ನವ ದೆಹಲಿ: ʼನಾನೀಗ 24 ವಾರಗಳ ಗರ್ಭ ಧರಿಸಿದ್ದೇನೆ (ಐದೂವರೆ ತಿಂಗಳು). ನನಗೆ ಮದುವೆಯಾಗಿಲ್ಲ. ಹಾಗಾಗಿ ಮಗುವೂ ಬೇಡ. ದಯವಿಟ್ಟು ಗರ್ಭಪಾತಕ್ಕೆ ಅವಕಾಶ ಮಾಡಿಕೊಡಿʼ ಎಂದು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದ 25 ವರ್ಷದ ಯುವತಿಗೆ ಈಗ ಕೋರ್ಟ್‌ನಿಂದ ಒಪ್ಪಿಗೆ ಸಿಕ್ಕಿದೆ. ಈಕೆಯದ್ದೊಂದು ವಿಭಿನ್ನ ಪ್ರಕರಣ. ಸುಪ್ರೀಂಕೋರ್ಟ್‌ಗೆ ಬರುವುದಕ್ಕೂ ಮೊದಲು ಹೈಕೋರ್ಟ್ ಮೆಟ್ಟಿಲೇರಿದ್ದ ಈ ಯುವತಿಗೆ ಅಲ್ಲಿ ಗರ್ಭಪಾತಕ್ಕೆ ಒಪ್ಪಿಗೆ ಸಿಕ್ಕಿರಲಿಲ್ಲ. ವೈದ್ಯಕೀಯ ಗರ್ಭಪಾತ ನಿಯಮಾವಳಿ (ತಿದ್ದುಪಡಿ) 2021 ರ ಪ್ರಕಾರ, ಅತ್ಯಾಚಾರ ಸಂತ್ರಸ್ತೆಯರು, ಅಪ್ರಾಪ್ತೆಯರು, ಗರ್ಭಾವಸ್ಥೆಯಲ್ಲಿ ವೈವಾಹಿಕ ಸ್ಥಿತಿ ಬದಲಾದ ಮಹಿಳೆಯರು, ಮಾನಸಿಕ ಅಸ್ವಸ್ಥೆಯರು ಅಥವಾ ಭ್ರೂಣದ ವಿರೂಪತೆ ಇರುವ ಮಹಿಳೆಯರು ಮಾತ್ರ 24 ವಾರಗಳ ಗರ್ಭ ಅಂತ್ಯಗೊಳಿಸಲು ಅವಕಾಶ ನೀಡಲಾಗಿದೆ. ಆದರೆ ಈ ಯುವತಿ ಇದ್ಯಾವುದೇ ವರ್ಗಕ್ಕೂ ಸೇರಿದವಳಲ್ಲ. ಹಾಗಿದ್ದಾಗ್ಯೂ ಸುಪ್ರೀಂಕೋರ್ಟ್ ಈಗ ಅನುಮತಿ ಕೊಟ್ಟಿದೆ.
ಇಂದು ಯುವತಿಯ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪೀಠ, ʼಸಮ್ಮತಿಯ ಲೈಂಗಿಕ ಕ್ರಿಯೆಯಿಂದ ಧರಿಸಿದ ಗರ್ಭವನ್ನು 24ವಾರಗಳಲ್ಲಿ ತೆಗೆಯಲು ಈ ಮಹಿಳೆಗೆ ಒಪ್ಪಿಗೆ ಕೊಡುತ್ತೇವೆ. ಈಕೆ ಅವಿವಾಹಿತೆ. ಆದರೆ ಆಕೆಯ ಗರ್ಭವೇ ಅವಳನ್ನು ಸಂಕಷ್ಟಕ್ಕೆ ದೂಡಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅನುಮತಿ ನೀಡುತ್ತೇವೆ. ಆದರೆ ಈ ಮಹಿಳೆಗೆ ಗರ್ಭಪಾತ ಮಾಡುವುದರಿಂದ ಜೀವಕ್ಕೆ ಯಾವುದೇ ತೊಂದರೆ ಇಲ್ಲ ಎನ್ನುವುದನ್ನು ದೆಹಲಿಯ ಏಮ್ಸ್ ಆಸ್ಪತ್ರೆಯಿಂದ ರಚಿತಗೊಂಡಿರುವ ವೈದ್ಯಕೀಯ ಮಂಡಳಿ ಸ್ಪಷ್ಟಪಡಿಸಬೇಕು. ಏನೂ ತೊಂದರೆ ಇಲ್ಲವೆಂದರೆ ಮಾತ್ರ ಗರ್ಭ ಪಾತ ಮಾಡಬಹುದು ಎಂದು ಹೇಳಿದೆ. ಅಂದಹಾಗೇ, ಈ ಪ್ರಕರಣಕ್ಕೆ ಶಾಸಕಾಂಗದ ವ್ಯಾಖ್ಯಾನ ನೀಡುವಂತೆ ಅಂದರೆ 24ವಾರದ ಗರ್ಭವನ್ನು ತೆಗೆಯುವದಕ್ಕೆ ಸಂಬಂಧಪಟ್ಟಂತೆ ಇರುವ ಶಾಸನದಲ್ಲಿ ಇರುವ ನಿಯಮಗಳನ್ನು ಸರಳವಾಗಿ ಅರ್ಥೈಸಲು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರ ನೆರವು ಬೇಕು ಎಂದು ಕೇಂದ್ರಸರ್ಕಾರಕ್ಕೆ ಕೂಡ ನೋಟಿಸ್ ಕೊಟ್ಟಿದೆ.
