ಜಾರಿ ನಿರ್ದೇಶನಾಲಯದ ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ (Sanjay Kumar Mishra) ಅವರ ಅಧಿಕಾರ ಅವಧಿಯನ್ನು ಮೂರನೇ ಬಾರಿಗೆ ವಿಸ್ತರಿಸಿದ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ (Supreme Court) ಅಸಮಾಧಾನ ವ್ಯಕ್ತಪಡಿಸಿದೆ. ‘ಒಬ್ಬನೇ ವ್ಯಕ್ತಿ ಸಂಸ್ಥೆಗೆ ಇಷ್ಟರ ಮಟ್ಟಿಗೆ ಅನಿವಾರ್ಯನಾಗುತ್ತಾನಾ?’ ಎಂದೂ ಪ್ರಶ್ನೆ ಮಾಡಿದೆ. ಅಷ್ಟೆ ಅಲ್ಲ ‘ಸಂಜಯ್ ಕುಮಾರ್ ಮಿಶ್ರಾ ಈಗ ಮಾಡುತ್ತಿರುವ ಕೆಲಸ ಮಾಡಲು ಆ ಸಂಸ್ಥೆಯಲ್ಲಿ ಇನ್ನೊಬ್ಬರು ಇಲ್ಲವಾ? ನಿಮ್ಮ ಪ್ರಕಾರ ಇಡಿಗೆ ನಿರ್ದೇಶಕನಾಗಬಲ್ಲ ಸಮರ್ಥ ವ್ಯಕ್ತಿ ಇಲ್ವೇ ಇಲ್ವಾ? ಆಯಿತು, 2023ರ ನವೆಂಬರ್ನಲ್ಲಿ ಸಂಜಯ್ ಕುಮಾರ್ ಮಿಶ್ರಾ ನಿವೃತ್ತರಾಗಲೇಬೇಕು. ಅದಾದ ಮೇಲೆ ಏನು ಮಾಡುತ್ತೀರಿ?’ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತೀಕ್ಷ್ಣವಾಗಿ ಪ್ರಶ್ನೆ ಮಾಡಿದೆ.
62 ವರ್ಷದ ಸಂಜಯ್ ಮಿಶ್ರಾ ಅವರು 1984ನೇ ಬ್ಯಾಚ್ನ ಭಾರತೀಯ ಕಂದಾಯ ಸೇವೆ (IRS)ಅಧಿಕಾರಿ. ಇವರನ್ನು 2018ರ ನವೆಂಬರ್ 19ರಂದು ಇ.ಡಿ ನಿರ್ದೇಶಕರನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿತ್ತು. ನಿಯಮದ ಪ್ರಕಾರ ಅವರ ಆಡಳಿತ ಅವಧಿ 2ವರ್ಷಕ್ಕೆ ಅಂದರೆ 2020ಕ್ಕೆ ಮುಕ್ತಾಯವಾಗಬೇಕಿತ್ತು. ಆದರೆ ಕೇಂದ್ರ ಸರ್ಕಾರ 2020ರಲ್ಲಿ ಅವರ ಅಧಿಕಾರ ಅವಧಿಯನ್ನು 1 ವರ್ಷದವರೆಗೆ ವಿಸ್ತರಣೆ ಮಾಡಿತು. ಅದಾದ ಬಳಿಕ 2021ರಲ್ಲಿ ಇಡಿ ಮತ್ತು ಸಿಬಿಐ ಮುಖ್ಯಸ್ಥರ ಅಧಿಕಾರ ಅವಧಿಗೆ ಸಂಬಂಧಪಟ್ಟಂತೆ ಒಂದು ಸುಗ್ರೀವಾಜ್ಞೆ ಹೊರಡಿಸಿ ‘ಇ.ಡಿ.ಮತ್ತು ಸಿಬಿಐ ಮುಖ್ಯಸ್ಥರ ಅಧಿಕಾರ ಅವಧಿಯನ್ನು ಮೂರು ಬಾರಿ ವಿಸ್ತರಣೆ ಮಾಡಬಹುದು. ಅಂದರೆ ಒಬ್ಬರು ಅವರ 2 ವರ್ಷಗಳ ಕಡ್ಡಾಯ ಅಧಿಕಾರ ಅವಧಿಯ ಬಳಿಕ ಮತ್ತೆ ಮೂರು ವರ್ಷಗಳ ಕಾಲ ಆಡಳಿತ ನಡೆಸಬಹುದು’ ಎಂದು ಹೇಳಿತು. ಈ ಸುಗ್ರೀವಾಜ್ಞೆಯನ್ನು ಸಂಜೀವ್ ಕುಮಾರ್ ಮಿಶ್ರಾ ವಿಷಯದಲ್ಲಿ ಅದು ಅನ್ವಯ ಮಾಡುತ್ತ ಬಂದಿದೆ. 2020, 2021 ಮತ್ತು 2022ರಲ್ಲಿ ಸಂಜೀವ್ ಕುಮಾರ್ ಮಿಶ್ರಾರ ಅಧಿಕಾರ ಅವಧಿಯನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ಅದರ ಅನ್ವಯ 2023ರ ನವೆಂಬರ್ 18ಕ್ಕೆ ಅವರು ನಿವೃತ್ತರಾಗಲೇಬೇಕಾಗುತ್ತದೆ.
ಇದನ್ನೂ ಓದಿ: Kiccha Sudeep: ಐಟಿ-ಇಡಿಗೆ ಬೆದರಿ ಬಿಜೆಪಿಗೆ ಸುದೀಪ್ ಬೆಂಬಲ ಎಂದ ಸುರ್ಜೆವಾಲ: ಬಿಜೆಪಿ ಪಾಳೆಯ ಕೆಂಡಾಮಂಡಲ
ಆದರೆ ಸಂಜಯ್ ಕುಮಾರ್ ಮಿಶ್ರಾ ಅವರ ಅಧಿಕಾರ ಅವಧಿಯನ್ನು ಪದೇಪದೆ ವಿಸ್ತರಣೆ ಮಾಡಿದ್ದರ ವಿರುದ್ಧ 10-12 ಅರ್ಜಿದಾರರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಬಿ.ಆರ್.ಗವಿ, ವಿಕ್ರಮ್ ನಾಥ್ ಮತ್ತು ಸಂಜಯ್ ಕರೋಲ್ ಪೀಠ ನಡೆಸುತ್ತಿದೆ. ಸಂಜಯ್ ಮಿಶ್ರಾರ ಅಧಿಕಾರ ಅವಧಿ ವಿಸ್ತರಣೆಯನ್ನು ಸಮರ್ಥಿಸಿಕೊಂಡ ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ‘ಕೆಲವು ಆಡಳಿತಾತ್ಮಕ ಕಾರಣಕ್ಕೋಸ್ಕರ ಸಂಜಯ್ ಕುಮಾರ್ ಮಿಶ್ರಾ ಆಡಳಿತ ಅವಧಿಯನ್ನು ವಿಸ್ತರಿಸಬೇಕಾದ ಅನಿವಾರ್ಯತೆ ಇತ್ತು’ ಎಂದು ಹೇಳಿದ್ದಾರೆ. ಆದರೆ ಸುಪ್ರೀಂಕೋರ್ಟ್ ಇದರಿಂದೇನೂ ಸಮಾಧಾನಗೊಳ್ಳಲಿಲ್ಲ. ವಿಚಾರಣೆಯನ್ನು ಮೇ 8ಕ್ಕೆ ಮುಂದೂಡಿದೆ.