Site icon Vistara News

The Kerala Story: ಪಶ್ಚಿಮ ಬಂಗಾಳದಲ್ಲಿ ದಿ ಕೇರಳ ಸ್ಟೋರಿ ನಿಷೇಧಕ್ಕೆ ತಡೆ ನೀಡಿದ ಸುಪ್ರೀಂಕೋರ್ಟ್; ದೀದಿಗೆ ಹಿನ್ನಡೆ

Supreme Court lifts ban of the Kerala Story in West Bengal

#image_title

ದಿ ಕೇರಳ ಸ್ಟೋರಿ ಸಿನಿಮಾಕ್ಕೆ ಪಶ್ಚಿಮ ಬಂಗಾಳ (West Bengal)ದಲ್ಲಿ ಹೇರಿದ್ದ ನಿಷೇಧಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ​ ಹಾಗೇ, ದಿ ಕೇರಳ ಸ್ಟೋರಿ ಸಿನಿಮಾ (The Kerala Story) ಪ್ರದರ್ಶನಗೊಳ್ಳುತ್ತಿರುವ ಎಲ್ಲ ಥಿಯೇಟರ್​ಗಳಿಗೂ ಸೂಕ್ತ ಭದ್ರತೆ ನೀಡಬೇಕು. ಈ ಮೂಲಕ ಅಲ್ಲಿನ ಜನರು ನಿರಾಳವಾಗಿ ಸಿನಿಮಾ ನೋಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ತಮಿಳುನಾಡು ಸರ್ಕಾರಕ್ಕೆ ಸೂಚನೆ ನೀಡಿದೆ. ಕೇರಳ ಹಿಂದು/ಕ್ರಿಶ್ಚಿಯನ್ ಯುವತಿಯರನ್ನು ಅಫ್ಘಾನಿಸ್ತಾನ ಮತ್ತು ಸಿರಿಯಾಕ್ಕೆ ಕರೆದುಕೊಂಡು ಹೋಗಿ ಇಸ್ಲಾಮ್​​ಗೆ ಮತಾಂತರ ಮಾಡಿ, ಐಸಿಸ್​​ಗೆ ಸೇರ್ಪಡೆಗೊಳಿಸುವ ಕಥೆಯನ್ನು ಒಳಗೊಂಡ ದಿ ಕೇರಳ ಸ್ಟೋರಿ ಸಿನಿಮಾವನ್ನು ಪಶ್ಚಿಮ ಬಂಗಾಳದಲ್ಲಿ ನಿಷೇಧಿಸಿ, ಮಮತಾ ಬ್ಯಾನರ್ಜಿ ಅವರು ಮೇ 8ರಂದು ಆದೇಶ ಹೊರಡಿಸಿದ್ದರು. ಪಶ್ಚಿಮ ಬಂಗಾಳದಲ್ಲಿ ಸಿನಿಮಾ ಬ್ಯಾನ್ ಮಾಡಿದ್ದನ್ನು ಪ್ರಶ್ನಿಸಿ ಚಿತ್ರ ನಿರ್ಮಾಪಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಕೇರಳದ ಹಿಂದು/ಕ್ರಿಶ್ಚಿಯನ್ ಯುವತಿಯರನ್ನು ಸಿರಿಯಾ/ಅಫ್ಘಾನಿಸ್ತಾನಕ್ಕೆ ಕಳಿಸಿ ಇಸ್ಲಾಮ್​ಗೆ ಮತಾಂತರ ಮಾಡುವ/ಲವ್ ಜಿಹಾದ್​ಗೆ ಗುರಿಪಡಿಸುವ ಕಥೆಯನ್ನು ಒಳಗೊಂಡ ದಿ ಕೇರಳ ಸ್ಟೋರಿ ಸಿನಿಮಾ ಬಿಡುಗಡೆಗೆ ಕಾಂಗ್ರೆಸ್​, ಇತರ ಕಮ್ಯೂನಿಸ್ಟ್ ಪಕ್ಷಗಳು ವಿರೋಧಿಸಿದ್ದವು. ಇದರಲ್ಲಿ ಇಸ್ಲಾಮ್​​​ನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿದ್ದರು. ಬಿಡುಗಡೆಗೂ ಮುನ್ನವೇ ಮದ್ರಾಸ್, ಕೇರಳ ಹೈಕೋರ್ಟ್​ಗಳಿಗೆ, ಸುಪ್ರೀಂಕೋರ್ಟ್​ಗೆ ಹಲವರು ಅರ್ಜಿ ಸಲ್ಲಿಸಿದ್ದರು. ಆದರೆ ಯಾವುದೇ ಕೋರ್ಟ್​ಗಳೂ ಪ್ರದರ್ಶನಕ್ಕೆ ತಡೆ ನೀಡಿರಲಿಲ್ಲ. ಮೇ 5ರಂದು ಬಿಡುಗಡೆಯಾಗಿತ್ತು. ಅದಾದ ಮೇಲೆ ಮಮತಾ ಬ್ಯಾನರ್ಜಿ ಈ ಸಿನಿಮಾ ಬಗ್ಗೆ ಕಿಡಿಕಾರಿದ್ದರು.

