ನವ ದೆಹಲಿ: ಚುನಾವಣೆ ಆಯೋಗಕ್ಕೆ ಆಯುಕ್ತರ ನೇಮಕಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಗುರುವಾರವೂ ವಿಚಾರಣೆ ನಡೆಸಿತು. ಕೇಂದ್ರ ಸರ್ಕಾರದ ಪರ ವಾದಿಸುತ್ತಿರುವ ವಕೀಲರು ಒಂದು ಹಂತದಲ್ಲಿ, ನೀವು ಸ್ವಲ್ಪ ಸುಮ್ಮನಿರಿ ಎಂದು ನ್ಯಾಯಮೂರ್ತಿಗಳಿಗೆ ಹೇಳಿದ್ದೂ ಗಮನ ಸೆಳೆಯಿತು.
ಚುನಾವಣಾ ಆಯೋಗಕ್ಕೆ ಮುಖ್ಯ ಆಯುಕ್ತರ ನೇಮಕಾತಿ ಪ್ರಕ್ರಿಯೆಯಲ್ಲಿ ಇನ್ನಷ್ಟು ಸುಧಾರಣೆ, ಪಾರದರ್ಶಕತೆ ತರುವ ವಿಚಾರವಾಗಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ. ಎಲ್ಲ ಸರ್ಕಾರಗಳೂ ಕೇಂದ್ರ ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಂಡಿವೆ. ಪ್ರಧಾನಿ ವಿರುದ್ಧ ಕ್ರಮ ಕೈಗೊಳ್ಳುವ ಮುಖ್ಯ ಆಯುಕ್ತರು ಇದುವರೆಗೆ ನೇಮಕಗೊಂಡಿಲ್ಲ ಎಂದು ಬುಧವಾರ ಅರ್ಜಿ ವಿಚಾರಣೆ ವೇಳೆ ಹೇಳಿದ್ದ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ, ‘ಟಿ.ಎನ್. ಶೇಷನ್ರಂಥ ದಿಟ್ಟ ಚುನಾವಣಾ ಆಯುಕ್ತರು ನೇಮಕಗೊಳ್ಳುವ (1990-1996ರವರೆಗೆ) ಅಗತ್ಯವಿದೆ’ ಎಂದೂ ಹೇಳಿತ್ತು.
ಹಾಗೇ, ಇಂದು ಮುಂಜಾನೆ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕೆ ಎಂ ಜೋಸೆಫ್, ಜಸ್ಟೀಸ್ ಅಜಯ್ ರಸ್ಟೋಗಿ, ಜಸ್ಟೀಸ್ ಅನಿರುದ್ಧ ಬೋಸ್, ಜಸ್ಟೀಸ್ ಹೃಷಿಕೇಶ್ ರಾಯ್, ಜಸ್ಟೀಸ್ ಸಿ.ಟಿ. ರವಿಕುಮಾರ್ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ, ಇತ್ತೀಚೆಗಷ್ಟೇ ಚುನಾವಣಾ ಆಯೋಗಕ್ಕೆ ಆಯುಕ್ತರಾಗಿ ನೇಮಕಗೊಂಡ ಅರುಣ್ ಗೋಯೆಲ್ ಬಗ್ಗೆ ಪ್ರಶ್ನೆ ಮಾಡಿದೆ. ‘ಆಯುಕ್ತರ ಹುದ್ದೆ ಮೇ 15ರಿಂದ ಖಾಲಿ ಇದೆ. ಆದರೆ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ವಿಚಾರಣೆ ಶುರುವಾಗುತ್ತಿದ್ದಂತೆ ನ.21ರಂದು ಅರುಣ್ ಗೋಯೆಲ್ ನೇಮಕವಾಗಿದೆ. ಅವರ ಕಡತಗಳನ್ನು ಮಿಂಚಿನ ವೇಗದಲ್ಲಿ ತೆರವುಗೊಳಿಸಿ ನೇಮಕ ಮಾಡಿದ್ದು ಕೋರ್ಟ್ ಗಮನಕ್ಕೆ ಬಂದಿದೆ. ಇದೊಂದು ಅತ್ಯಂತ ಅವಸರದ ನೇಮಕಾತಿಯಲ್ಲವೇ? ಎಂದು ನ್ಯಾಯಮೂರ್ತಿಗಳು ಕೇಂದ್ರ ಸರ್ಕಾರದ ಪರ ವಕೀಲರ ಬಳಿ ಪ್ರಶ್ನಿಸಿದ್ದಾರೆ.