ಇದನ್ನೂ ಓದಿ: 24ನೇ ವಾರದಲ್ಲಿ ಗರ್ಭಪಾತಕ್ಕೆ ಅವಕಾಶ ನಿರಾಕರಿಸಿದ ಹೈಕೋರ್ಟ್, ಸುಪ್ರೀಂ ಮೆಟ್ಟಿಲು ಹತ್ತಿದ ಮಹಿಳೆ
25ವರ್ಷದ ಈ ಮಹಿಳೆ ಮತ್ತು ಪುರುಷ ಪರಸ್ಪರ ಒಪ್ಪಿಗೆಯಿಂದಲೇ ಲೈಂಗಿಕ ಸಂಪರ್ಕ ಹೊಂದಿದ್ದರು. ಆತ ತಾನು ಮದುವೆಯಾಗುವುದಾಗಿಯೇ ನಂಬಿಸುತ್ತ ಬಂದಿದ್ದ. ಹಾಗಾಗಿ ಆಕೆಯೂ ಹೊಟ್ಟೆಯಲ್ಲಿ ಮಗುವಿಟ್ಟುಕೊಂಡು ಕಾಯುತ್ತಲೇ ಇದ್ದಳು. ಹೀಗೆ ಆಕೆಗೆ 18ವಾರ ಕಳೆಯಿತು. ಆಗ ಆ ವ್ಯಕ್ತಿ ಉಲ್ಟಾ ಹೊಡೆದಿದ್ದಾನೆ. ತಾನು ಮದುವೆಯಾಗುವುದಿಲ್ಲ ಎಂದು ಹೇಳಿದ. ಆದರೆ ಆ ಕ್ಷಣಕ್ಕೇ ಗರ್ಭಪಾತ ಮಾಡಿಸಲಾಗದು. ಕಾನೂನು ಪ್ರಕ್ರಿಯೆಗಳನ್ನು ನಡೆಸಲೇಬೇಕಾಗಿತ್ತು. ಹೀಗಾಗುತ್ತಲೇ ಈಗ 24ವಾರ ಕಳೆದಿದೆ.
ಯುವತಿ ಮೊದಲು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅಲ್ಲಿನ ನ್ಯಾಯಮೂರ್ತಿಗಳು ಗರ್ಭಪಾತಕ್ಕೆ ಒಪ್ಪಿಗೆ ನೀಡಿರಲಿಲ್ಲ. ವೈದ್ಯಕೀಯ ಗರ್ಭಪಾತ ನಿಯಮವನ್ನು ನಾವೂ ಮೀರುವಂತಿಲ್ಲ ಎಂದು ಹೇಳಿದ್ದರು. 24ವಾರಗಳ ಗರ್ಭವನ್ನು ತೆಗೆಸುವುದು ಎಂದರೆ ಶಿಶು ಹತ್ಯೆಗೆ ಸಮಾನವಾದ ಕೃತ್ಯ. ಅದನ್ನು ಸಾಕಲು ಬೇಕಿದ್ದರೆ ನಾನೇ ಹಣ ಕೊಡುತ್ತೇನೆ. ಆದರೆ ಗರ್ಭಪಾತಕ್ಕೆ ಮಾತ್ರ ಅನುಮತಿ ಕೊಡುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸತೀಶ್‌ಚಂದ್ರ ಶರ್ಮಾ ತಿಳಿಸಿದ್ದರು.
ಇದನ್ನೂ ಓದಿ: ಗರ್ಭಪಾತಕ್ಕೆ ಅವಕಾಶ ಕೊಡಲ್ಲ, ಬೇಕಿದ್ದರೆ ಮಗುವಿನ ಪಾಲನೆಗೆ ಹಣ ಕೊಡಲೂ ಸಿದ್ಧ ಎಂದ ದಿಲ್ಲಿ ಹೈಕೋರ್ಟ್ ಸಿಜೆ