ನವ ದೆಹಲಿ: 200 ಕೋಟಿ ರೂ. ವಂಚನೆ ಪ್ರಕರಣದ ಆರೋಪದಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿರುವ ಬೆಂಗಳೂರು ಮೂಲದ ವಂಚಕ ಸುಕೇಶ್ ಚಂದ್ರಶೇಖರ್ (Sukesh Chandrashekar), ಬಾಲಿವುಡ್ ನಟಿ ಜಾಕ್ವೆಲಿನ್‌ಗೆ ಹೋಳಿ ಹಬ್ಬದ ಪ್ರಯುಕ್ತ ಪ್ರೇಮ ಪತ್ರವನ್ನು ಬರೆದಿದ್ದಾನೆ. ಮತ್ತೆ ನಿನ್ನ ಬಾಳಿನಲ್ಲಿ ಬಣ್ಣ ತಂದೇ ತರುತ್ತೇನೆ ಎಂದು ಪ್ರಮಾಣವನ್ನೂ ಮಾಡಿದ್ದಾನೆ.
ಇದನ್ನೂ ಓದಿ: Jacqueline Fernandez: ಜಾಕ್ವೆಲಿನ್‌ಗೆ ವ್ಯಾಲೆಂಟೈನ್ಸ್ ವಿಶ್ ಮಾಡಿದ ವಂಚಕ ಸುಕೇಶ್ ಚಂದ್ರಶೇಖರ್!
ವಿಶೇಷವೆಂದರೆ ಸುಕೇಶ್ ತನ್ನ ಪತ್ರದಲ್ಲಿ ಮಾಧ್ಯಮದವರು, ತನ್ನನ್ನು ದ್ವೇಷಿಸುವವರು ಹಾಗೂ ಕುಟುಂಬದವರಿಗೂ ಹೋಳಿ ಹಬ್ಬದ ಶುಭ ಕೋರಿದ್ದಾನೆ.
ನಂತರ “ಅದ್ಭುತ ವ್ಯಕ್ತಿ, ನನ್ನ ಸುಂದರಿ ಜಾಕ್ವೆಲಿನ್‌ಗೆ ಹೋಳಿ ಹಬ್ಬದ ಶುಭಾಶಯ. ನಿನ್ನ ಬಾಳಿನಲ್ಲಿ ಮರೆಯಾದ ಬಣ್ಣಗಳನ್ನು ನೂರು ಪಟ್ಟು ಹೆಚ್ಚಿಸಿ ವಾಪಸು ತಂದುಕೊಡುತ್ತೇನೆ ಎಂದು ಬಣ್ಣಗಳ ದಿನವಾದ ಈ ದಿನ ನಿನಗೆ ಪ್ರಮಾಣ ಮಾಡುತ್ತೇನೆ. ನಾನು ನಿನಗಾಗಿ ಏನನ್ನಾದರೂ ಮಾಡಬಲ್ಲೆ ಎನ್ನುವುದು ನಿನಗೆ ಗೊತ್ತು. ಐ ಲವ್ ಯು ಮೈ ಬೇಬಿ. ನೀನು ನನಗೆ ಎಷ್ಟು ಮುಖ್ಯ ಎಂದು ನಿನಗೆ ಗೊತ್ತು. ಮಿಸ್ ಯು. ಮೈ ಬೊಮ್ಮ, ಮೈ ಲವ್” ಎಂದು ಪ್ರೇಮ ಪತ್ರದಲ್ಲಿ ಬರೆದಿದ್ದಾನೆ ಸುಕೇಶ್.
ಸುಕೇಶ್ ಈ ಹಿಂದೆ ಪ್ರೇಮಿಗಳ ದಿನದಂದು ಕೂಡ ಜಾಕ್ವೆಲಿನ್‌ಗೆ ಪ್ರೇಮ ಪತ್ರ ಬರೆದು, ಶುಭ ಹಾರೈಸಿದ್ದ. ಸುಕೇಶ್ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ನೋರಾ ಫತೇಹಿ ಅವರನ್ನು ಜಾರಿ ನಿರ್ದೇಶನಾಲಯವು ಹಲವು ಬಾರಿ ವಿಚಾರಣೆಗೆ ಒಳಪಡಿಸಿದೆ.