‘ಅರುಣ್ ಗೋಯೆಲ್ ಅವರ ಕಡತಗಳನ್ನು ನಾವೂ ಪರಿಶೀಲನೆ ಮಾಡಿದ್ದೇವೆ. ಅತ್ಯಂತ ಅವಸರದಲ್ಲಿ ಆಯುಕ್ತರಾಗಿ ನೇಮಕವಾದಂತೆ ಕಾಣಿಸುತ್ತಿದೆ. ಅವರು ತಮ್ಮ ಕಡತಗಳನ್ನು ಸಲ್ಲಿಸಿ 24 ಗಂಟೆಯ ಒಳಗೇ ಅದು ತೆರವಾಗಿ, ರಾಷ್ಟ್ರಪತಿಯಿಂದ ಒಪ್ಪಿಗೆ ಸಿಕ್ಕಿ, ಆಯುಕ್ತರಾಗಿ ಮಿಂಚಿನ ವೇಗದಲ್ಲಿ ನೇಮಕವೂ ಆಗಿದೆ. ಅವರ ಸಾಮರ್ಥ್ಯವನ್ನು ಅದ್ಯಾವ ರೀತಿಯಲ್ಲಿ ಮೌಲ್ಯಮಾಪನ ಮಾಡಿದ್ದೀರಿ? ಹಾಗಂತ ನಾವಿಲ್ಲಿ ಅರುಣ್ ಗೋಯೆಲ್ರ ಅರ್ಹತೆಯನ್ನು ಪ್ರಶ್ನಿಸುತ್ತಿಲ್ಲ. ಅವರ ನೇಮಕಾತಿಯ ಪ್ರಕ್ರಿಯೆ ಬಗ್ಗೆಯಷ್ಟೇ ಪ್ರಶ್ನೆ ಮಾಡುತ್ತಿದ್ದೇವೆ. ನಿಜಕ್ಕೂ ಅವರ ನೇಮಕಾತಿ ಸರಿಯಾಗಿ ಆಗಿದೆಯೇ, ಅದು ತೃಪ್ತಿದಾಯಕವಾಗಿದೆಯೇ ಎಂದು ನಾವು ತಿಳಿಯಲು ಬಯಸುತ್ತೇವೆ’ ಎಂದು ನ್ಯಾ.ಕೆ.ಎಂ.ಜೋಸೆಫ್ ಕೇಂದ್ರಕ್ಕೆ ಪ್ರಶ್ನಿಸಿದರು.
ಆಗ ಕೇಂದ್ರದ ಪರ ವಾದಿಸುತ್ತಿರುವ ಅಟಾರ್ನಿ ಜನರಲ್ ವಿ. ವೆಂಕಟರಮಣಿಯವರು ಪ್ರತಿಕ್ರಿಯೆ ನೀಡಿ ‘ದಯವಿಟ್ಟು ಕೆಲಕಾಲ ನೀವು ಸುಮ್ಮನಿರಿ ’ ಎಂದು ಸುಪ್ರೀಂಕೋರ್ಟ್ ಪೀಠದಲ್ಲಿದ್ದ ನ್ಯಾಯಮೂರ್ತಿಗಳಿಗೆ ಹೇಳಿದರು. ಅಷ್ಟೇ ಅಲ್ಲ, ‘ಅರುಣ್ ಗೋಯೆಲ್ ವಿಷಯವನ್ನು ಸರ್ವೋಚ್ಛ ನ್ಯಾಯಾಲಯ ಇನ್ನಷ್ಟು ಆಳವಾಗಿ, ಸಮಗ್ರವಾಗಿ ಪರಿಶೀಲನೆ ಮಾಡಬೇಕು’ ಎಂದು ಹೇಳಿದರು. ಬುಧವಾರ ಕೇಂದ್ರದ ಪರ ವಾದ ಮಂಡಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಕೇಂದ್ರ ಸರ್ಕಾರ ಅರುಣ್ ಗೋಯೆಲ್ ಅವರ ನೇಮಕ ಮಾಡಿದ ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡಿದ್ದರು. ಇದರಲ್ಲಿ ಸುಪ್ರೀಂಕೋರ್ಟ್ ಹಸ್ತಕ್ಷೇಪ ಬೇಡ ಎಂದೂ ವಾದಿಸಿದ್ದರು.
ಇದನ್ನೂ ಓದಿ: Supreme Court | ಪ್ರಧಾನಿ ವಿರುದ್ಧ ಎಲೆಕ್ಷನ್ ಕಮಿಷನರ್ ಕ್ರಮ ಕೈಗೊಳ್ಳುತ್ತಾರೆಯೇ? ಆ ಶಕ್ತಿ ಇದೆಯೇ? ಎಂದ ಸುಪ್ರೀಂ ಕೋರ್ಟ್