Site icon Vistara News

ಚೀತಾಗಳನ್ನು ರಾಜಸ್ಥಾನದಲ್ಲಿ ಬಿಡಿ, ಪ್ರತಿಪಕ್ಷದ ಆಡಳಿತ ಇದೆ ಎಂದು ನಿರಾಕರಿಸಬೇಡಿ; ಸುಪ್ರೀಂಕೋರ್ಟ್ ಸೂಚನೆ

Supreme Court expresses concerns over Cheetah Deaths In Madhya Pradesh

#image_title

ಭಾರತದಲ್ಲಿ ಚೀತಾ ಸಂತತಿಯನ್ನು ಪುನರುಜ್ಜೀವನಗೊಳಿಸುವ ಯೋಜನೆಯ ಭಾಗವಾಗಿ ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ಚೀತಾಗಳನ್ನು ತಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗಿದೆ. ಮೊದಲ ಹಂತದಲ್ಲಿ ನಮೀಬಿಯಾದಿಂದ 8 ಚೀತಾಗಳು, ಎರಡನೇ ಹಂತದಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ತರಲಾಗಿತ್ತು. ಆದರೆ ಈ ವರ್ಷದ ಮಾರ್ಚ್​ ತಿಂಗಳಿಂದ ಒಟ್ಟು ಮೂರು ಚೀತಾಗಳು ಸಾವನ್ನಪ್ಪಿವೆ (Cheetah Deaths). ಎರಡು ಚೀತಾಗಳು ಅನಾರೋಗ್ಯದಿಂದ ಮೃತಪಟ್ಟಿದ್ದರೆ, ಇನ್ನೊಂದು ಹೆಣ್ಣು ಚೀತಾ ಉಳಿದ ಚೀತಾಗಳೊಂದಿಗೆ ಕಾದಾಟ ಮಾಡಿ, ಗಾಯಗೊಂಡು ಮೃತಪಟ್ಟಿದ್ದಾಗಿ ವರದಿಯಾಗಿದೆ. ಹೀಗೆ ಚೀತಾಗಳು ಸಾಯುತ್ತಿರುವ ಬಗ್ಗೆ ಈಗ ಸುಪ್ರೀಂಕೋರ್ಟ್​ ಕಳವಳ ವ್ಯಕ್ತಪಡಿಸಿದೆ.

ಚೀತಾಗಳು ದಕ್ಷಿಣ ಆಫ್ರಿಕಾ/ನಮೀಬಿಯಾದಿಂದ ಭಾರತಕ್ಕೆ ಬರುವ ಸಂದರ್ಭದಲ್ಲೇ ಹಲವು ಪ್ರಾಣಿತಜ್ಞರು ಆತಂಕ ವ್ಯಕ್ತಪಡಿಸಿದ್ದರು. ಅಲ್ಲಿನ ಹವಾಮಾನ/ಆಹಾರ ಕ್ರಮಕ್ಕೆ ಒಗ್ಗಿ ಬೆಳೆದಿರುವ ಚೀತಾಗಳು ಭಾರತದ ವಾತಾವರಣಕ್ಕೆ ಹೊಂದಿಕೊಳ್ಳುವುದಿಲ್ಲ. ಇಲ್ಲಿ ಅವುಗಳ ಜೀವಕ್ಕೆ ಅಪಾಯ ಖಂಡಿತವಾಗಿ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಅದು ನಿಜವಾಗುವಂತೆ ಈಗ ಎರಡು ಚೀತಾಗಳು ಅನಾರೋಗ್ಯದಿಂದ/ ಆಹಾರ-ನೀರು ತ್ಯಜಿಸಿ ಸಾವನ್ನಪ್ಪಿವೆ. ಅದೇ ವಿಷಯವನ್ನು ಪ್ರಸ್ತಾಪಿಸಿದ ಸುಪ್ರೀಂಕೋರ್ಟ್​ ಈಗ ಚೀತಾಗಳನ್ನು ಮಧ್ಯಪ್ರದೇಶದ ಕುನೋದಿಂದ ರಾಜಸ್ಥಾನಕ್ಕೆ ಸ್ಥಳಾಂತರ ಮಾಡುವಂತೆ ಸುಪ್ರೀಂಕೋರ್ಟ್​ಗೆ ಸಲಹೆ ನೀಡಿದೆ. ಚೀತಾಗಳ ಆರೋಗ್ಯದ ವಿಷಯದಲ್ಲಿ ಯಾವುದೇ ರಾಜಕೀಯ ಹಿತಾಸಕ್ತಿಗಳನ್ನು ಪರಿಗಣಿಸಬೇಡಿ. ಅವುಗಳನ್ನು ಕೂಡಲೇ ಸ್ಥಳಾಂತರ ಮಾಡಿ ಎಂದು ಕೇಂದ್ರಕ್ಕೆ ಹೇಳಿದೆ.

