Site icon Vistara News

Hijab Verdict | ಕರಾವಳಿಯಲ್ಲಿ ಹುಟ್ಟಿ, ರಾಷ್ಟ್ರ ವ್ಯಾಪಿಸಿದ್ದ ಹಿಜಾಬ್​ ವಿವಾದಕ್ಕಿಂದು ಸುಪ್ರೀಂ ಅಂತಿಮ ತೀರ್ಪು; ಹಿನ್ನೆಲೆ ಏನು?

Will constitute three judge bench soon, says Supreme Court CJI DY Chandrachud

ಬೆಂಗಳೂರು: ಕರ್ನಾಟಕದ ಕರಾವಳಿ ಉಡುಪಿಯ ಕಾಲೇಜೊಂದರಲ್ಲಿ ಶುರುವಾದ ಹಿಜಾಬ್​ ವಿವಾದ ರಾಷ್ಟ್ರವ್ಯಾಪಿಯಾಗಿ-ಅಂತಾರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಯಾಗಿ, ಅಂತಿಮವಾಗಿ ಸುಪ್ರೀಂಕೋರ್ಟ್​ನವರೆಗೆ ಬಂದುನಿಂತಿದೆ. ಹಿಜಾಬ್​​ ನಿಷೇಧ/ಅವಕಾಶಕ್ಕೆ ಸಂಬಂಧಪಟ್ಟಂತೆ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಜಸ್ಟಿಸ್ ಹೇಮಂತ್ ಗುಪ್ತಾ ಮತ್ತು ಸುಧಾಂಶ ಧುಲಿಯಾ ಅವರಿದ್ದ ಪೀಠ ಈ ಅರ್ಜಿಗಳ ವಿಚಾರಣೆ ನಡೆಸಿದೆ. ಇಂದು ಅದರ ತೀರ್ಪು ಕೂಡ ಹೊರಬೀಳಲಿದ್ದು, ಕ್ಷಣಗಣನೆ ಪ್ರಾರಂಭವಾಗಿದೆ. ದೇಶಾದ್ಯಂತ ಕುತೂಹಲ ಮೂಡಿದೆ. ಹಾಗೇ, ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆಯನ್ನೂ ಕಲ್ಪಿಸಲಾಗಿದೆ.

ಮೊದಲು ಕುಂದಾಪುರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್​ ಧರಿಸಿ ಬರುವುದಕ್ಕೆ ವಿರೋಧ ವ್ಯಕ್ತವಾಯಿತು. ಬೈಂದೂರು ಕಾಲೇಜಿನಲ್ಲಿ ಹಿಜಾಬ್​ ಧರಿಸಿ ಬರುವ ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ ಪ್ರತಿಭಟನಾ ರೂಪಕವಾಗಿ ಹಿಂದೂ ವಿದ್ಯಾರ್ಥಿಗಳು ಕೇಸರಿಶಾಲು ಧರಿಸಿ ಬರಲು ಪ್ರಾರಂಭ ಮಾಡಿದರು. ಹಿಜಾಬ್​-ಕೇಸರಿಶಾಲು ಸಂಘರ್ಷದ ಮಧ್ಯೆಯೇ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಹೈಕೋರ್ಟ್​ಗೆ ಮನವಿ ಸಲ್ಲಿಸಿ ’ನಮ್ಮ ಸಮುದಾಯದಲ್ಲಿ ಹಿಜಾಬ್​ ಧರಿಸುವುದು ಅತ್ಯಂತ ಮಹತ್ವವಾದದ್ದು, ಹಾಗಾಗಿ ಅನುಮತಿ ಕೊಡಬೇಕು’ ಎಂದಳು. ಆಕೆಯ ಈ ಮನವಿಗೆ ಹಲವರು ಬೆಂಬಲವನ್ನೂ ಸೂಚಿಸಿದರು. ಅಲ್ಲಿಂದ ಕಾನೂನು ಹೋರಾಟ ಶುರುವಾಯಿತು.

ಹೈಕೋರ್ಟ್ ತೀರ್ಪು ಏನು?
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್​ ಧರಿಸಬಾರದು ಎಂದೇ ಕರ್ನಾಟಕ ಹೈಕೋರ್ಟ್​ ತೀರ್ಪು ನೀಡಿತ್ತು. ಹಿಜಾಬ್​ ಎಂಬುದು ಇಸ್ಲಾಂನಲ್ಲಿ ಅತ್ಯಂತ ಮಹತ್ವದ, ಕಡ್ಡಾಯವಾದ ಸಂಗತಿಯೇನೂ ಅಲ್ಲ. ಹಾಗಾಗಿ ವಿದ್ಯಾರ್ಥಿಗಳು ಹಿಜಾಬ್​ ಧರಿಸಿ ಶಾಲಾ-ಕಾಲೇಜಿಗೆ ಬರುವುದು ತರವಲ್ಲ. ಆಯಾ ಶಿಕ್ಷಣ ಸಂಸ್ಥೆಗಳು ನಿಗದಿಪಡಿಸಿದ ಸಮವಸ್ತ್ರ ಧರಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಮಾರ್ಚ್​ 15ರಂದು​ ತೀರ್ಪು ನೀಡಿತ್ತು. ಈ ತೀರ್ಪನ್ನು ಮರುಪ್ರಶ್ನಿಸಿ ಅರ್ಜಿದಾರರು ಸುಪ್ರೀಂಕೋರ್ಟ್​ಗೆ ಸುಮಾರು 23 ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.

