ನವದೆಹಲಿ: ಭಾರತದಲ್ಲಿ ದೇಶದ್ರೋಹ ಕಾಯ್ದೆ ದುರ್ಬಳಕೆಯಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಅನಗತ್ಯವಾಗಿ ದೇಶದ್ರೋಹ ಪ್ರಕರಣಗಳು (Sedition Law) ಜಾರಿಯಾಗುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿ ಸುಪ್ರೀಂಕೋರ್ಟ್‌ಗೆ ಅರ್ಜಿಗಳು ಕೂಡ ಸಲ್ಲಿಕೆಯಾಗಿದ್ದು, ಅದರ ವಿಚಾರಣೆಯನ್ನು ಸುಪ್ರೀಂಕೋರ್ಟ್ (Supreme Court) ನಡೆಸುತ್ತಿದೆ. ಈ ಬಗ್ಗೆ ಕೆಲವು ದಿನಗಳ ಹಿಂದೆ ಸರ್ವೋಚ್ಛ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿರುವ ಕೇಂದ್ರ ಸರ್ಕಾರ, ನಾವು ಐಪಿಸಿ ಸೆಕ್ಷನ್ 124 ಎ (ದೇಶದ್ರೋಹ ಕಾಯ್ದೆ)ಯನ್ನು ಮರುಪರಿಶೀಲನೆ ಮಾಡುತ್ತೇವೆ ಎಂದು ಹೇಳಿತ್ತು. ಆ ಬಗ್ಗೆ ಇಂದು ಸುಪ್ರೀಂಕೋರ್ಟ್ ಕೇಂದ್ರವನ್ನು ಪ್ರಶ್ನೆ ಮಾಡಿದೆ. ʼಹಿಂದೆ ಬ್ರಿಟಿಷರ ಕಾಲದಲ್ಲಿದ್ದ ಈ ಕಾನೂನನ್ನು ಮರುಪರಿಶೀಲನೆ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಈ ಪ್ರಕ್ರಿಯೆ ಮುಗಿಯುವವರೆಗೂ, ಈಗಾಗಲೇ ದೇಶದ್ರೋಹ ಕಾಯ್ದೆಯಡಿ ಬಂಧಿತರಾಗಿರುವವರ ಹಕ್ಕುಗಳ ರಕ್ಷಣೆ ಸಂಬಂಧ ಕೇಂದ್ರ ಸರ್ಕಾರ ಒಂದು ಮಾರ್ಗಸೂಚಿ ಬಿಡುಗಡೆ ಮಾಡಲಿದೆಯಾ? ಆ ಮಾರ್ಗಸೂಚಿಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಿದೆಯಾ?ʼ ಎಂದು ಸುಪ್ರೀಂಕೋರ್ಟ್ ಕೇಳಿದ್ದು, 24 ಗಂಟೆಯೊಳಗೆ ಉತ್ತರಿಸಲು ಸೂಚಿಸಿದೆ.
ದೇಶದ್ರೋಹ ಕಾಯ್ದೆಯನ್ನು ಬೇಕಾಬಿಟ್ಟಿ ಪ್ರಯೋಗ ಮಾಡುತ್ತಿರುವ ಬಗ್ಗೆ ಹಿಂದೊಮ್ಮೆ ಸುಪ್ರೀಂಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತ್ತು. ಬಳಿಕ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೋರ್ಟ್‌ಗೆ ಅಫಿಡಿವಿಟ್ ಸಲ್ಲಿಸಿ, ಕಾಯ್ದೆಯನ್ನು ಒಂದು ಸೂಕ್ತ ಚೌಕಟ್ಟಿನಲ್ಲಿ ಮರುಪರಿಶೀಲನೆ ಮಾಡಲಾಗುವುದು ಎಂದು ಹೇಳಿದ್ದರು. ಇದನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠ ವಿಚಾರಣೆಗೆ ಕೈಗೆತ್ತಿಕೊಂಡಿದೆ. ಇಂದು ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ತುಷಾರ್ ಮೆಹ್ತಾ, ಈ ಬಗ್ಗೆ ನಾನು ಕೇಂದ್ರ ಸರ್ಕಾರದ ಸೂಚನೆ ಪಡೆದು, ಅದನ್ನು ಬುಧವಾರ ಕೋರ್ಟ್‌ಗೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಹಾಗೇ, ಕಾಯ್ದೆ ಮರುಪರಿಶೀಲನೆ ಆಗುವವರೆಗೂ ಅರ್ಜಿಗಳ ವಿಚಾರಣೆಯನ್ನು ಮುಂದೂಡಬೇಕು ಎಂಬ ಕೇಂದ್ರ ಸರ್ಕಾರದ ಮನವಿಗೆ ಸುಪ್ರೀಂ ಅಸ್ತು ಎಂದಿದೆ.
ಇದನ್ನೂ ಓದಿ | ಶಹೀನ್ ಬಾಗ್ ತೆರವು ಕೇಸ್: ವಿಚಾರಣೆಗೆ ನಕಾರ, ಹೈಕೋರ್ಟ್‌ಗೆ ಹೋಗಲು ಅರ್ಜಿದಾರರಿಗೆ ಸುಪ್ರೀಂ ಸೂಚನೆ
ಕೆಲವು ದಿನಗಳ ಹಿಂದೆ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದ ಸುಪ್ರೀಂಕೋರ್ಟ್, ಪ್ರಧಾನಿ ನರೇಂದ್ರ ಮೋದಿಯವರು ನಾಗರಿಕ ಸ್ವಾತಂತ್ರ್ಯ ರಕ್ಷಣೆಗೆ ಬದ್ಧರಾಗಿದ್ದಾರೆ. ಮಾನವ ಹಕ್ಕುಗಳಿಗೆ ಗೌರವ ನೀಡಬೇಕು ಎಂಬುದು ಅವರ ಇಚ್ಛೆ. ಅವರ ಈ ದೃಷ್ಟಿಗೆ ಅನುಗುಣವಾಗಿ ಈಗಾಗಲೇ ಅವಧಿ ಮೀರಿದ ಸುಮಾರು 1500 ಕಾನೂನುಗಳನ್ನು ತೆಗೆದುಹಾಕಲಾಗಿದೆ. ಹಾಗೇ, ದೇಶದ್ರೋಹ ಕಾಯ್ದೆಯ ಬಗ್ಗೆಯೂ ಪರಿಶೀಲನೆ ನಡೆಯುತ್ತದೆ ಎಂದು ಹೇಳಿತ್ತು.
ಇದನ್ನೂ ಓದಿ | ದೇಶಾದ್ಯಂತ Halal ಉತ್ಪನ್ನ ಬ್ಯಾನ್ ಮಾಡಿ: ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