Site icon Vistara News

Sunny Deol : ಸನ್ನಿ ಡಿಯೋಲ್‌ ಮನೆ ಹರಾಜು ನೋಟಿಸ್‌ ವಾಪಸ್‌! ಬ್ಯಾಂಕ್‌ ಕೊಟ್ಟ ಕಾರಣ ಕುತೂಹಲಕರ!

Sunny Deol house auction

ಮುಂಬೈ: ನಟ ಸನ್ನಿ ಡಿಯೋಲ್‌ (Sunny Deol) ಅವರ ಗದರ್‌ 2 ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಸಿನಿಮಾ ಹಲವಾರು ಕೋಟಿಗಳನ್ನು ಬಾಚಿಕೊಳ್ಳುತ್ತಿರುವ ಬೆನ್ನಲ್ಲೇ ಸನ್ನಿ ಡಿಯೋಲ್‌ ಅವರ ಬಗ್ಗೆ ಆರೋಪವೊಂದು ಕೇಳಿಬಂದಿದೆ. ಅವರು ಬ್ಯಾಂಕ್‌ ಆಫ್‌ ಬರೋಡಾ ಬ್ಯಾಂಕ್‌ಗೆ 56 ಕೋಟಿ ರೂ. ಕಟ್ಟಬೇಕಿದ್ದು, ಅದನ್ನು ಕಟ್ಟದ ಹಿನ್ನೆಲೆಯಲ್ಲಿ ಅವರ ಮನೆಯನ್ನು ಹರಾಜು ಮಾಡುವುದಾಗಿ ಬ್ಯಾಂಕ್‌ ನೋಟಿಸ್‌ ನೀಡಿದೆ. ಆದರೆ ನೋಟಿಸ್‌ ನೀಡಿದ 24 ಗಂಟೆಗಳೊಳಗಾಗಿ ಅದನ್ನು ಹಿಂಪಡೆಯಲಾಗಿದ್ದು, ಈ ವಿಚಾರ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ಭಾನುವಾರದಂದು ಬ್ಯಾಂಕ್‌ ಆಫ್‌ ಬರೋಡಾ ವತಿಯಿಂದ ಸನ್ನಿ ಡಿಯೋಲ್‌ ಅವರಿಗೆ ನೋಟಿಸ್‌ ನೀಡಿರುವುದಾಗಿ ಸುದ್ದಿಯಾಗಿತ್ತು. ಬಿಜೆಪಿ ಸಂಸದರಾಗಿರುವ ಸನ್ನಿ ಡಿಯೋಲ್‌ ಅವರು ಬ್ಯಾಂಕ್‌ಗೆ 56 ಕೋಟಿ ರೂ. ಕೊಡುವುದು ಬಾಕಿಯಿರುವುದರಿಂದ ಮುಂಬಯಿಯ ಜುಹುವಿನಲ್ಲಿರುವ ಮನೆಯನ್ನು ಆಗಸ್ಟ್‌ 25ರಂದು ಬ್ಯಾಂಕ್‌ ವತಿಯಿಂದ ಹರಾಜು ಮಾಡಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿತ್ತು. ಆದರೆ ಸೋಮವಾರದಂದು ಆ ನೋಟಿಸ್‌ ಅನ್ನು ತಾಂತ್ರಿಕ ದೋಷ ಎನ್ನುವ ಕಾರಣ ಕೊಟ್ಟು ಹಿಂದೆ ಪಡೆಯಲಾಗಿದೆ.

