ನವದೆಹಲಿ: ಬಿಜೆಪಿ ಮಾಜಿ ವಕ್ತಾರೆ, ಪ್ರವಾದಿ ವಿವಾದ ಹುಟ್ಟುಹಾಕಿದ್ದ ನೂಪುರ್ ಶರ್ಮಾಗೆ ಸುಪ್ರೀಂಕೋರ್ಟ್ ಸದ್ಯ ರಿಲೀಫ್ ನೀಡಿದೆ. ನೂಪುರ್ ಶರ್ಮಾ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳಿಗೆ ಸಂಬಂಧಪಟ್ಟಂತೆ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ. ಮುಂದಿನ ವಿಚಾರಣೆಯವರೆಗೆ ಅವರನ್ನು ಬಂಧಿಸುವಂತೆಯೂ ಇಲ್ಲ ಎಂದು ಮಧ್ಯಂತರ ಆದೇಶ ನೀಡಿದೆ. ಹಾಗೇ, ವಿಚಾರಣೆಯನ್ನು ಆಗಸ್ಟ್ 10ಕ್ಕೆ ಮುಂದೂಡಿದೆ. ಹೀಗಾಗಿ ಅಲ್ಲಿಯವರೆಗೂ ನೂಪುರ್ ಶರ್ಮಾಗೆ ತಾವು ಅರೆಸ್ಟ್ ಆಗುವ ಭಯ ಇಲ್ಲದಂತಾಗಿದೆ.
ಟಿವಿ ಚಾನಲ್‌ವೊಂದಕ್ಕೆ ಜ್ಞಾನವಾಪಿ ಮಸೀದಿ ಬಗ್ಗೆ ಚರ್ಚಿಸಲು ಹೋಗಿದ್ದ ನೂಪುರ್ ಶರ್ಮಾ ಅಲ್ಲಿ ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಮಾತನಾಡಿದ್ದರು. ಅದಾದ ಮೇಲೆ ದೊಡ್ಡ ಮಟ್ಟದ ಪ್ರತಿಭಟನೆ, ಹಿಂಸಾಚಾರವೇ ನಡೆದು ಹೋಗಿದೆ. ಇನ್ನು ಮುಸ್ಲಿಮ್ ಸಮುದಾಯದ ಅನೇಕರು ನೂಪುರ್ ಶರ್ಮಾ ವಿರುದ್ಧ ವಿವಿಧ ಠಾಣೆಗಳಲ್ಲಿ ದೂರು ದಾಖಲಿಸಿದ್ದಾರೆ. ನೂಪುರ್ ವಿರುದ್ಧ ದೆಹಲಿ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಕರ್ನಾಟಕ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಅಸ್ಸಾಂಗಳಲ್ಲಿ ಎಫ್‌ಐಆರ್ ದಾಖಲಾಗಿದೆ. ಅವರನ್ನು ಯಾವ ಕ್ಷಣದಲ್ಲಿ ಬೇಕಾದರೂ ಪೊಲೀಸರು ಅರೆಸ್ಟ್ ಮಾಡಬಹುದಿತ್ತು. ಆದರೆ, ನೂಪುರ್ ಶರ್ಮಾ, ʼಎಲ್ಲ ರಾಜ್ಯಗಳಲ್ಲಿ ದಾಖಲಾದ ಎಫ್‌ಐಆರ್‌ಗಳನ್ನೂ ದೆಹಲಿಗೆ ವರ್ಗಾಯಿಸಿಕೊಡಬೇಕು. ನನಗೆ ಜೀವ ಬೆದರಿಕೆ ಇರುವುದರಿಂದ ವಿಚಾರಣೆಗಾಗಿ ಎಲ್ಲಿಗೂ ಪ್ರಯಾಣ ಮಾಡಲು ಸಾಧ್ಯವಿಲ್ಲʼ ಎಂದು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಆ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ನೂಪುರ್‌ಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ.
