ತಿರುವನಂತಪುರಂ: ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಅವರನ್ನು ಬೇಹುಗಾರಿಕಾ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸಿದ ಆರೋಪ ಎದುರಿಸುತ್ತಿರುವ ಗುಪ್ತಚರ ದಳದ ಮಾಜಿ ಅಧಿಕಾರಿಗಳು ಮತ್ತು ಕೇರಳ ರಾಜ್ಯ ಮಾಜಿ ಪೊಲೀಸ್ ಅಧಿಕಾರಿಗಳು ಸೇರಿ ಒಟ್ಟು ನಾಲ್ವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ, ಕೇರಳ ಹೈಕೋರ್ಟ್ 2021ರಲ್ಲಿ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಇಂದು ರದ್ದುಗೊಳಿಸಿದೆ.
ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ವಿಜ್ಞಾನಿಯಾಗಿದ್ದ ನಂಬಿನಾರಾಯಣ್ ಅವರು ಬೇಹುಗಾರಿಕೆ ಕೇಸ್ನಲ್ಲಿ 1994ರಲ್ಲಿ ಬಂಧಿತರಾಗಿದ್ದರು. ಅಂದು ಅವರ ಸಹೋದ್ಯೋಗಿಯೊಬ್ಬರು ನೀಡಿದ ಹೇಳಿಕೆಯನ್ನಾಧರಿಸಿ ಕೇರಳ ಪೊಲೀಸರು ನಂಬಿನಾರಾಯಣ್ರನ್ನೂ ಬಂಧಿಸಿದ್ದರು. ಆದರೆ ನಂಬಿನಾರಾಯಣ್ ತಪ್ಪೇನೂ ಇಲ್ಲ. ಅವರನ್ನು ಸುಳ್ಳು ಕೇಸ್ನಲ್ಲಿ ಸಿಲುಕಿಸಲಾಗಿದೆ ಎಂದು ಸಿಬಿಐ ತನಿಖೆಯಲ್ಲಿ ದೃಢಪಟ್ಟಿತ್ತು. ಜೈಲಿನಿಂದ ಅವರು ಬಿಡುಗಡೆಯಾಗಿದ್ದರು. ಇನ್ನು ನಂಬಿನಾರಾಯಣ್ ಅವರನ್ನು ಸುಳ್ಳು ಕೇಸ್ನಲ್ಲಿ ಸಿಲುಕಿಸಿದ ನಾಲ್ವರನ್ನು ಸಿಬಿಐ ತನ್ನ ವರದಿಯಲ್ಲಿ ಹೆಸರಿಸಿತ್ತು.
ಜೈಲಿಂದ ಬಿಡುಗಡೆಯಾದ ನಂಬಿನಾರಾಯಣ್, ತನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ ಪೊಲೀಸ್ ಅಧಿಕಾರಿಗಳು, ಗುಪ್ತಚರ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಆಗ್ರಹಿಸಿ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೊಟ್ಟಿದ್ದರು ಮತ್ತು ಕೇರಳ ಹೈಕೋರ್ಟ್ಗಳು ಅರ್ಜಿ ಸಲ್ಲಿಸಿದ್ದರು. ಆದರೆ ಕೇರಳ ಹೈಕೋರ್ಟ್ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ ನಂಬಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ನಂಬಿನಾರಾಯಣ್ರನ್ನು ಸುಳ್ಳು ಕೇಸ್ನಲ್ಲಿ ಬಂಧಿಸಿದ ಕೇಸ್ನ್ನು ತನಿಖೆ ಮಾಡಲು 2018ರಲ್ಲಿ ಸುಪ್ರೀಂಕೋರ್ಟ್, ಮೂವರು ಸದಸ್ಯರ ಸಮಿತಿಯನ್ನು ನೇಮಿಸಿತು. ಅಷ್ಟೇ ಅಲ್ಲ, ನಂಬಿನಾರಾಯಣ್ರನ್ನು ನಕಲಿ ಕೇಸ್ನಲ್ಲಿ ಬಂಧಿಸಿ, ಅವರಿಗೆ ಮಾನಸಿಕ ಹಿಂಸೆ ನೀಡಿದ್ದಕ್ಕೆ ಪರಿಹಾರವಾಗಿ 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೇರಳ ಸರ್ಕಾರಕ್ಕೆ ಆದೇಶ ನೀಡಿತ್ತು.
ಇನ್ನೊಂದೆಡೆ ತನ್ನನ್ನು ಸುಳ್ಳು ಕೇಸ್ನಲ್ಲಿ ಸಿಲುಕಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸುಪ್ರೀಂಕೋರ್ಟ್ಗೆ ನಂಬಿ ನಾರಾಯಣ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯುತ್ತಿತ್ತು. ಈ ಅಧಿಕಾರಿಗಳ ಬಗ್ಗೆ ತನಿಖೆ ನಡೆಸುವ ಹೊಣೆಯನ್ನು ಸುಪ್ರೀಂಕೋರ್ಟ್ 2021ರಲ್ಲಿ ಸಿಬಿಐಗೆ ಸಲ್ಲಿಸಿತು. ಇದೇ ಹೊತ್ತಲ್ಲಿ ಅಧಿಕಾರಿಗಳು ನಿರೀಕ್ಷಣಾ ಜಾಮೀನು ನೀಡುವಂತೆ ಕೇರಳ ಹೈಕೋರ್ಟ್ಗೆ ಹೋಗಿದ್ದರು. ಅದವರಿಗೆ ಮಂಜೂರು ಆಗಿತ್ತು.
ಆದರೆ ಈಗ ನ್ಯಾಯಮೂರ್ತಿ ಎಂ.ಆರ್.ಶಾ ಮತ್ತು ಸಿಟಿ ರವಿಕುಮಾರ್ ಇದ್ದ ಸುಪ್ರೀಂಕೋರ್ಟ್ನ ಪೀಠ ಮಹತ್ವದ ಆದೇಶ ನೀಡಿದೆ. ನಾಲ್ವರು ಅಧಿಕಾರಿಗಳಿಗೆ ನೀಡಿದ್ದ ನಿರೀಕ್ಷಣಾ ಮಂಜೂರು ರದ್ದುಗೊಳಿಸಿದೆ. ಆ ಅಧಿಕಾರಿಗಳಿಗೆ ಅರ್ಜಿಯನ್ನು ಹೊಸದಾಗಿ ಸಲ್ಲಿಸುವಂತೆ ಹೇಳಿ. ನಾಲ್ಕು ವಾರಗಳಲ್ಲಿ ಇತ್ಯರ್ಥ ಮಾಡಿ ಎಂದು ಕೇರಳ ಹೈಕೋರ್ಟ್ಗೆ ಸೂಚಿಸಿದೆ. ಇನ್ನು ಆರೋಪಿಗಳು ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದರೆ 5 ವಾರಗಳವರೆಗೂ ಅವರನ್ನು ಬಂಧಿಸಬಾರದು. ಅಷ್ಟರಲ್ಲಿ ಹೈಕೋರ್ಟ್ ಈ ಅರ್ಜಿ ಇತ್ಯರ್ಥ ಮಾಡಬೇಕು ಎಂದು ಹೇಳಿದೆ.
ಇದನ್ನೂ ಓದಿ: ಬಾಹ್ಯಾಕಾಶ | ಇಸ್ರೋದ ನೂತನ SSLV ನಿಜಕ್ಕೂ ವಿಫಲವಾಯಿತೇ?