ನವ ದೆಹಲಿ: ಗುಜರಾತ್ ಮೂಲದ ಬಿಲ್ಕೀಸ್ ಬಾನೊ ಅತ್ಯಾಚಾರ ಕೇಸ್ನ 11 ಆರೋಪಿಗಳ ಬಿಡುಗಡೆ ಖಂಡಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಇಂದು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಗುಜರಾತ್ ಸರ್ಕಾರಕ್ಕೆ ನೋಟಿಸ್ ನೀಡಿದೆ. ‘ಅತ್ಯಾಚಾರ ಆರೋಪಿಗಳಿಗೆ ಕ್ಷಮಾದಾನ ನೀಡಿದ್ದನ್ನು ವಿರೋಧಿಸಿ ಸಲ್ಲಿಕೆಯಾದ ಅರ್ಜಿಗಳಿಗೆ ಪ್ರತಿಕ್ರಿಯೆ ಕೊಡಿ’ ಎಂದು ಸೂಚಿಸಿದೆ. ಹಾಗೇ, ಆರೋಪಿಗಳಿಗೆ ಕ್ಷಮಾದಾನ ಕೊಡುವ ಸಂದರ್ಭದಲ್ಲಿ ಅವರ ಮನವಿ ಅರ್ಜಿಯನ್ನು ಹೇಗೆ ಅಧ್ಯಯನ ಮಾಡಲಾಗಿದೆ? ಎಂಬುದನ್ನು ನಾವು ಪರಿಶೀಲಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಹಾಗೇ, ಇನ್ನೂ ಎರಡು ವಾರಗಳ ನಂತರ ಮತ್ತೆ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.
‘ಆರೋಪಿಗಳನ್ನು ಬಿಡುಗಡೆ ಮಾಡಿದ್ದರ ಬಗ್ಗೆ ನಾವೇನೂ ಆದೇಶ ಕೊಡಲು ಸಾಧ್ಯವಿಲ್ಲ. ಆದರೆ ಕ್ಷಮಾದಾನವನ್ನು ಮತ್ತೊಮ್ಮೆ ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ಕೇಳಬಹುದು. ಕೈದಿಗಳು ಎಲ್ಲ ಷರತ್ತು-ನಿಯಮಗಳನ್ನೂ ಪಾಲಿಸಿ, ಶಿಸ್ತು ತೋರಿಸಿದರೆ ಅವರಿಗೆ ಕ್ಷಮಾದಾನ ಕೊಡಬಹುದು’ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಬಿಲ್ಕಿಸ್ ಬಾನೊ ಅತ್ಯಾಚಾರ ಕೇಸ್ ಆರೋಪಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿದ್ದನ್ನು ಪ್ರಶ್ನಿಸಿ ಮತ್ತು ಅವರಿಗೆ ಜೈಲು ಶಿಕ್ಷೆ ಮುಂದುವರಿಸಬೇಕು ಎಂದು ಆಗ್ರಹಿಸಿ ಸಿಪಿಐ (ಎಂ) ಸದಸ್ಯೆ ಸುಭಾಷಿಣಿ ಅಲಿ, ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಮತ್ತು ಇನ್ನಿತರ ಮಹಿಳಾ ಹಕ್ಕು ಹೋರಾಟಗಾರ್ತಿಯರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳಾಗಿ ಜೈಲು ಸೇರಿದ್ದವರ ಬಿಡುಗಡೆ ವಿರೋಧಿಸಿ, ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅಪರ್ಣಾ ಭಟ್ ಮೂಲಕ ಸಲ್ಲಿಕೆಯಾಗಿರುವ ಈ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠ ಸಮ್ಮತಿ ನೀಡಿತ್ತು. ಅದರಂತೆ ಇಂದು ಮೊದಲ ಹಂತದ ವಿಚಾರಣೆ ನಡೆಸಿದೆ.
ಇದನ್ನೂ ಓದಿ: Bilkis Bano Case | ಬಿಲ್ಕಿಸ್ ಬಾನೊ ಅತ್ಯಾಚಾರ ಆರೋಪಿಗಳು ಮತ್ತೆ ಜೈಲು ಸೇರ್ತಾರಾ?