ನವ ದೆಹಲಿ: ಸುಪ್ರೀಂಕೋರ್ಟ್ ಜುಲೈ 11ರಂದು ಒಂದೇ ದಿನ 44 ತೀರ್ಪುಗಳನ್ನು ನೀಡುವ ಮೂಲಕ ದಾಖಲೆ ಬರೆದಿದೆ. ಇತ್ತೀಚಿನ ದಿನಗಳಲ್ಲಿ ಸರ್ವೋಚ್ಛ ನ್ಯಾಯಾಲಯ ಇಷ್ಟೊಂದು ಪ್ರಕರಣಗಳ ತೀರ್ಪನ್ನು ಒಂದೇ ದಿನದಲ್ಲಿ ಕೊಟ್ಟಿರಲಿಲ್ಲ. ಸುಪ್ರೀಂಕೋರ್ಟ್‌ಗೆ ಮೇ 23ರಿಂದ ಜುಲೈ 10ರವರೆಗೆ ಬೇಸಿಗೆ ರಜಾ ಇತ್ತು. ಜುಲೈ 10ರಿಂದ ಸುಪ್ರೀಂಕೋರ್ಟ್‌ನ ಪೂರ್ಣ ಪೀಠ ಕರ್ತವ್ಯಕ್ಕೆ ಹಾಜರಾಗುತ್ತಿದೆ. ಹೀಗೆ ರಜಾ ಮುಗಿಸಿ ಬಂದ ನ್ಯಾಯಮೂರ್ತಿಗಳು ಒಂದೇ ದಿನ 40ಕ್ಕೂ ಹೆಚ್ಚು ತೀರ್ಪು ನೀಡಿದ್ದು, ಅದರಲ್ಲಿ ನ್ಯಾಯಮೂರ್ತಿ ಎಂ.ಆರ್.ಶಾ ಅವರೊಬ್ಬರೇ 20 ಕೇಸ್‌ನ ತೀರ್ಪು ನೀಡಿದ್ದಾರೆ.
ಮೇ 23ರಿಂದ ಬೇಸಿಗೆ ರಜಾ ಇದ್ದಿದ್ದರಿಂದ ಪ್ರಕರಣಗಳ ವಿಚಾರಣೆ ನಡೆದಿರಲಿಲ್ಲ. ಇನ್ನೂ ಕೆಲವು ವಿಚಾರಣೆ ಮುಗಿದ ಕೇಸ್‌ಗಳ ತೀರ್ಪುಗಳನ್ನು ಕೊಡುವುದು ಬಾಕಿ ಇತ್ತು. ಜುಲೈ 11ರಂದು ನೀಡಲಾದ ತೀರ್ಪುಗಳು ಕೌಟುಂಬಿಕ ದೌರ್ಜನ್ಯ, ಕ್ರಿಮಿನಲ್ ಕೇಸ್‌ಗಳು, ಬ್ಯಾಂಕಿಂಗ್, ನ್ಯಾಯಾಂಗ ನಿಂದನೆ ಸೇರಿ ವಿವಿಧ ಪ್ರಕರಣಗಳಿಗೆ ಸಂಬಂಧಪಟ್ಟದ್ದಾಗಿದೆ.
