Site icon Vistara News

Supreme Court | ನಿಮ್ಮದೇ ಅಧಿಕಾರ ನಡೆಯಬೇಕು ಎಂದಾದ್ರೆ, ಚುನಾಯಿತ ಸರ್ಕಾರ ಏಕೆ ಬೇಕು? ಕೇಂದ್ರಕ್ಕೆ ಸುಪ್ರೀಂ

ನವದೆಹಲಿ: ಕೇಂದ್ರಾಡಳಿತ ಪ್ರದೇಶವಾಗಿರುವ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಅಧಿಕಾರದ ವಿಚಾರದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕಿತ್ತಾಡಿಕೊಳ್ಳುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಇದೀಗ ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ (Supreme Court) ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಒಂದು ವೇಳೆ ದಿಲ್ಲಿಯಲ್ಲಿ ನಿಮ್ಮದೇ ಅಧಿಕಾರ ಚಲಾವಣೆ ಆಗಬೇಕು ಎಂದಾದರೆ, ಚುನಾಯಿತ ಸರ್ಕಾರವನ್ನು ರಚಿಸುವ ಅಗತ್ಯ ಏನಿದೆ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿದೆ.

ಇದನ್ನೂ ಓದಿ: Ram Setu | ರಾಮಸೇತು ರಾಷ್ಟ್ರೀಯ ಸ್ಮಾರಕ, ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ, ಪ್ರತಿಕ್ರಿಯೆ ನೀಡುವಂತೆ ಕೇಂದ್ರಕ್ಕೆ ನಿರ್ದೇಶನ

ಗುರುವಾರ ಸುಪ್ರೀಂ ಕೋರ್ಟ್‌ನಲ್ಲಿ ಈ ವಿಚಾರವಾಗಿ ಮೂರನೇ ದಿನದ ವಿಚಾರಣೆ ನಡೆದಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಎಂ. ಆರ್‌. ಶಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಮತ್ತು ಪಿ.ಎಸ್‌.ನರಸಿಂಹ ಅವರನ್ನೊಳಗೊಂಡ ನ್ಯಾಯಪೀಠವು ವಿಚಾರಣೆ ನಡೆಸಿದೆ. ಈ ವೇಳೆ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು, “ದಿಲ್ಲಿಯು ರಾಷ್ಟ್ರ ರಾಜಧಾನಿ ಆಗಿರುವ ಕಾರಣ ಅದಕ್ಕೆ ವಿಶಿಷ್ಠ ಸ್ಥಾನಮಾನವಿದೆ. ಎಲ್ಲ ರಾಜ್ಯದವರೂ ಇಲ್ಲಿರುವುದರಿಂದ ಹಲವು ವಿಚಾರಗಳಲ್ಲಿ ಕೇಂದ್ರ ಸರ್ಕಾರದ ಆಡಳಿತ ಅವಶ್ಯಕವಾಗಿದೆ” ಎಂದು ನ್ಯಾಯಪೀಠದ ಮುಂದೆ ಹೇಳಿದ್ದಾರೆ.

ಅದಕ್ಕೆ ಪ್ರತಿಯಾಗಿ ನ್ಯಾಯಪೀಠವು, “ಎಲ್ಲ ವಿಚಾರದಲ್ಲಿ ನಿಮ್ಮದೇ ಆಡಳಿತ ನಡೆಯಬೇಕು ಎನ್ನುವುದಾದರೆ ರಾಜ್ಯ ಸರ್ಕಾರದ ಅವಶ್ಯಕತೆಯೇನು? ಯು.ಪಿ.ಎಸ್‌.ಸಿ ಪರೀಕ್ಷೆಗಳ ಮೂಲಕ ನ್ಯಾಯಬದ್ಧವಾಗಿ ಅಧಿಕಾರಿಗಳನ್ನು ನೇಮಿಸಲಾಗುತ್ತದೆ. ಆದರೆ ಯಾವುದೇ ಅಧಿಕಾರಿ ಸರಿಯಾದ ರೀತಿಯಲ್ಲಿ ಕೆಲಸ ಮಾಡಲಿಲ್ಲವೆಂದಾದಲ್ಲಿ ಅವರನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸುವುದು ಕೇಂದ್ರ ಸರ್ಕಾರದ ಕೈಯಲ್ಲಿದೆ. ಆದರೆ ಅವರನ್ನು ಯಾವ ಸ್ಥಳಕ್ಕೆ ವರ್ಗಾಯಿಸಬೇಕು ಎನ್ನುವುದನ್ನು ನಿರ್ಧರಿಸುವ ಯಾವುದೇ ಹಕ್ಕು ರಾಜ್ಯ ಸರ್ಕಾರಕ್ಕೆ ಇರುವುದಿಲ್ಲವೇ?” ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: Delhi MCD Ruckus | ದೆಹಲಿಯಲ್ಲಿ ಬೀದಿಗೆ ಬಂದ ಬಿಜೆಪಿ, ಆಪ್‌ ಜಗಳ, ಮತ ಹಾಕಿದ ಜನರಿಗೇ ನಾಚಿಕೆಯಾಗುವಂತೆ ಕಿತ್ತಾಟ

ಎಲ್ಲ ವಿಚಾರಗಳಲ್ಲೂ ಕೇಂದ್ರ ಮಧ್ಯ ಪ್ರವೇಶ ಮಾಡುವುದು ಸರಿಯಲ್ಲ. ಯಾವುದೇ ಅಧಿಕಾರಿಯ ಕ್ರಿಯಾತ್ಮಕ ನಿಯಂತ್ರಣ ಎಂದಿಗೂ ಸ್ಥಳೀಯ ಆಡಳಿತದ್ದೇ ಆಗಿರುತ್ತದೆ ಎಂದು ನ್ಯಾಯಪೀಠ ತಿಳಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಜ.17ರಂದು ನಡೆಯಲಿದೆ.

Exit mobile version