ಚೀತಾಗಳ ಸಾವಿನ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು, ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನ ದೊಡ್ಡ ಸಂಖ್ಯೆಯಲ್ಲಿ ಚೀತಾಗಳು ಇರಲು ಸೂಕ್ತ ಪ್ರದೇಶವಲ್ಲ ಎಂಬ ಅಭಿಪ್ರಾಯದಲ್ಲಿ ಪ್ರಾಣಿತಜ್ಞರು ಬರೆದ ಲೇಖನಗಳನ್ನು ಗಮನಿಸಿದ ಸುಪ್ರೀಂಕೋರ್ಟ್​​ನ ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಸಂಜಯ್ ಕರೋಲ್ ಅವರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ‘ಎರಡು ತಿಂಗಳ ಒಳಗೆ ಮೂರು ಚೀತಾಗಳ ಸಾವನ್ನು ಗಂಭೀರವಾಗಿ ಪರಿಗಣಿಸಬೇಕು. ಇದು ಕಳವಳಕಾರಿಯಾಗಿದೆ. ಹೆಚ್ಚಿನ ಸಂಖ್ಯೆಯ ಚೀತಾಗಳನ್ನು ಇರಿಸಲು ಕುನೋ ಸೂಕ್ತ ಸ್ಥಳವಲ್ಲ ಎಂದು ಹಲವು ಪ್ರಾಣಿತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೀವ್ಯಾಕೆ ರಾಜಸ್ಥಾನದಲ್ಲಿ ಒಳ್ಳೆ ಸ್ಥಳವನ್ನು ಹುಡುಕಬಾರದು’ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಪ್ರಶ್ನೆ ಮಾಡಿದೆ. ಅಷ್ಟೇ ಅಲ್ಲ ‘ರಾಜಸ್ಥಾನದಲ್ಲಿ ನಿಮ್ಮ ಪ್ರತಿಪಕ್ಷದ ಆಡಳಿತವಿದೆ ಎಂಬ ಒಂದೇ ಕಾರಣಕ್ಕೆ ಚೀತಾವನ್ನು ಇಡಲು ಆ ರಾಜ್ಯವನ್ನು ಪರಿಗಣಿಸದೆ ಇರಬೇಡಿ’ ಎಂದೂ ತೀಕ್ಷ್ಣವಾಗಿ ಹೇಳಿದೆ.

ಇದನ್ನೂ ಓದಿ: Cheetah Dies: ದಕ್ಷಿಣ ಆಫ್ರಿಕಾದಿಂದ ಕುನೊಕ್ಕೆ ತಂದಿದ್ದ ಚೀತಾಗಳ ಮಧ್ಯೆ ಕಾಳಗ; ಹೆಣ್ಣು ಚೀತಾ ದಕ್ಷಾ ಸಾವು

ಇನ್ನು ಸುಪ್ರೀಂ ಕೋರ್ಟ್​ಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ‘ಚೀತಾಗಳ ಸಾವಿಗೆ ನೈಜ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಲು ವಿಶೇಷ ಟಾಸ್ಕ್ ಫೋರ್ಸ್​ ರಚನೆಯಾಗಿದೆ. ಈ ತಂಡ ಪರಿಶೀಲನೆ ನಡೆಸುತ್ತಿದೆ. ಮಧ್ಯಪ್ರದೇಶದಿಂದ ಚೀತಾಗಳನ್ನು ಇನ್ನಿತರ ಅಭಯಾರಣ್ಯಗಳಿಗೆ ಸ್ಥಳಾಂತರ ಮಾಡುವ ಸಂಬಂಧ ಚರ್ಚೆಗಳೂ ನಡೆಯುತ್ತಿವೆ’ ಎಂದು ತಿಳಿಸಿದ್ದಾರೆ. ಸುಪ್ರೀಂಕೋರ್ಟ್​ನ ಹಸಿರು ಪೀಠದ ಮುಖ್ಯಸ್ಥರಾಗಿರುವ ನ್ಯಾ.ಗವಾಯಿ ಅವರು ಚೀತಾಗಳ ಅನಾರೋಗ್ಯ, ಸಾವಿನ ಬಗ್ಗೆ ತೀವ್ರ ಕಳಕಳಿ ವ್ಯಕ್ತಪಡಿಸಿದ್ದಾರೆ. ಚೀತಾಗಳ ವಾಸಕ್ಕೆ ಸೂಕ್ತವಾದ ಸ್ಥಳಗಳನ್ನು ಆಯ್ಕೆ ಮಾಡಿ, ಮಹಾರಾಷ್ಟ್ರದಲ್ಲಾದರೂ ಬಿಡಿ ಎಂದಿದ್ದಾರೆ.

Exit mobile version