ನವ ದೆಹಲಿ: ತಮ್ಮನ್ನು ಪಲಾಯನಗೈದ ಆರ್ಥಿಕ ಅಪರಾಧಿ ಎಂದು ಮುಂಬಯಿ ವಿಶೇಷ ನ್ಯಾಯಾಲಯ ಘೋಷಿಸಿದ್ದನ್ನು ಪ್ರಶ್ನಿಸಿ ಉದ್ಯಮಿ ವಿಜಯ್ ಮಲ್ಯ (Vijay Mallya) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಮ್ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಈ ಪ್ರಕರಣ ವಿಚಾರಣೆಗೆ ಅರ್ಜಿದಾರರು ಆಸಕ್ತಿ ವಹಿಸುತ್ತಿಲ್ಲ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಹಾಗೂ ರಾಜೇಶ್ ಬಿಂದಾಲ್ ಅವರಿದ್ದ ಪೀಠ ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿತು.
ಶುಕ್ರವಾರನ್ಯಾಯಾಲಯಕ್ಕೆ ಹಾಜರಾದ ವಿಜಯ್ ಮಲ್ಯ ಅವರ ಕಾನೂನು ತಂಡ, ನಮ್ಮ ಕಕ್ಷಿದಾರ ಈ ಪ್ರಕರಣದ ಕುರಿತು ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಹಾಗೂ ಸಂಪರ್ಕಿಸುತ್ತಿಲ್ಲ ಎಂದು ಹೇಳಿಕೆ ನೀಡಿತು. ಹೀಗಾಗಿ ಅರ್ಜಿದಾರರರು ಪ್ರಕರಣವನ್ನು ಮುಂದುವರಿಸಲು ಆಸಕ್ತಿ ತೋರುತ್ತಿಲ್ಲ. (non prosecution) ಎಂದು ನಿರ್ಧರಿಸಿದ ಸುಪ್ರೀಮ್ಕೋರ್ಟ್ ಅರ್ಜಿ ವಜಾಗೊಳಿಸಿತು.
ಇದನ್ನೂ ಓದಿ : Vijay Mallya | ಸೆಟ್ಟೇರಲಿದೆ ವಿಜಯ್ ಮಲ್ಯ ವಂಚನೆ ಕಥೆ ಫೈಲ್ ನಂ 323: ಉದ್ಯಮಿ ಪಾತ್ರಧಾರಿ ಯಾರು?
ಬ್ಯಾಂಕ್ಗಳಿಂದ 9000 ಕೋಟಿ ರೂಪಾಯಿ ಸಾಲ ಪಡೆದು ಮರುಪಾವತಿ ಮಾಡದೇ ಪರಾರಿಯಾಗಿರುವ ವಿಜಯ್ ಮಲ್ಯ ಬ್ರಿಟನ್ನಲ್ಲಿ ನೆಲೆಸಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಸಿದ್ದ ಮುಂಬಯಿಯ ವಿಶೇಷ ನ್ಯಾಯಾಲಯ ವಿಜಯ್ ಮಲ್ಯ ಪಲಾಯನಗೈದಿರುವ ಆರ್ಥಿಕ ಅಪರಾಧಿ ಎಂದು ಪ್ರಕಟಿಸಿತ್ತು. ಕೋರ್ಟ್ ತೀರ್ಪಿನಿಂದಾಗಿ ಮಲ್ಯಗೆ ಸೇರಿರುವ ಆಸ್ತಿಗಳನ್ನು ಜಪ್ತಿ ಮಾಡುವ ಅವಕಾಶ ಸಾಲ ಕೊಟ್ಟಿರುವ ಸಂಸ್ಥೆಗಳಿಗೆ ದೊರಕಿತ್ತು. ಇದರ ವಿರುದ್ಧ ವಿಜಯ್ ಮಲ್ಯ ಅವರ ಕಾನೂನು ತಂಡ ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದ್ದರು.