ಅದು ಹೇಗೆ, ಬೇಸಿಗೆ ರಜಾ ಮುಗಿಸಿ ಬರುತ್ತಿದ್ದಂತೆ ಇಷ್ಟು ಪ್ರಕರಣಗಳ ತೀರ್ಪನ್ನು ಒಂದೇ ದಿನ ಕೊಡಲು ಸಾಧ್ಯವಾಯಿತು ಎಂಬ ಪ್ರಶ್ನೆಗೆ ಸುಪ್ರೀಂಕೋರ್ಟ್‌ನ ಕೆಲವು ಮಾಜಿ ನ್ಯಾಯಮೂರ್ತಿಗಳು ಉತ್ತರಿಸಿದ್ದಾರೆ. ಸುಪ್ರೀಂಕೋರ್ಟ್‌ಗೆ ಬೇಸಿಗೆ ರಜೆ ಸುದೀರ್ಘವಾಗಿ ಇರುತ್ತದೆ. ಈ ರಜೆಯಲ್ಲಿ ನ್ಯಾಯಮೂರ್ತಿಗಳು ಕೇವಲ ವೈಯಕ್ತಿಕ ಕೆಲಸಗಳನ್ನು ಮಾತ್ರ ಮಾಡಿಕೊಳ್ಳುವುದಿಲ್ಲ. ಬದಲಿಗೆ ತಾವು ವಿಚಾರಣೆ ನಡೆಸುತ್ತಿರುವ ಪ್ರಕರಣಗಳ ಅಧ್ಯಯನವನ್ನು ಕೂಲಂಕಷವಾಗಿ ಮಾಡುತ್ತಾರೆ. ಅದಕ್ಕೆ ಸಂಬಂಧಪಟ್ಟ ಪಾಯಿಂಟ್‌ಗಳನ್ನು ಸಿದ್ಧ ಮಾಡಿಕೊಳ್ಳುತ್ತಾರೆ. ಒಂದೊಂದು ಕೇಸ್‌ಗ ಬಗ್ಗೆಯೂ ಆಳವಾಗಿ ಅಭ್ಯಸಿಸುತ್ತಾರೆ. ಅವರ ಕಠಿಣ ಪರಿಶ್ರಮವನ್ನು ಶ್ಲಾಘಿಸಲೇಬೇಕು ಎನ್ನುತ್ತಾರೆ ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್.
ಇದನ್ನೂ ಓದಿ:ಸೋಷಿಯಲ್ ಮೀಡಿಯಾಗಳಿಗೆ ಕಠಿಣ ನಿಯಂತ್ರಣ ಹೇರಬೇಕು ಎಂದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ
ಸುಪ್ರೀಂಕೋರ್ಟ್‌ನ ಇನ್ನೊಬ್ಬ ಮಾಜಿ ನ್ಯಾಯಮೂರ್ತಿ ವಿ. ಗೋಪಾಲಗೌಡ ಕೂಡ ಇದೇ ಅಭಿಪ್ರಾಯ ಹೇಳಿದ್ದಾರೆ. ʼಬೇಸಿಗೆ ರಜೆ ಪೂರ್ವ ದಾಖಲಾದ ಕೇಸ್‌ಗಳ ಅಧ್ಯಯನಕ್ಕೆ ರಜಾ ದಿನಗಳಲ್ಲಿ ಹೇರಳವಾಗಿ ಸಮಯ ಸಿಗುತ್ತವೆ. ನಾನು ವೃತ್ತಿಯಲ್ಲಿದ್ದಾಗಲೂ ಹೀಗೇ ಮಾಡುತ್ತಿದ್ದೆ. ಬೇಸಿಗೆ ರಜೆ ಕಳೆದ ನಂತರ ನಾನೂ ಹಲವು ಮಹತ್ವದ ತೀರ್ಪು ನೀಡಿದ್ದೆ ಎಂದು ನೆನಪಿಸಿಕೊಂಡಿದ್ದಾರೆ. ಅಂದರೆ, ಸುದೀರ್ಘವಾಗಿ ಸಿಗುವ ರಜೆಯಲ್ಲಿ ಕೇಸ್‌ಗಳ ಅಧ್ಯಯನ ಆಗುವುದರಿಂದ ಕೋರ್ಟ್ ಪ್ರಾರಂಭವಾದ ಮೇಲೆ ಬೇಗನೇ ತೀರ್ಪು ನೀಡಬಹುದಾಗಿದೆ.
ಇದನ್ನೂ ಓದಿ: ವಿಜಯ್ ಮಲ್ಯಗೆ ಶಿಕ್ಷೆ ಸೇರಿದಂತೆ ಇಂದು ಸುಪ್ರೀಂಕೋರ್ಟ್‌ನಲ್ಲಿ ಪ್ರಮುಖ ತೀರ್ಪುಗಳ ನಿರೀಕ್ಷೆ