ಈ ವಿಚಾರವಾಗಿ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಅವರು ಟ್ವಿಟರ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. “ಆ ತಾಂತ್ರಿಕ ದೋಷ ಉಂಟಾಗುವಂತೆ ಮಾಡಿದ್ದು ಯಾರು ಎನ್ನುವ ಪ್ರಶ್ನೆ ಕಾಡುತ್ತಿದೆ” ಎಂದು ಅವರು ಹೇಳಿದ್ದಾರೆ. ಈ ಬಗ್ಗೆ BRS ನಾಯಕ ಮತ್ತು ತೆಲಂಗಾಣ ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ (TSREDCO) ಅಧ್ಯಕ್ಷ ವೈ ಸತೀಶ್ ರೆಡ್ಡಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. “ಬಿಜೆಪಿ ಸಂಸದ ಸನ್ನಿ ಡಿಯೋಲ್‌ 55 ಕೋಟಿ ರೂ. ಬಾಕಿ ಪಾವತಿಸಿಲ್ಲ ಎಂದು ಮನೆ ಹರಾಜು ಹಾಕುವುದಾಗಿ ನೋಟಿಸ್‌ ನೀಡಿದ ಬ್ಯಾಂಕ್‌ 24 ಗಂಟೆಗಳೊಳಗೆ ಅದನ್ನು ವಾಪಸು ತೆಗೆದುಕೊಂಡಿದೆ. ಅದಕ್ಕೆ ʼತಾಂತ್ರಿಕ ದೋಷʼ ಎನ್ನುವ ಕಾರಣವನ್ನೂ ಕೊಟ್ಟಿದೆ” ಎಂದು ಅವರು ವ್ಯಂಗ್ಯವಾಗಿ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: Viral News: 25 ವರ್ಷದ ರೈತನನ್ನು ಒಂದೇ ಏಟಿಗೆ ನುಂಗಿದ್ದ 23 ಅಡಿ ಉದ್ದದ ಹೆಬ್ಬಾವು!
ಅಜಯ್‌ ಸಿಂಗ್‌ ಧರ್ಮೇಂದ್ರ ಡಿಯೋಲ್‌ ಹೆಸರಿನವರಾದ ಸನ್ನಿ ಡಿಯೋಲ್‌ ಗುರುದಾಸ್‌ಪುರದ ಬಿಜೆಪಿ ಸಂಸದರಾಗಿದ್ದಾರೆ. ಅವರು ಬ್ಯಾಂಕ್‌ ಆಫ್‌ ಬರೋಡಾದಿಂದ ಸಾಲ ಪಡೆದಿದ್ದಾಗಿ ಹೇಳಲಾಗಿದೆ. ಕಳೆದ ಡಿಸೆಂಬರ್‌ನಿಂದ ಅವರ 55.99 ಕೋಟಿ ರೂ. ಸಾಲ ಪಾವತಿ ಬಾಕಿ ಉಳಿದುಕೊಂಡಿರುವುದಾಗಿ ಬ್ಯಾಂಕ್‌ ನೋಟಿಸ್‌ನಲ್ಲಿ ತಿಳಿಸಿತ್ತು.

ಸನ್ನಿ ಡಿಯೋಲ್‌ ನಟನೆಯ ಗದರ್‌ 2 ಸಿನಿಮಾ ಇತ್ತೀಚೆಗೆ ಬಿಡುಗಡೆಗೊಂಡು ಈಗಾಗಲೇ 370 ಕೋಟಿ ರೂ.ಗೂ ಅಧಿಕ ಹಣವನ್ನು ಬಾಚಿಕೊಂಡಿದೆ. ಅನಿಲ್‌ ಶರ್ಮಾ ನಿರ್ದೇಶನದ ಈ ಸಿನಿಮಾದಲ್ಲಿ ಆಮಿಷಾ ಪಟೇಲ್‌ ಮತ್ತು ಉತ್ಕರ್ಷ್‌ ಶರ್ಮಾ ಕೂಡ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ 2001ರ ʼಗದರ್‌: ಏಕ್‌ ಪ್ರೇಮ್‌ ಕಥಾʼ ಸಿನಿಮಾದ ಸೀಕ್ವೆಲ್‌ ಆಗಿದೆ. ಈ ಸಿನಿಮಾ ಸೋಮವಾರದಂದು 400 ಕೋಟಿ ರೂ. ಗಳಿಕೆ ದಾಟುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

Exit mobile version