ಮುಸ್ಲಿಂ ವಿದ್ಯಾರ್ಥಿನಿಯರ ಪಟ್ಟು
ಹಿಜಾಬ್​ ಸಂಘರ್ಷ ಕರಾವಳಿಯಲ್ಲಂತೂ ಕಿಚ್ಚು ಹಬ್ಬಿಸಿತ್ತು. ವಿದ್ಯಾರ್ಥಿನಿಯರಂತೂ ಹಿಜಾಬ್​ ಇಲ್ಲದೆ ತರಗತಿ ಪ್ರವೇಶ ಮಾಡುವುದಿಲ್ಲ ಎಂದು ಕಾಲೇಜು ಅಂಗಳದಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದರು. ಪರೀಕ್ಷೆ ಬರೆಯದೆ ಹೋದವರೂ ಇದ್ದಾರೆ. ಇನ್ನು ಹಿಜಾಬ್​ ಹೆಸರಿನಲ್ಲಿ ರಾಜ್ಯಾದ್ಯಂತ ಹಲವು ಕಡೆಗಳಲ್ಲಿ ಗಲಾಟೆ, ಅಹಿತಕರ ಘಟನೆಗಳೂ ನಡೆದಿದ್ದವು. ಕೆಲವು ವಿದ್ಯಾರ್ಥಿಗಳು ಅಮಾನತುಗೊಂಡಿದ್ದರು. ಅಂತಿಮವಾಗಿ ಕರ್ನಾಟಕದಲ್ಲಿ ನಡೆದ ಹಿಜಾಬ್​ ಗಲಾಟೆಯಲ್ಲಿ ನಿಷೇಧಿತ ಪಿಎಫ್​ಐ ಕೈವಾಡ ಇರುವುದೂ ದೃಢಪಟ್ಟಿತ್ತು.

ಶೈಕ್ಷಣಿಕ ಕ್ಷೇತ್ರದಲ್ಲಿ ಹುಟ್ಟಿದ ಹಿಜಾಬ್​ ಸಂಘರ್ಷ ರಾಜಕೀಯ ನಾಯಕರ ನಡುವಿನ ವಾಗ್ಯುದ್ಧಕ್ಕೂ ಕಾರಣವಾಗಿತ್ತು. ಬಿಜೆಪಿಗರು ಹಿಜಾಬ್​ ನಿಷೇಧಕ್ಕೆ ಆಗ್ರಹ ಮಾಡುತ್ತ ಬಂದರು ಮತ್ತು ಕಾಂಗ್ರೆಸ್​​ನವರು ಹಿಜಾಬ್​ಗೆ ಅವಕಾಶ ಕೊಟ್ಟರೆ ಏನು ಸಮಸ್ಯೆ ಎಂದು ಪ್ರಶ್ನಿಸುವ ಮೂಲಕ, ಹಿಜಾಬ್ ಇರಲಿ ಎಂದಿದ್ದರು. ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರ ಶಾಸಕಿ ಖನೀಜ್ ಫಾತಿಮಾ ಅವರಂತೂ ವಿಧಾನಸಭೆಗೂ ಹಿಜಾಬ್ ಧರಿಸಿಯೇ ಬಂದು ಕುಳಿತಿದ್ದರು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​, ಎಚ್​.ಡಿ.ಕುಮಾರಸ್ವಾಮಿ, ಕೊನೆಗೆ ರಾಹುಲ್​ ಗಾಂಧಿಯೂ ಹಿಜಾಬ್​ ಪರವಾಗಿಯೇ ಮಾತಾಡಿದ್ದರು. ರಾಷ್ಟ್ರಮಟ್ಟದ ಹಲವು ನಾಯಕರು ಹಿಜಾಬ್​ ಇರಬೇಕು, ಬಿಜೆಪಿ ಸರ್ಕಾರ ಮುಸ್ಲಿಂ ಹುಡುಗಿಯರ ಹಕ್ಕು ಕಿತ್ತುಕೊಳ್ಳುತ್ತಿದೆ, ಮುಸ್ಲಿಂ ಯುವತಿಯರ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂಬಿತ್ಯಾದಿ ಆರೋಪಗಳನ್ನು ದೇಶದ ಹಲವು ನಾಯಕರು ಮಾಡಿದ್ದರು.

