ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಎ.ಎಂ.ಅಹ್ಮದಿ (A M Ahmadi) ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಎ.ಎಂ.ಅಹ್ಮದಿ ಅವರಿಗೆ ಹುಝೆಫಾ ಅಹ್ಮದಿ ಮತ್ತು ತಸ್ನೀಮ್ ಅಹ್ಮದಿ ಎಂಬ ಇಬ್ಬರು ಮಕ್ಕಳಿದ್ದು, ಇಬ್ಬರೂ ವಕೀಲರೇ ಆಗಿದ್ದಾರೆ.
ಎ.ಎಂ.ಅಹ್ಮದಿ ಅವರು 1932ರ ಮಾರ್ಚ್ 25ರಂದು ಸೂರತ್ನಲ್ಲಿ ಜನಿಸಿದ್ದರು. 1964ರಲ್ಲಿ ಅಹ್ಮದಾಬಾದ್ನ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶನಾಗಿ ನೇಮಕಗೊಂಡರು. ಬಳಿಕ ಗುಜರಾತ್ ಕಾನೂನು ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು. 1976ರಲ್ಲಿ ಗುಜರಾತ್ ಹೈಕೋರ್ಟ್ನ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 1988ರಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಇವರು 1994ರಿಂದ 1997ರವರೆಗೆ, ಸುಪ್ರೀಂಕೋರ್ಟ್ನ 26ನೇ ಮುಖ್ಯ ನ್ಯಾಯಮೂರ್ತಿಯಾಗಿದ್ದರು. 10 ವರ್ಷಗಳ ಕಾಲ ಸುಪ್ರೀಂಕೋರ್ಟ್ನಲ್ಲಿ ಕಾರ್ಯನಿರ್ವಹಿಸಿದರು.
ಇದನ್ನೂ ಓದಿ: Ex-CJI UU Lalit | ನಿವೃತ್ತ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್‌ಗೆ ಈಗಲೂ 28 ಸಹಾಯಕ ಸಿಬ್ಬಂದಿ
ಸುಪ್ರೀಂಕೋರ್ಟ್ನ 10 ವರ್ಷಗಳ ಅವಧಿಯಲ್ಲಿ ಅಹ್ಮದಿ ಅವರು ಹಲವು ಪ್ರಮುಖ ತೀರ್ಪುಗಳನ್ನು ನೀಡಿದ್ದಾರೆ. ಸುಪ್ರೀಂಕೋರ್ಟ್ ಜಡ್ಜ್ಗಳ ನೇಮಕಕ್ಕೆ ಕೊಲಿಜಿಯಂ ರಚನೆ ಬಗ್ಗೆ ಅವರ ವಿರೋಧ ವ್ಯಕ್ಷಪಡಿಸಿದ್ದರು. ಕೊಲಿಜಿಯಂ ವ್ಯವಸ್ಥೆ ಕುರಿತಂತೆ 1993ರಲ್ಲಿ 9 ನ್ಯಾಯಾಧೀಶರ ಪೀಠ ತಮ್ಮ ಅನಿಸಿಕೆ ಹೊರಹಾಕಿದಾಗ, ಅಹ್ಮದಿ ಅವರು ಕೊಲಿಜಿಯಂ ಬೇಡವೆಂದು ತಮ್ಮ ಅಭಿಪ್ರಾಯ ಬರೆದಿದ್ದರು. 1994ರಲ್ಲಿ ಸುಪ್ರೀಂಕೋರ್ಟ್ನ ಐವರು ಜಡ್ಜ್ಗಳ ಪೀಠ ಕೇಸ್ವೊಂದರಲ್ಲಿ ತೀರ್ಪು ನೀಡಿ ‘ಮುಸ್ಲಿಮರಿಗೆ ನಮಾಜ್ ಮಾಡಲು ಮಸೀದಿಯೇ ಬೇಕು ಎಂದೇನೂ ಇಲ್ಲ. ಅವರು ಹೊರಾಂಗಣದಲ್ಲೂ ನಮಾಜ್ ಮಾಡಬಹುದು’ ಎಂದಿತ್ತು. ಆ ಪೀಠದಲ್ಲಿದ್ದ ಎ.ಎಂ.ಅಹ್ಮದಿ ಭಿನ್ನ ತೀರ್ಪು ಬರೆದಿದ್ದರು.