ಇದನ್ನೂ ಓದಿ: The Kerala Story : 100 ಕೋಟಿ ರೂ. ಕಲೆಕ್ಷನ್‌ ಮಾಡಿದ ದಿ ಕೇರಳ ಸ್ಟೋರಿ: ಭರ್ಜರಿ ಪ್ರದರ್ಶನ!

ಚಿತ್ರ ನಿರ್ಮಾಪಕರ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ, ಪಶ್ಚಿಮ ಬಂಗಾಳದಲ್ಲಿ ಈ ಸಿನಿಮಾದ ವಸ್ತುವನ್ನೇ ಮುಖ್ಯವಾಗಿಟ್ಟು ನಿಷೇಧಿಸಲಾಗಿಲ್ಲ ಎಂಬುದು ಮೇಲ್ನೋಟಕ್ಕೇ ಗೋಚರಿಸುತ್ತಿದೆ. ಯಾಕೆ ನಿಷೇಧಿಸಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ರಾಜ್ಯ ನೀಡಿದ ಉತ್ತರವೂ ತೃಪ್ತಿದಾಯಕವಾಗಿಲ್ಲ. ಹೀಗಾಗಿ ಅದರ ಮೇಲೆ ಹೇರಲಾಗಿರುವ ನಿಷೇಧವನ್ನು ತೆರವುಗೊಳಿಸುತ್ತಿದ್ದೇವೆ ಎಂದು ಆದೇಶ ನೀಡಿದೆ.

ಇನ್ನು ದಿ ಕೇರಳ ಸ್ಟೋರಿ ಸಿನಿಮಾಕ್ಕೆ ಸೆನ್ಸಾರ್​ ಮಂಡಳಿ ಎ ಸರ್ಟಿಫಿಕೇಟ್ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಯನ್ನು ಕೋರ್ಟ್​ ಬೇಸಿಗೆ ರಜೆ ಬಳಿಕ ಜುಲೈನಲ್ಲಿ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ. ಈ ಸಿನಿಮಾವನ್ನು ಹದಿಹರೆಯದ ಮಕ್ಕಳು, ಅದರಲ್ಲೂ ಹೆಣ್ಣುಮಕ್ಕಳು ನೋಡಬೇಕು ಎಂಬ ಕೂಗು ಕೇಳಿಬರುತ್ತಿದೆ. ಆದರೆ ಎ ಸರ್ಟಿಫಿಕೇಟ್​ ನೀಡಿದ್ದರಿಂದ ಅದನ್ನು 18ವರ್ಷ ಮೇಲ್ಪಟ್ಟವರು ಮಾತ್ರ ನೋಡಬೇಕಿದೆ. ಈ ಎ ಸರ್ಟಿಫಿಕೇಟ್ ತೆರವುಗೊಳಿಸುವಂತೆ ಒಂದಷ್ಟು ಅರ್ಜಿಗಳು ಸುಪ್ರೀಂಕೋರ್ಟ್​ಗೆ ಸಲ್ಲಿಕೆಯಾಗಿವೆ. ಆ ವಿಚಾರಣೆಯನ್ನು ಸದ್ಯಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಕೋರ್ಟ್ ಹೇಳಿದೆ.

Exit mobile version