ಇದನ್ನೂ ಓದಿ: ನೂಪುರ್ ಶರ್ಮಾ ಹೇಳಿಕೆ ನಂತರ ಗಲಭೆ: ರಾಜ್ಯಾದ್ಯಂತ ಕಟ್ಟೆಚ್ಚರ, ರೌಡಿ ಪರೇಡ್
ಎಲ್ಲ ಎಫ್‌ಐಆರ್‌ಗಳನ್ನೂ ದೆಹಲಿಗೆ ವರ್ಗಾಯಿಸಿ ಕೊಡಿ ಎಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಜುಲೈ 1ರಂದು ನಡೆಸಿದ್ದ ಸುಪ್ರೀಂಕೋರ್ಟ್ ಪೀಠ, ನೂಪುರ್ ಶರ್ಮಾರಿಗೇ ಛೀಮಾರಿ ಹಾಕಿತ್ತು. ಆಕೆಯ ಹೇಳಿಕೆ ಇಡೀ ದೇಶದ ಭದ್ರತಾ ವ್ಯವಸ್ಥೆಗೆ ಧಕ್ಕೆ ತಂದಿದೆ. ನೂಪುರ್ ಶರ್ಮಾ ಕೂಡಲೇ ದೇಶದ ಕ್ಷಮೆ ಕೋರಬೇಕು ಎಂದು ಹೇಳಿತ್ತು. ಅಷ್ಟೇ ಅಲ್ಲ, ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ ನೂಪುರ್ ಶರ್ಮಾರನ್ನು ಕಟುವಾಗಿಯೇ ಟೀಕಿಸಿತ್ತು. ಆದರೆ ರಿಲೀಫ್ ನೀಡಲು ನಿರಾಕರಿಸಿತ್ತು.
ಆದರೆ ಕೋರ್ಟ್‌ನ ಈ ಟೀಕೆಯಿಂದಾಗಿ ನನಗೆ ಕೊಲೆ ಬೆದರಿಕೆ ಹೆಚ್ಚಾಗಿದೆ. ಹೀಗಾಗಿ ನನ್ನ ವಿರುದ್ಧದ ಕಟು ಅಭಿಪ್ರಾಯಗಳನ್ನು ದಾಖಲೆಯಿಂದ ಅಳಿಸಬೇಕು. ಎಲ್ಲ ಎಫ್‌ಐಆರ್‌ಗಳನ್ನೂ ದೆಹಲಿಗೇ ವರ್ಗಾಯಿಸಿಕೊಡಬೇಕು ಎಂದು ನೂಪುರ್ ಶರ್ಮಾ ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪೀಠ, ʼಎಫ್‌ಐಆರ್ ದಾಖಲಾದಲ್ಲೆಲ್ಲ ನೀವು ಹೋಗಬೇಕು. ಆ ರಾಜ್ಯಗಳ ಕೋರ್ಟ್‌ನಲ್ಲಿ ವಿಚಾರಣೆಗೆ ಹಾಜರಾಗಬೇಕು ಎಂದು ನಾವು ಹೇಳುತ್ತಿಲ್ಲʼ ಎಂದು ಹೇಳಿದೆ. ಹಾಗೇ, ನೂಪುರ್ ವಿರುದ್ಧದ ಎಫ್‌ಐಆರ್‌ಗಳನ್ನು ಒಂದೇ ಕಡೆಗೆ ವರ್ಗಾಯಿಸಲು ಆಯಾ ರಾಜ್ಯ ಸರ್ಕಾರಗಳು (ಎಫ್‌ಐಆರ್ ದಾಖಲಾದ ರಾಜ್ಯಗಳು) ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಕೂಡ ಜಾರಿ ಮಾಡಿದೆ.
ಇದನ್ನೂ ಓದಿ: ನೂಪುರ್ ಶರ್ಮಾ ಶಿರಚ್ಛೇದ ಮಾಡಿದರೆ ನನ್ನ ಮನೆ ಕೊಡುತ್ತೇನೆ ಎಂದ ದರ್ಗಾದ ಖಾದಿಮ್ ಅರೆಸ್ಟ್