ನವ ದೆಹಲಿ: ಹೈದರ್‌ಪೋರಾ ಎನ್‌ಕೌಂಟರ್(Hyderpora Encounter)ನಲ್ಲಿ ಮೃತಪಟ್ಟ ವ್ಯಕ್ತಿಯ ದೇಹವನ್ನು ಹೊರ ತೆಗೆದು, ಮತ್ತೊಮ್ಮೆ ಸಮಾಧಿ ಮಾಡಲು ಅವಕಾಶ ಕೊಡಬೇಕು ಎನ್ನುವ ಮನವಿಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಎನ್‌ಕೌಂಟರ್ ನಡೆದಿತ್ತು. ಈ ವೇಳೆ, ಆಮೀರ್ ಲತೀಫ್ ಮ್ಯಾಗ್ರೆ ಸೇರಿದಂತೆ ನಾಲ್ವರು ಮೃತರಾಗಿದ್ದರು.
ಜಸ್ಟೀಸ್ ಸೂರ್ಯಕಾಂತ್ ಮತ್ತು ಜಸ್ಟೀಸ್ ಪರ್ದಿವಾಲಾ ಅವರಿದ್ದ ಪೀಠವು, ಕಣಿವೆ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಧಾರ್ಮಿಕ ವಿಧಿವಿಧಾನಗಳ ಅನುಸಾರವೇ ಅಂತ್ಯಕ್ರಿಯೆ ನಡೆಸಿದ್ದಾರೆ. ಹಾಗಾಗಿ, ಮತ್ತೆ ಶವನ್ನು ಹೊರತೆಗೆಯಬೇಕಾದ ಅಗತ್ಯವಿಲ್ಲ ಎಂದು ಹೇಳಿತು. ಇದೇ ವೇಳೆ, ಸಮಾಧಿ ಮಾಡಿದ ಸ್ಥಳದಲ್ಲಿ ಕುಟುಂಬಸ್ಥರಿಗೆ ಪ್ರಾರ್ಥನೆ ಸಲ್ಲಿಸಲು ಮತ್ತು 5 ಲಕ್ಷ ರೂ. ಪರಿಹಾರ ನೀಡಬೇಕು ಎಂಬ ಜಮ್ಮು ಮತ್ತು ಕಾಶ್ಮೀರ್ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
2021ರ ನವೆಂಬರ್ 15ರಂದು ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರನ್ನು ಹತ್ಯೆ ಮಾಡಲಾಗಿತ್ತು. ಇವರೆಲ್ಲರೂ ಉಗ್ರರಾಗಿದ್ದು, ಶವಗಳನ್ನು 80 ಕಿ.ಮೀ. ದೂರದ ಕುಪ್ವಾರಾದಲ್ಲಿ ಸಮಾಧಿ ಮಾಡಲಾಗಿತ್ತು. ಪೊಲೀಸರ ಈ ಹೇಳಿಕೆಯನ್ನು ಸಾವಿಗೀಡಾದ ಕುಟುಂಬಸ್ಥರು ನಂಬಲಿಲ್ಲ. ಜತೆಗೆ, ಸಾರ್ವಜನಿಕ ಪ್ರತಿಭಟನೆ ಹೆಚ್ಚಾದ ಬಳಿಕ, ಜಮ್ಮು ಮತ್ತು ಕಾಶ್ಮೀರ ಆಡಳಿತವು, ನಾಲ್ವರ ಪೈಕಿ ಅಲ್ತಾಫ್ ಅಹ್ಮದ್ ಭಟ್ ಮತ್ತು ಮುದಾಸಿರ್ ಗುಲ್ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿತ್ತು. ಅದೇ ರೀತಿ, ಮ್ಯಾಗ್ರೆ ಕುಟುಂಬ ಕೂಡ, ಶವನ್ನು ತಮಗೆ ಒಪ್ಪಿಸಲು ಸೂಚಿಸುವಂತೆ ಹೈಕೋರ್ಟ್ ಮೆಟ್ಟಿಲೇರಿತ್ತು.
ಏತನ್ಮಧ್ಯೆ, ಈ ಪ್ರಕರಣ ಸಂಬಂಧ ಜಮ್ಮು ಮತ್ತು ಕಾಶ್ಮೀರ್ ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿದ್ದ ತೀರ್ಪು ಪ್ರಶ್ನಿಸಿ ಸರ್ಕಾರವು ದ್ವಿಸದಸ್ಯಕ್ಕೆ ಪೀಠಕ್ಕೆ ಮನವಿ ಸಲ್ಲಿಸಿತ್ತು. ಅಲ್ಲದೇ, ಶವವನ್ನು ಹೊರೆತಗೆಯಲು ನಿರಾಕರಿಸಿತ್ತು. ಸರ್ಕಾರದ ಈ ನಿರ್ಧಾರ ಪ್ರಶ್ನಿಸಿ, ಮ್ಯಾಗ್ರೆ ಕುಟುಂಬವು ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.