ಕೂಡಲೇ ದಿನಾಂಕ ನಿಗದಿ ಮಾಡದ ಸುಪ್ರೀಂಕೋರ್ಟ್​
ಅರ್ಜಿದಾರರಾದ ನಿಬಾ ನಾಜ್‌ ಪರವಾಗಿ ಹಿರಿಯ ವಕೀಲರಾದ ಸಂಜಯ್‌ ಹೆಗ್ಡೆ ಮತ್ತು ಐಶತ್‌ ಶಿಫಾ ಅವರ ಪರವಾಗಿ ದೇವದತ್ತ ಕಾಮತ್‌ ಅವರು ಮಾರ್ಚ್‌ ೨೬ರಂದು ಮನವಿ ಮಾಡಿದ್ದರೂ ಅಂದಿನ ಸಿಜೆಐ ಎನ್​.ವಿ.ರಮಣ ಅವರು ಯಾವುದೇ ದಿನಾಂಕ ನಿಗದಿಗೆ ಮನಸು ಮಾಡಿರಲಿಲ್ಲ. ಮಾರ್ಚ್‌ ೨೪ರಂದು ಮತ್ತೊಮ್ಮೆ ಮನವಿ ಸಲ್ಲಿಸಿದಾಗ ʻಹಿಜಾಬ್‌ ನಿಷೇಧಕ್ಕೂ ಶಾಲಾ ಪರೀಕ್ಷೆಗಳಿಗೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಈ ವಿಚಾರದಲ್ಲಿ ಅವಸರ ಮಾಡಬೇಡಿʼ ಎಂದು ಹೇಳಿದ್ದರು. ಅದೇ ವೇಳೆ ಮಧ್ಯಪ್ರವೇಶ ಮಾಡಿದ ಕರ್ನಾಟಕ ಸರಕಾರದ ವಾದಿಸುವ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ತುರ್ತು ವಿಚಾರಣೆಯ ಅವಶ್ಯಕತೆ ಇಲ್ಲ ಎಂದಿದ್ದರು.

ಏಪ್ರಿಲ್‌ ೨೬ರಂದು ಸಿಜೆಐ ಅವರ ಮುಂದೆ ಮತ್ತೊಮ್ಮೆ ಮನವಿ ಮಾಡಿದಾಗ ವಿಚಾರಣೆ ದಿನಾಂಕ ನಿಗದಿ ಮಾಡುವ ಬಗ್ಗೆ ಪರಿಗಣಿಸಲಾಗುವುದು ಎಂದು ಹೇಳಿದ್ದರು. ಆದರೆ ಯಾವುದೇ ಮುನ್ನಡೆ ಕಾಣಲಿಲ್ಲ. ಈ ನಡುವೆ, ಮೇ ೨೩ರಿಂದ ಜುಲೈ ೧೦ರವರೆಗೆ ನ್ಯಾಯಾಲಯಕ್ಕೆ ಬೇಸಿಗೆ ರಜೆ ಇತ್ತು. ಈ ವೇಳೆ ತುರ್ತು ಪ್ರಕರಣಗಳನ್ನು ಮಾತ್ರ ಪರಿಗಣಿಸಲಾಗಿತ್ತು. ನ್ಯಾಯಾಲಯದ ಬೇಸಿಗೆ ರಜೆ ಕಳೆದು ಮರು ಆರಂಭವಾದಾಗ ವಕೀಲರಾದ ಪ್ರಶಾಂತ್‌ ಭೂಷಣ್‌ ಅವರು ಮತ್ತೊಮ್ಮೆ ಅಂದಿನ ಮುಖ್ಯ ನ್ಯಾಯಾಧೀಶ ಎನ್‌.ವಿ. ರಮಣ ಅವರಲ್ಲಿ ವಿಚಾರ ಪ್ರಸ್ತಾಪಿಸಿದಾಗ ಜುಲೈ ಅಂತ್ಯಕ್ಕೆ ವಿಚಾರಣೆ ನಿಗದಿ ಮಾಡುವುದಾಗಿ ಹೇಳಿದ್ದರು.

ಇದನ್ನೂ ಓದಿ: NIA Raid | ಹಿಜಾಬ್‌ ಗಲಾಟೆಯಿಂದ ಹಿಡಿದು ಆರ್‌ಎಸ್‌ಎಸ್‌ ಪ್ರಮುಖರ ಹತ್ಯೆವರೆಗೆ ಪಿಎಫ್‌ಐ ವಿರುದ್ಧ ಹಲವು ಆರೋ

Exit mobile version