ಥೆ, ತೆಗೆದುಕೊಳ್ಳಬೇಕಾದ ಸೆಕ್ಯೂರಿಟಿ ಕ್ರಮಗಳನ್ನು ವಿವರಿಸಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಪೊಲೀಸರಿಗೆ ಬರೆದಿರುವ ಪತ್ರವೂ ಕೂಡ ಸೋರಿಕೆಯಾಗಿದ್ದು, ಅದರಲ್ಲಿರುವ ವಿಷಯಗಳೆಲ್ಲ ಮಾಧ್ಯಮಗಳಿಗೆ ಗೊತ್ತಾಗಿದೆ. ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್​ ಇಂಡಿಯಾ (PFI)ಸೇರಿ ಇನ್ನೂ ಹಲವು ದೇಶ ವಿರೋಧಿ ಸಂಘಟನೆಗಳಿಂದ ಬಂದಿರುವ ಬೆದರಿಕೆಗಳ ಬಗ್ಗೆ ಈ ಪತ್ರವು ವಿವರಣೆಯನ್ನು ಒಳಗೊಂಡಿದೆ. ಹೀಗೆ ಒಬ್ಬ ಪೊಲೀಸ್ ಅಧಿಕಾರಿ ತಮ್ಮ ಇಲಾಖೆಯೊಳಗಿನವರಿಗೆ ಬರೆದ ಪತ್ರ ಲೀಕ್ ಆಗಿದ್ದಕ್ಕೆ ಕೇಂದ್ರ ವಿದೇಶಾಂಗ ಇಲಾಖೆ, ರಾಜ್ಯ ಸಚಿವ, ಮೂಲತಃ ಕೇರಳದವರೇ ಆದ ಎಂ.ಮುರಳೀಧರನ್​ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ರಾಜ್ಯದ ಪೊಲೀಸರಿಂದ ಆದ ಗಂಭೀರ ಸ್ವರೂಪದ ಭದ್ರತಾ ಉಲ್ಲಂಘನೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್​ 24ರಂದು ಕೊಚ್ಚಿಗೆ ಭೇಟಿ ಕೊಡಲಿದ್ದಾರೆ. ಅದೇ ದಿನ ಅವರು ತಿರುವನಂತಪುರಂನಲ್ಲಿ, ರಾಜ್ಯದ ಮೊದಲ ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲಿಗೆ ಚಾಲನೆ ಕೊಡಲಿದ್ದಾರೆ. ಅಷ್ಟೇ ಅಲ್ಲ, ಅವರು ರೋಡ್​ ಶೋ ನಡೆಸಿ, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿ ಕೇರಳ ರಾಜ್ಯ ಮುಖ್ಯಸ್ಥ ಕೆ.ಸುರೇಂದ್ರನ್​ ತಿಳಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರಿಗೆ ಜೀವ ಬೆದರಿಕೆ ಹೊಸದಲ್ಲ. ಅವರ ಮೇಲೆ ಸದಾ ಈ ಬೆದರಿಕೆ ಇದ್ದೇ ಇದೆ.

Exit mobile version