ನವ ದೆಹಲಿ: ಸುಪ್ರೀಂಕೋರ್ಟ್‌ನ ಎರಡನೇ ಹಿರಿಯ ನ್ಯಾಯಮೂರ್ತಿ ಎ.ಎಂ.ಖಾನಿಲ್ಕರ್ ಅವರು ಇಂದು ನಿವೃತ್ತರಾದರು. ʼನಾನು ಹುದ್ದೆಯಲ್ಲಿ ಇದ್ದಷ್ಟೂ ದಿನ ನೀವೆಲ್ಲ ನನಗೆ ಪ್ರೀತಿ, ವಿಶ್ವಾಸ ತೋರಿಸಿದ್ದೀರಿ. ಧನ್ಯವಾದಗಳು ಎಂದುʼ ಬಾರ್ ಅಸೋಸಿಯೇಶ್ ಸಿಬ್ಬಂದಿ, ಉಳಿದ ನ್ಯಾಯಾಧೀಶರು, ವಕೀಲರಿಗೆ ಹೇಳಿದರು. ಇಂದು ಖಾನಿಲ್ಕರ್ ಬೀಳ್ಕೊಡುಗೆ ಸಮಯದಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ಇತರ ಪ್ರಮುಖ ನ್ಯಾಯಮೂರ್ತಿಗಳು ಇದ್ದರು.
ನ್ಯಾಯಮೂರ್ತಿ ಖಾನಿಲ್ಕರ್ ಅವರಿಗೆ 64 ವರ್ಷ. 2000-2013ರವರೆಗೆ ಬಾಂಬೆ ಹೈಕೋರ್ಟ್‌ನ ಜಡ್ಜ್ ಆಗಿದ್ದರು. 2013ರ ಏಪ್ರಿಲ್ 4ರಿಂದ ನವೆಂಬರ್ 23ರವರೆಗೆ ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದರು. ಅಲ್ಲಿಂದ 2016ರವರೆಗೆ ಮಧ್ಯ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದರು. 2016ರಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಅಲ್ಲಿಂದ ಇಲ್ಲಿಯವರೆಗೆ ಅವರು ಹಲವು ಪ್ರಮುಖ ಪ್ರಕರಣಗಳ ತೀರ್ಪು ನೀಡಿದ್ದಾರೆ.
64 ವರ್ಷದ ನ್ಯಾ. ಖಾನಿಲ್ಕರ್ ಹಲವು ಪ್ರಮುಖ ಕೇಸ್‌ನಲ್ಲಿ ತೀರ್ಪು ನೀಡಿದ್ದಾರೆ. ಅದರಲ್ಲಿ ಬಹುಮುಖ್ಯವಾಗಿ ಇತ್ತೀಚೆಗೆ ಹೊರಬಿದ್ದ ಗುಜರಾತ್ ದಂಗೆ ಪ್ರಕರಣದಲ್ಲಿ ನರೇಂದ್ರ ಮೋದಿಗೆ ಕ್ಲೀನ್‌ಚಿಟ್ ಕೊಟ್ಟಿದ್ದು. 2002ರ ಗುಜರಾತ್ ಗಲಭೆಯಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಆರೋಪಿ ಎಂಬಂತೆ ಬಿಂಬಿತವಾಗಿತ್ತು. ಅದರ ತನಿಖೆಗೆ ಅಂದಿನ ಉತ್ತರ ಪ್ರದೇಶ ಸರ್ಕಾರ ರಚನೆ ಮಾಡಿದ್ದ ಎಸ್‌ಐಟಿ (ವಿಶೇಷ ತನಿಖಾ ದಳ) ಮೋದಿಯವರಿಗೆ ಕ್ಲೀನ್ ಚಿಟ್ ಕೊಟ್ಟಿತ್ತು. ಈ ಕ್ಲಿನ್‌ಚಿಟ್‌ನ್ನು ಪ್ರಶ್ನಿಸಿ ಹಿರಿಯ ಕಾಂಗ್ರೆಸ್ ನಾಯಕರೊಬ್ಬರ (ಗುಜರಾತ್ ಗಲಭೆಯಲ್ಲಿ ಮೃತಪಟ್ಟವರು) ಪತ್ನಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಪೀಠದಲ್ಲಿ ಖಾನಿಲ್ಕರ್ ಕೂಡ ಇದ್ದರು. ಮೋದಿಯವರಿಗೆ ಎಸ್‌ಐಟಿ ನೀಡಿದ್ದ ಕ್ಲೀನ್‌ಚಿಟ್‌ನ್ನು ಈ ಪೀಠ ಎತ್ತಿಹಿಡಿಯುವ ಜತೆ, ತೀಸ್ತಾ ಸೆಟಲ್ವಾಡ್ ಹೆಸರನ್ನು ಉಲ್ಲೇಖಿಸಿ, ವಿಚಾರಣೆಗೆ ಒಳಪಡಿಸುವಂತೆ ಸೂಚನೆ ನೀಡಿತ್ತು.
ಇದರೊಂದಿಗೆ ಆಧಾರ್ ಪ್ರಕರಣ (ಆಧಾರ್ ಕಾರ್ಡ್ ಈ ದೇಶದ ಸಂವಿಧಾನದ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ಸಲ್ಲಿಕೆಯಾಗಿದ್ದ ಅರ್ಜಿ)ದ ವಿಚಾರಣೆಯಲ್ಲೂ ಇವರಿದ್ದರು. ಹಾಗೇ, ಬೆಂಗಳೂರಿನ ಬಿಬಿಎಂಪಿ ಚುನಾವಣೆ ಸಂಬಂಧ ಜುಲೈ 28ರಂದು ಸುಪ್ರೀಂಕೋರ್ಟ್‌ನಿಂದ ಮಹತ್ವದ ಆದೇಶ ಹೊರಬಿದ್ದಿದೆ. ಬಿಬಿಎಂಪಿ ಚುನಾವಣೆ ಸಂಬಂಧ ರಾಜ್ಯ ಸರ್ಕಾರ ಮುಂದಿನ ವಾರದೊಳಗೆ ಮೀಸಲಾತಿ ಪಟ್ಟಿ ಪ್ರಕಟಿಸಬೇಕು ಎಂದು ಹೇಳಿದೆ. ಈ ಆದೇಶ ಹೊರಡಿಸಿದ್ದೂ ಕೂಡ ಖಾನಿಲ್ಕರ್ ಅವರಿದ್ದ ಪೀಠವೇ ಆಗಿದೆ.
ಇದನ್ನೂ ಓದಿ: 2007ರಲ್ಲಿ ತೀಸ್ತಾ ಸೆಟಲ್ವಾಡ್‌ಗೆ ಪದ್ಮ ಪುರಸ್ಕಾರ ದೊರೆತಿದ್ದು ಹೇಗೆ? ಯಾಕೆ?; ಎಸ್‌ಐಟಿ ವರದಿ ಇದು !