ನವದೆಹಲಿ: ತಾಜ್ಮಹಲ್ ಮೂಲದಲ್ಲಿ ಒಂದು ಶಿವಾಲಯವಾಗಿತ್ತು. ಬಳಿಕ ಮೊಘಲ್ ದೊರೆ ಷಹಜಹಾನ್ ಅದನ್ನು ತನ್ನ ಪತ್ನಿ ಮುಮ್ತಾಜ್ ಸಮಾಧಿಯಾಗಿ ಪರಿವರ್ತಿಸಿದ. ಹೀಗಾಗಿ ಸತ್ಯ ಶೋಧನೆ ಮಾಡಬೇಕು. ತಾಜ್ಮಹಲ್ನಲ್ಲಿ 22 ಮುಚ್ಚಿದ ಕೋಣೆಗಳು ಇದ್ದು, ಅವುಗಳ ಬಾಗಿಲು ತೆಗೆಸಬೇಕು. ಅದರಲ್ಲಿ ಹಿಂದು ದೇವರ ವಿಗ್ರಹಗಳ ಇವೆಯಾ ಪರಿಶೀಲನೆ ನಡೆಸಬೇಕು. ಈ ಮೂಲಕ ಸತ್ಯ ಹೊರಗೆ ಬರುವಂತಾಗಬೇಕು ಎಂದು ಸುಪ್ರೀಂಕೋರ್ಟ್ಗೆ ಸಲ್ಲಿಕೆಯಾಗಿದ್ದ ಅರ್ಜಿ ತಿರಸ್ಕೃತಗೊಂಡಿದೆ. ಸುಪ್ರಿಂಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಎಂ.ಎಂ.ಸುಂದರೇಶ್ ನೇತೃತ್ವದ ಪೀಠ ಅರ್ಜಿಯನ್ನು ತಿರಸ್ಕಾರ ಮಾಡಿದೆ. ಈ ಮೂಲಕ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪಿನ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದೆ. ಹಾಗೇ, ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲ, ಪ್ರಚಾರಕ್ಕಾಗಿ ಸಲ್ಲಿಸಿದ ಅರ್ಜಿ ಎಂದೂ ಟೀಕಿಸಿದೆ.
ತಾಜ್ಮಹಲ್ ವಿಚಾರದಲ್ಲಿ ಹೆಚ್ಚಿನ ತನಿಖೆ ಆಗಬೇಕು ಎಂದು ಬಿಜೆಪಿ ಅಯೋಧ್ಯಾ ಘಟಕದ ಉಸ್ತುವಾರಿ ರಜನೀಶ್ ಸಿಂಗ್ ಮೇ 12ರಂದು ಅಲಹಾಬಾದ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ತಾಜ್ಮಹಲ್ನ್ನು ಅತಿಕ್ರಮಣ ಮಾಡಲಾಗಿದೆ ಎಂಬುದನ್ನು ಕಾನೂನು ಮತ್ತು ಸಂವಿಧಾನ ಬದ್ಧವಾಗಿ ಸಾಕ್ಷೀಕರಿಸಲು ವಿಫಲರಾಗಿದ್ದರು. ಹೀಗಾಗಿ ತಾಜ್ಮಹಲ್ ಶೋಧಕ್ಕೆ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಈ ಹೈಕೋರ್ಟ್ ತೀರ್ಪಿನ ವಿರುದ್ಧ ರಜನೀಶ್ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಸುಪ್ರೀಂಕೋರ್ಟ್ ‘ಇದೊಂದು ಪ್ರಚಾರಾಸಕ್ತಿ ಅರ್ಜಿ ಎನ್ನಿಸುತ್ತಿದೆ. ಈಗಾಗಲೇ ಈ ಬಗ್ಗೆ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಹೈಕೋರ್ಟ್ ಆದೇಶದಲ್ಲಿ ಯಾವುದೇ ತಪ್ಪು ಇಲ್ಲ’ ಎಂದು ಹೇಳಿದೆ.
ಮೊಘಲ್ ರಾಜ ಷಜಹಾನ್ ಆಳ್ವಿಕೆಯಲ್ಲಿ, ತಾಜ್ಮಹಲ್ನ್ನು 1632ರಿಂದ ಕಟ್ಟಲು ಪ್ರಾರಂಭಿಸಿ 1653ರಲ್ಲಿ ಪೂರ್ಣಗೊಳಿಸಲಾಯಿತು ಎಂದು ಹೇಳಲಾಗುತ್ತದೆ. ಆದರೆ ಭಾರತದಲ್ಲಿ ಮೊಘಲರ ಆಳ್ವಿಕೆ ಪ್ರಾರಂಭಕ್ಕೂ ಮೊದಲೇ ಇಲ್ಲಿ ಈ ಸ್ಮಾರಕ ಇತ್ತು. ಅದು ಶಿವನ ದೇವಸ್ಥಾನ ಆಗಿತ್ತು ಎಂದು ಕೆಲವು ಹಿಂದು ಸಂಘಟನೆಗಳು, ಇತಿಹಾಸ ತಜ್ಞರು ಹೇಳುತ್ತಿದ್ದಾರೆ. ಅದರಲ್ಲೂ ಆ 22 ಕೋಣೆಗಳು ಮೊದಲು ತೆರೆದೇ ಇದ್ದವು. ಕಳೆದ 45 ವರ್ಷಗಳಿಂದಲ ಅಲ್ಲಿಗೆ ಯಾರಿಗೂ ಪ್ರವೇಶ ಕೊಡುತ್ತಿಲ್ಲ ಎಂದು ರಜನೀಶ್ ತಮ್ಮ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದರು.
ಇದನ್ನೂ ಓದಿ: ಸದ್ಯ ಬಗೆಹರಿಯಲ್ಲ TAJ MAHAL ಮುಚ್ಚಿದ ಕೋಣೆಗಳ ರಹಸ್ಯ, ಅರ್ಜಿ ವಜಾಗೊಳಿಸಿದ ಹೈಕೋರ್ಟ್