ನವ ದೆಹಲಿ: ಫ್ಯಾಕ್ಟ್‌ಚೆಕ್ (ಸತ್ಯಶೋಧನೆ) ನೆಪದಲ್ಲಿ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದ್ದ ಆರೋಪದಲ್ಲಿ ಬಂಧಿತನಾಗಿದ್ದ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್‌ಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಜುಬೇರ್ ವಿರುದ್ಧ ಉತ್ತರ ಪ್ರದೇಶದಲ್ಲಿ ದಾಖಲಾಗಿದ್ದ ಎಲ್ಲ ಆರೂ ಕೇಸ್‌ಗಳಲ್ಲಿ ಅವನಿಗೆ ಜಾಮೀನು ನೀಡಿದ್ದು, ಕಸ್ಟಡಿಯಿಂದ ಬಿಡುಗಡೆ ಮಾಡುವಂತೆ ಸೂಚಿಸಿದೆ. ಎಲ್ಲ ಎಫ್‌ಐಆರ್‌ಗಳನ್ನೂ ಸಂಯೋಜಿಸಿ, ಅದರ ತನಿಖೆಯನ್ನು ದೆಹಲಿ ಪೊಲೀಸರಿಗೆ ಒಪ್ಪಿಸಿ ಎಂದು ಹೇಳಿದೆ. ಹೀಗಾಗಿ ಜುಬೇರ್ ಪ್ರಕರಣಗಳ ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರ ರಚಿಸಿದ್ದ ಎಸ್‌ಐಟಿ ನಿಷ್ಕ್ರಿಯಗೊಳ್ಳಲಿದೆ.
ಟ್ವಿಟರ್‌ನಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕುತ್ತಿದ್ದ ಮತ್ತು ಆಲ್ಟ್ ನ್ಯೂಸ್‌ನಲ್ಲಿ ಹಿಂದುತ್ವ ವಿರೋಧಿ, ಪ್ರಧಾನಿ ಮೋದಿ ವಿರೋಧಿ ಸುದ್ದಿಗಳನ್ನು ಬಿತ್ತರಿಸುತ್ತಿದ್ದ ಆರೋಪದಡಿ ಜುಬೇರ್ ವಿರುದ್ಧ ಉತ್ತರ ಪ್ರದೇಶದಲ್ಲಿ ಒಟ್ಟು ಆರು ಕಡೆ ಎಫ್‌ಐಆರ್ ದಾಖಲಾಗಿತ್ತು. ಅದರಲ್ಲೂ ಪ್ರಮುಖವಾಗಿ 2018ರಲ್ಲಿ ಮಾಡಿದ್ದ ಟ್ವೀಟ್‌ಗಳನ್ನೇ ಉಲ್ಲೇಖಿಸಿ ದೂರು ನೀಡಲಾಗಿತ್ತು. ಅದರಲ್ಲಿ ಹತ್ರಾಸ್‌ನಲ್ಲಿ ಎರಡು, ಸೀತಾಪುರದಲ್ಲಿ ಒಂದು, ಲಖಿಂಪುರ ಖೇರಿ, ಮುಜಾಫರ್‌ನಗರ ಮತ್ತು ಘಾಜಿಯಾಬಾದ್‌ನಲ್ಲಿ ತಲಾ ಒಂದೊಂದು ಕೇಸ್ ದಾಖಲಾಗಿತ್ತು. ಜೂ.27ರಂದು ಬಂದಿತನಾಗಿದ್ದ ಈತನಿಗೆ ಸೀತಾಪುರ ಕೇಸ್‌ನಲ್ಲಿ ಮತ್ತು ಜುಲೈ 13ರಂದು ಲಖಿಂಪುರ ಖೇರಿ ಕೇಸ್‌ನಲ್ಲಿ ಜಾಮೀನು ಸಿಕ್ಕಿದ್ದರೂ ಕೂಡ, ಜುಬೇರ್ ಹತ್ರಾಸ್ ಪೊಲೀಸ್ ಕಸ್ಟಡಿಯಲ್ಲಿ ಇದ್ದ. ಈ ಹಿಂದೆ ಸೋಮವಾರ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್, ಮುಂದಿನ ಆದೇಶದವರೆಗೂ ಮೊಹಮ್ಮದ್ ಜುಬೇರ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು ಹೇಳಿತ್ತು.
ಇಂದು ಉತ್ತರ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲೆ ಗರೀಮಾ ಪ್ರಸಾದ್, ʼತಾನು ಒಂದು ಪ್ರಚೋದನಾಕಾರಿ ಟ್ವೀಟ್ ಮಾಡಲು 12 ಲಕ್ಷ ರೂ.ಪಡೆದಿದ್ದೇನೆ ಮತ್ತು ಇನ್ನೊಂದು ಟ್ವೀಟ್‌ಗೆ 2 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದೇನೆ ಎಂದು ಜುಬೇರ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆʼ ಎಂದು ಹೇಳಿದ್ದರು. ಹಾಗಿದ್ದಾಗ್ಯೂ ಕೋರ್ಟ್ ಕೇಳಲಿಲ್ಲ. ʼಜುಬೇರ್ ಯಾವುದೇ ಟ್ವೀಟ್‌ನಲ್ಲೂ ಕ್ರಿಮಿನಲ್ ಅಪರಾಧ ಎನ್ನಿಸುವಷ್ಟು ಅನುಚಿತ, ಪ್ರಚೋದನಕಾರಿ ಶಬ್ದವನ್ನು ಬಳಸಿಲ್ಲ. ಅಷ್ಟೇ ಅಲ್ಲ, ಅರ್ಜಿದಾರರು ತಮ್ಮ ಅನೇಕ ಟ್ವೀಟ್‌ಗಳಲ್ಲಿ ಉತ್ತರ ಪ್ರದೇಶ ಪೊಲೀಸರನ್ನು ಟ್ಯಾಗ್ ಮಾಡಿ, ಕ್ರಮಕ್ಕೆ ಆಗ್ರಹಿಸಿದ್ದು, ಅವರ ಪರ ವಕೀಲರು ಸಲ್ಲಿಸಿರುವ ದಾಖಲೆಯಲ್ಲಿ ಕಂಡುಬರುತ್ತಿದೆʼ ಎಂದು ಹೇಳಿದೆ.
ಇದನ್ನೂ ಓದಿ: ಆಲ್ಟ್ ನ್ಯೂಸ್ ಸಹಸಂಸ್ಥಾಪಕ ಜುಬೇರ್‌ಗೆ ಲಖಿಂಪುರ್ ಪ್ರಕರಣದಲ್ಲಿ 14 ದಿನಗಳ ನ್ಯಾಯಾಂಗ ಬಂಧನ