ನವ ದೆಹಲಿ: ಬಿಜೆಪಿ ನಾಯಕ ಸುನೀಲ್ ಬನ್ಸಲ್ (Sunil Bansal) ಅವರನ್ನು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದ್ದು, ಪಶ್ಚಿಮ ಬಂಗಾಳ, ಒಡಿಶಾ ಮತ್ತು ತೆಲಂಗಾಣ ರಾಜ್ಯಗಳ ಉಸ್ತುವಾರಿ ವಹಿಸಲಾಗಿದೆ. ಸುನೀಲ್ ಬನ್ಸಲ್ ಉತ್ತರ ಪ್ರದೇಶದಲ್ಲಿ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸುನೀಲ್ ಸ್ಥಾನಕ್ಕೆ ಈಗ ಬಿಜೆಪಿ ಮುಖಂಡ ಧರ್ಮಪಾಲ್ ಸಿಂಗ್ ಅವರನ್ನು ಜೆ.ಪಿ.ನಡ್ಡಾ ನೇಮಕ ಮಾಡಿದ್ದಾರೆ. ಧರ್ಮಪಾಲ್ ಸಿಂಗ್ ಜಾರ್ಖಂಡ್ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದವರು. ಹಾಗೇ, ಧರ್ಮಪಾಲ್ ಜಾಗಕ್ಕೆ ಕರ್ಮವೀರ್ ಸಿಂಗ್ ನೇಮಕಗೊಂಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಪಕ್ಷ ಸಂಘಟನೆ ಜವಾಬ್ದಾರಿ ಹೊತ್ತುಕೊಂಡಿದ್ದ ಸುನೀಲ್ ಬನ್ಸಲ್, 2022ರ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಉತ್ತರ ಪ್ರದೇಶದಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಷ್ಟೇ ಅಲ್ಲ, 2017ರ ವಿಧಾನಸಭೆ ಚುನಾವಣೆ, 2019ರ ಲೋಕಸಭೆ ಚುನಾವಣೆಗಳಲ್ಲೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಅತ್ಯಂತ ಹೆಚ್ಚು ಸೀಟ್ಗಳೊಂದಿಗೆ ಗೆಲ್ಲುವಲ್ಲಿ ಬನ್ಸಲ್ ಕೊಡುಗೆ ಅಪಾರ ಎಂದೇ ಹೇಳಲಾಗುತ್ತಿದೆ. ಗೃಹ ಸಚಿವ ಅಮಿತ್ ಶಾ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸುನೀಲ್ ಬನ್ಸಲ್ಗೆ ಈಗ ಬಡ್ತಿ ಸಿಕ್ಕಿದೆ. ರಾಷ್ಟ್ರೀಯ ಪ್ರಧಾನಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಇದನ್ನೂ ಓದಿ: 2024ರ ಚುನಾವಣೆಯಲ್ಲೂ ನರೇಂದ್ರ ಮೋದಿಯವರೇ ಪ್ರಧಾನಿ ಅಭ್ಯರ್ಥಿ: ಗೃಹ ಸಚಿವ ಅಮಿತ್ ಶಾ