ಪಟನಾ: ಬಿಹಾರದಲ್ಲಿ ಜಾತಿ ಸಮೀಕ್ಷೆ ನಡೆಸಿದ್ದ ನಿತೀಶ್ ಕುಮಾರ್ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಜಾತಿ ಸಮೀಕ್ಷೆಗೆ (Bihar Caste Survey) ಪಟನಾ ಹೈಕೋರ್ಟ್ ನೀಡಿದ ತಡೆಯಾಜ್ಞೆಯನ್ನು ತೆರವುಗೊಳಿಸಲು ಸುಪ್ರೀಂ ಕೋರ್ಟ್ ನಕಾರ ವ್ಯಕ್ತಪಡಿಸಿದೆ. “ಜಾತಿ ಸಮೀಕ್ಷೆಯ ಹೆಸರಿನಲ್ಲಿ ಜಾತಿ ಗಣತಿ ನಡೆದಿದೆಯೇ ಎಂಬ ಕುರಿತು ಪರಿಶೀಲನೆ ಮಾಡುವ ಅಗತ್ಯವಿದೆ. ಹಾಗಾಗಿ, ಪಟನಾ ಹೈಕೋರ್ಟ್ ನೀಡಿದ ಆದೇಶ ತೆರವುಗೊಳಿಸುವುದಿಲ್ಲ” ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಹಾಗೂ ರಾಜೇಶ್ ಬಿಂದಾಲ್ ನೇತೃತ್ವದ ನ್ಯಾಯಪೀಠ ತಿಳಿಸಿತು.
“ನಿಮಗೆ ಸ್ಪಷ್ಟವಾಗಿ ಹೇಳುತ್ತಿದ್ದೇವೆ. ಇದು ಮಧ್ಯಂತರ ಆದೇಶ ನೀಡುವ ಪ್ರಕರಣ ಅಲ್ಲ. ಹಾಗಾಗಿ, ಪಟನಾ ಹೈಕೋರ್ಟ್ ತಡೆಯಾಜ್ಞೆಯನ್ನು ತೆರವುಗೊಳಿಸಲು ಆಗುವುದಿಲ್ಲ” ಎಂದು ತಿಳಿಸಿತು. ಹಾಗೆಯೇ, ಪ್ರಮುಖ ಅರ್ಜಿಯನ್ನು ಜುಲೈ 3ರಂದು ವಿಚಾರಣೆ ನಡೆಸಲಾಗುವುದು ಎಂದು ಹೇಳಿತು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯವನ್ನು ತಲುಪಿಸುವ ಸಲುವಾಗಿ, ಹಿಂದುಳಿದ ವರ್ಗದವರಿಗೂ ಅನುಕೂಲ ಮಾಡಿಕೊಡಬೇಕು ಎಂಬ ಕಾರಣಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದಲ್ಲಿ ಜಾತಿ ಜನಗಣತಿ ಪ್ರಾರಂಭಿಸಿದ್ದರು. ಹಾಗೇ ಈ ಜಾತಿ ಜನಗಣತಿಯನ್ನು 2ಹಂತದಲ್ಲಿ ನಡೆಸುವುದಾಗಿಯೂ ಅವರು ತಿಳಿಸಿದ್ದರು. ಆದರೆ ಬಿಹಾರದಲ್ಲಿ ನಡೆಸಲಾಗುತ್ತಿರುವ ಜಾತಿ ಜನಗಣತಿ ಸಮೀಕ್ಷೆ ವಿರುದ್ಧ ಹಲವರು ಪಟನಾ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: Caste census: ಜಾತಿ ಜನಗಣತಿ ಕೂಡಲೇ ನಿಲ್ಲಿಸಿ; ಬಿಹಾರ ಸರ್ಕಾರಕ್ಕೆ ಹೈಕೋರ್ಟ್ನಿಂದ ಆದೇಶ
ಜಾತಿ ಜನಗಣತಿ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡ ಪಟನಾ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಕೆ.ವಿನೋದ್ ಚಂದ್ರನ್ ಮತ್ತು ನ್ಯಾ..ಮಧುರೇಶ್ ಪ್ರಸಾದ್ ಅವರನ್ನೊಳಗೊಂಡ ವಿಭಾಗೀಯ ಪೀಠ ‘ಕೂಡಲೇ ಜಾತಿ ಜನಗಣತಿ ಸಮೀಕ್ಷೆಯನ್ನು ನಿಲ್ಲಿಸಿ’ ಎಂದು ಆದೇಶಿಸಿದೆ. ಅಷ್ಟೇ ಅಲ್ಲ, ‘ ಜಾತಿ ಆಧಾರಿತ ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವೇ ಇರುವುದಿಲ್ಲ. ಇದುವರೆಗಿನ ಸಮೀಕ್ಷೆಯಲ್ಲಿ ಸಂಗ್ರಹಿಸಿದ ಡೇಟಾ (ದತ್ತಾಂಶ)ಗಳನ್ನು ಎಲ್ಲಿಯೂ ಬಹಿರಂಗಪಡಿಸಬಾರದು ಮತ್ತು ಅದನ್ನು ಸುರಕ್ಷಿತವಾಗಿ ಇಡಬೇಕು. ಈ ಕೇಸ್ನ ಅಂತಿಮ ತೀರ್ಪು ಬರುವವರೆಗೂ ಡೇಟಾ ಸೋರಿಕೆಯಾಗಬಾರದು’ ಎಂದು ಹೇಳಿತ್ತು.