ನವ ದೆಹಲಿ: ಉತ್ತರ ಪ್ರದೇಶದ ವಾರಾಣಸಿಯಲ್ಲಿ ಕಾಶಿ ವಿಶ್ವನಾಥ ದೇಗುಲಕ್ಕೆ ಹೊಂದಿಕೊಂಡಿರುವ ಜ್ಞಾನವಾಪಿ ಮಸೀದಿಯ ಕೊಳದ ಬಳಿ ಪತ್ತೆಯಾದ ಶಿವಲಿಂಗ ಪೂಜಿಸಲು ಅವಕಾಶ ಕೊಡಬೇಕು, ಪೂಜಾಸ್ಥಳಗಳ ಕಾಯಿದೆ ರದ್ದುಪಡಿಸಬೇಕು ಎಂದು ಹಿಂದುಗಳು ಸಲ್ಲಿಸಿದ್ದ ಅರ್ಜಿಯನ್ನು (Gyanvapi Masjid case) ವಿಚಾರಣೆ ಮಾಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ʼಪೂಜಾ ಸ್ಥಳ ನಿರ್ವಹಣೆʼ ಸಂಬಂಧಪಟ್ಟು ವಾರಾಣಸಿ ಜಿಲ್ಲಾ ಕೋರ್ಟ್‌ನಲ್ಲಿ ಜ್ಞಾನವಾಪಿ ಮಸೀದಿ ಸಲ್ಲಿಸಿರುವ ಅರ್ಜಿ ವಿಚಾರಣೆ ಇನ್ನೂ ಬಾಕಿ ಇದೆ. ಅದರ ತೀರ್ಪು ಬರುವವರೆಗೂ ನಾವು ಕಾಯುತ್ತೇವೆ ಎಂದು ಹೇಳಿರುವ ಸುಪ್ರೀಂಕೋರ್ಟ್, ಈ ಅರ್ಜಿ ವಿಚಾರಣೆಯನ್ನು 2022ರ ಅಕ್ಟೋಬರ್‌ನಲ್ಲಿ ಕೈಗೆತ್ತಿಕೊಳ್ಳುವುದಾಗಿ ಹೇಳಿದೆ.
ಜ್ಞಾನವಾಪಿ ಮಸೀದಿಯ ಪಶ್ಚಿಮ ಗೋಡೆಯಲ್ಲಿ ಶೃಂಗಾರ ಗೌರಿ ಮೂರ್ತಿಯಿದೆ. ದೇವಿಗೆ ವರ್ಷಕ್ಕೆ ಒಂದು ಬಾರಿ ಮಾತ್ರ ಪೂಜೆಗೆ ಅವಕಾಶ ನೀಡಲಾಗಿದೆ. ಆದರೆ ಈ ಹಿಂದಿನಂತೆ ನಿತ್ಯ ಪೂಜೆಗೆ ಅವಕಾಶ ನೀಡಬೇಕು ಎಂದು ಹಿಂದು ಸಮುದಾಯದ ಐವರು ಮಹಿಳೆಯರು ವಾರಾಣಸಿ ಕೋರ್ಟ್ ಮೆಟ್ಟಿಲೇರಿದ್ದರು. ಅದಾದ ಬಳಿಕ ಮಸೀದಿ ವಿಡಿಯೊ ಸರ್ವೆಗೆ ಆದೇಶ ನೀಡಲಾಯಿತು. ಹೀಗೆ ವಿಡಿಯೋ ಸಮೀಕ್ಷೆ ನಡೆಸುತ್ತಿದ್ದಾಗ, ಮಸೀದಿ ಬಳಿ ಕೊಳ ಖಾಲಿ ಮಾಡಿದಾಗ ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಆದರೆ ಇದು ಕಾರಂಜಿಯೇ ಹೊರತು ಶಿವಲಿಂಗವಲ್ಲ ಎಂದು ಮಸೀದಿಯ ಸಮಿತಿ ತಿಳಿಸಿದೆ. ಇದೇ ವಿಚಾರವನ್ನು ಉಲ್ಲೇಖಿಸಿ ಮತ್ತು ಮಸೀದಿ ಸಂಕೀರ್ಣವನ್ನು ಸರ್ವೇ ಮಾಡಿದ್ದನ್ನು ಪ್ರಶ್ನಿಸಿ ಸಮಿತಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯೇ ಇನ್ನೂ ವಾರಣಾಸಿ ಕೋರ್ಟ್‌ನಲ್ಲಿ ಪೂರ್ಣಗೊಂಡಿಲ್ಲ. ಈ ಸಮಿತಿ ಕೂಡ 1991ರ ಪೂಜಾ ಸ್ಥಳ ಕಾಯಿದೆ ಪ್ರಕಾರ ಇಲ್ಲಿ ಹಿಂದುಗಳಿಗೆ ಪೂಜೆ ಮಾಡಲು ಅವಕಾಶ ಕೊಡಬಾರದು ಎಂದೇ ವಾದಿಸುತ್ತಿದೆ.
ಈ ಮಧ್ಯೆ ಮತ್ತೆ ಶಿವಲಿಂಗವನ್ನೂ ಪೂಜಿಸಲು ಅವಕಾಶ ಕೊಡಿ ಎಂದು ಹಿಂದು ಭಕ್ತರ ಪರವಾಗಿ ವಕೀಲ ವಿಷ್ಣು ಶಂಕರ ಜೈನ್ ಅವರು ಸಲ್ಲಿಸಿದ್ದ ಅರ್ಜಿ ಬಗ್ಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ, ನ್ಯಾಯಮೂರ್ತಿ ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ಅಷ್ಟೊಂದು ಆಸಕ್ತಿ ವಹಿಸಿದಂತೆ ಇಲ್ಲ. ʼನಾವು ಜ್ಞಾನವಾಪಿ ಕೇಸ್‌ನ ವಿಚಾರಣೆಯನ್ನು ಈಗಾಗಲೇ ವಾರಾಣಸಿ ಜಿಲ್ಲಾ ಕೋರ್ಟ್‌ಗೆ ವರ್ಗಾಯಿಸಿದ್ದೇವೆ. ಹಾಗಿದ್ದಾಗ್ಯೂ ಯಾಕೆ ಮತ್ತೆ ಅರ್ಜೆಂಟ್ ಮಾಡುತ್ತೀರಿ?ʼ ಎಂದೂ ಪ್ರಶ್ನಿಸಿದೆ.
ಇದನ್ನೂ ಓದಿ: ಜ್ಞಾನವಾಪಿ ವಿವಾದ: ಪೂಜೆಗೆ ಅವಕಾಶ ನೀಡಬಾರದು ಎಂದು ವಾದಿಸಿದ ಮುಸ್ಲಿಂ ಅರ್ಜಿದಾರರು, ವಿಚಾರಣೆ ಮುಂದೂಡಿಕೆ