ನವ ದೆಹಲಿ: ವಿದ್ಯಾರ್ಥಿನಿಯರಿಗೆ ಅವರು ಓದುತ್ತಿರುವ ಶಾಲಾ/ಕಾಲೇಜು ಮತ್ತು ಮಹಿಳೆಯರಿಗೆ ಅವರು ಕೆಲಸ ಮಾಡುತ್ತಿರುವ ಕಂಪನಿ/ಕಚೇರಿಗಳಲ್ಲಿ ಮುಟ್ಟಿನ ನೋವಿನ ರಜೆ (Menstrual Pain Leave) ನೀಡಲು ಅಗತ್ಯ ನಿಯಮಗಳನ್ನು ರೂಪಿಸುವಂತೆ ಎಲ್ಲ ರಾಜ್ಯಸರ್ಕಾರಗಳಿಗೂ ಸೂಚನೆ ನೀಡಬೇಕು ಎಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ‘ಇದು ಸರ್ಕಾರದ ವ್ಯಾಪ್ತಿಗೆ ಬರುವ ವಿಚಾರವಾಗಿದೆ. ಈ ಬಗ್ಗೆ ನೀತಿ ರೂಪಿಸುವಂತೆ ನೀವು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವನ್ನು ಸಂಪರ್ಕಿಸಬಹುದು’ ಎಂದು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವ ವಹಿಸಿದ್ದ, ನ್ಯಾ. ಪಿ.ಎಸ್.ನರಸಿಂಹ ಮತ್ತು ನ್ಯಾ. ಜೆ.ಬಿ.ಪಾರ್ಡಿವಾಲಾ ಅವರಿದ್ದ ಪೀಠ ಅರ್ಜಿದಾರರಿಗೆ ತಿಳಿಸಿದೆ.
ಮಹಿಳೆಯರು/ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ನೀಡಬೇಕಾಗಿರುವ ಬಗ್ಗೆ ನೀತಿ-ನಿಯಮ ರೂಪಿಸಬೇಕಾಗಿದ್ದು ಸರ್ಕಾರ. ನಾವು ಈ ವಿಷಯದಲ್ಲಿ ಏನೂ ಮಾಡಲಾಗದು. ಅರ್ಜಿದಾರರು ಕೇಂದ್ರ ಇಲಾಖೆಗೇ ಈ ಬಗ್ಗೆ ಮನವಿ ಮಾಡಬಹುದು. ಹಾಗಾಗಿ ನಾವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿದ್ದೇವೆ ಎಂದು ಸುಪ್ರೀಂಕೋರ್ಟ್ ಪೀಠ ಹೇಳಿದೆ. ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ನೋವಿರುತ್ತದೆ. ಹಾಗಾಗಿ ಶಾಲಾ-ಕಾಲೇಜು/ಕೆಲಸದ ಸ್ಥಳಗಳಲ್ಲಿ ಅವರಿಗೆ ಆ ದಿನದ ರಜೆಯನ್ನೂ ನಿಗದಿಪಡಿಸಬೇಕು. ಈ ಬಗ್ಗೆ ಎಲ್ಲ ರಾಜ್ಯಗಳಿಗೂ ಕೇಂದ್ರ ಸರ್ಕಾರ ಸೂಚನೆ ನೀಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಹೇಳಬೇಕು ಎಂದು ದೆಹಲಿಯ ನಿವಾಸಿ ಶೈಲೇಂದ್ರ ಮಣಿ ತ್ರಿಪಾಠಿ ಎಂಬುವರು, ವಕೀಲರಾದ ವಿಶಾಲ್ ತಿವಾರಿ ಮೂಲಕ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಫೆ.15ರಂದು ಸುಪ್ರೀಂಕೋರ್ಟ್ ಹೇಳಿತ್ತು. ಆದರೆ ಅದನ್ನು ಕೈಗೆತ್ತಿಕೊಂಡರೂ ವಿಚಾರಣೆ ಮುಂದುವರಿಸಲು ಸುಪ್ರೀಂಕೋರ್ಟ್ ಒಪ್ಪಲಿಲ್ಲ.
ಇದನ್ನೂ ಓದಿ: Menstrual Leave: ಕೇರಳದ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ವಿದ್ಯಾರ್ಥಿನಿಯರಿಗೆ ಇನ್ಮುಂದೆ ಸಿಗಲಿದೆ ಮುಟ್ಟಿನ ರಜೆ
ಹಾಗೇ, ಈ ಅರ್ಜಿಗೆ ಪ್ರತಿಯಾಗಿ ಕಾನೂನು ವಿದ್ಯಾರ್ಥಿನಿಯೊಬ್ಬರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ‘ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಮುಟ್ಟಿನ ರಜೆ ನೀಡುವ ನಿಯಮ ಬಂದರೆ, ಕಂಪನಿಗಳು/ಕಚೇರಿಗಳು ಮಹಿಳೆಯರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳುವ ಪ್ರಮಾಣವೂ ಕಡಿಮೆಯಾಗಬಹುದು. ಯಾಕೆಂದರೆ ಒಬ್ಬ ಮಹಿಳೆಗೆ ಪ್ರತಿತಿಂಗಳೂ ಹೀಗೆ ರಜೆ ಕೊಡಬೇಕು ಎಂದಾಗ ಸಹಜವಾಗಿಯೇ ಕಂಪನಿ/ಕಚೇರಿಗಳು ತಮಗೆ ಕೆಲಸ ಆಗುವುದಿಲ್ಲ ಎಂಬ ಅಂಶವನ್ನೇ ವಿಚಾರ ಮಾಡುತ್ತವೆ’ ಎಂದು ಹೇಳಿದ್ದರು. ಇದನ್ನೂ ಕೂಡ ಕೋರ್ಟ್ ಗಮನಿಸಿದ್ದು, ಸರ್ಕಾರವನ್ನು ಸಂಪರ್ಕಿಸಿ ಎಂದು ಹೇಳಿದೆ.
ಕೇರಳ ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಡಿ ಬರುವ ಎಲ್ಲ ವಿಶ್ವವಿದ್ಯಾಲಯಗಳ ವಿದ್ಯಾರ್ಥಿನಿಯರಿಗೂ ಮುಟ್ಟಿನ ರಜೆಯನ್ನು ನಿಗದಿಪಡಿಸಲಾಗಿದೆ. ಮೊಟ್ಟಮೊದಲು ಅಲ್ಲಿನ ಕೊಚ್ಚಿನ್ ಯೂನಿವರ್ಸಿಟಿ ಈ ನಿರ್ಧಾರವನ್ನು ಪ್ರಕಟಿಸಿತ್ತು. ಅದರ ಬೆನ್ನಲ್ಲೇ ಆ ನಿಯಮವನ್ನು ಎಲ್ಲ ಯೂನಿವರ್ಸಿಟಿಗಳಿಗೂ ವ್ಯಾಪಿಸಲಾಗಿದೆ.