Site icon Vistara News

22 ವರ್ಷದ ಹಳೆಯ ಕೊಲೆ ಕೇಸ್​; ಕೇಂದ್ರ ಸಚಿವರ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್​, ನ.10ಕ್ಕೆ ಅಂತಿಮ ತೀರ್ಪು

Supreme Court Setback For Minister Ajay Mishra in 22 Years old Murder Case

22 ವರ್ಷ ಹಳೆಯದಾದ ಕೊಲೆ ಕೇಸ್​ವೊಂದರಲ್ಲಿ ತನಗೆ ಕೋರ್ಟ್​​ನಿಂದ ಸಿಕ್ಕಿದ್ದ ಖುಲಾಸೆಯನ್ನು ಮರುಪ್ರಶ್ನಿಸಿ 2004ರಲ್ಲಿ ಉತ್ತರ ಪ್ರದೇಶದಲ್ಲಿ ಇದ್ದ ಸಮಾಜವಾದಿ ಪಕ್ಷದ ಸರ್ಕಾರ ಸುಪ್ರೀಂಕೋರ್ಟ್​ಗೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಅಲಹಾಬಾದ್​ ಹೈಕೋರ್ಟ್​ನ ಲಖನೌಪೀಠದಿಂದ ಪ್ರಯಾಗ್​ರಾಜ್​ ಪೀಠಕ್ಕೆ ವರ್ಗಾಯಿಸಿಕೊಡಬೇಕು ಎಂದು ಕೇಂದ್ರ ಸಚಿವ, ಬಿಜೆಪಿ ನಾಯಕ ಅಜಯ್​ ಮಿಶ್ರಾ ತೇನಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ತಿರಸ್ಕರಿಸಿದೆ.

ಹೈಕೋರ್ಟ್​ನ ಲಖನೌದಲ್ಲಿರುವ ಪೀಠದಲ್ಲಿ ಕೇಸ್​ ವಿಚಾರಣೆ ನಡೆಯುತ್ತಿದೆ. ಆದರೆ ನನ್ನ ಪರ ವಾದಿಸುತ್ತಿರುವ ವಕೀಲರು ವಯಸ್ಸಾದವರು. ಅವರು ಅಲಹಾಬಾದ್​ನಲ್ಲಿಯೇ ನೆಲೆಸಿದ್ದಾರೆ. ವಾದ ಮಂಡನೆಗಾಗಿ ಲಖನೌಗೆ ತೆರಳಲು ಅವರಿಗೆ ಕಷ್ಟವಾಗುತ್ತಿದೆ. ಹೈಕೋರ್ಟ್​​ನ ಪ್ರಯಾಗ್​ರಾಜ್​ ಪೀಠ ಅಲಹಾಬಾದ್​ನಲ್ಲೇ ಇದೆ. ಹೀಗಾಗಿ ಪ್ರಯಾಗ್​ರಾಜ್​ ಪೀಠಕ್ಕೆ ವರ್ಗಾಯಿಸಿಕೊಟ್ಟರೆ ಅನುಕೂಲವಾಗುತ್ತದೆ ಎಂದು ಅಜಯ್​ ಮಿಶ್ರಾ ಸುಪ್ರೀಂಕೋರ್ಟ್​ಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದರು. ಆದರೆ ಈ ಅರ್ಜಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಸುಪ್ರೀಂಕೋರ್ಟ್​​ನ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್​ ಮತ್ತು ಬೇಲಾ ಎಂ. ತ್ರಿವೇದಿ ಅವರನ್ನು ಒಳಗೊಂಡ ಪೀಠ, ‘ಹಿರಿಯ ವಕೀಲರ ವಯಸ್ಸಿನ ಕಾರಣ ನೀಡಿ ಅರ್ಜಿ ವರ್ಗಾವಣೆಗೆ ಕೋರಲಾಗಿದೆ. ಅದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ನಾವಿದನ್ನು ಹೈಕೋರ್ಟ್​ಗೇ ಬಿಡುತ್ತೇವೆ. ಹಿರಿಯ ವಕೀಲರಿಗೆ ಲಖನೌಗೆ ಬರಲು ಕಷ್ಟವಾಗುತ್ತದೆ ಎಂದಾದರೆ, ಅವರು ವಿಡಿಯೊ ಕಾನ್ಫರೆನ್ಸ್ ಮೂಲಕವೇ ವಾದ ಮಂಡನೆ ಮಾಡಬಹುದು. ಅದಕ್ಕೆ ಹೈಕೋರ್ಟ್ ಒಪ್ಪಿಗೂ ಖಂಡಿತ ಇದೆ’ ಎಂದು ಹೇಳಿದೆ.

2000ರಲ್ಲಿ ಪ್ರಭಾತ್​ ಗುಪ್ತಾ (24) ಎಂಬ ವಿದ್ಯಾರ್ಥಿ ನಾಯಕನ ಹತ್ಯೆಯಾಗಿತ್ತು. ಈ ಕೇಸ್​​ನಲ್ಲಿ ಅಜಯ್​ ಮಿಶ್ರಾ ಸೇರಿ ಮೂವರ ವಿರುದ್ಧ ಕೇಸ್​ ದಾಖಲಾಗಿತ್ತು. ಬಳಿಕ 2004ರಲ್ಲಿ ಲಖಿಂಪುರ ಖೇರಿಯ ಸೆಷನ್ಸ್​ ಕೋರ್ಟ್, ಸರಿಯಾದ ಸಾಕ್ಷಿಗಳು ಇಲ್ಲದ ಕಾರಣ​ ಅಜಯ್​ ಮಿಶ್ರಾರನ್ನು ಈ ಕೇಸ್​​ನಿಂದ ಖುಲಾಸೆಗೊಳಿಸಿತ್ತು. ಆಗ ಯುಪಿಯಲ್ಲಿ ಇದ್ದ ಮುಲಾಯಂ ಸಿಂಗ್​ ನೇತೃತ್ವದ ರಾಜ್ಯ ಸರ್ಕಾರ ಖುಲಾಸೆ ತೀರ್ಪು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿತ್ತು . ಆಗಿನಿಂದಲೂ ಈ ಕೇಸ್​​ ನಡೆಯುತ್ತಲೇ ಇದೆ. ಒಂದಲ್ಲ ಒಂದು ಕಾರಣಕ್ಕೆ ಅರ್ಜಿ ವಿಚಾರಣೆ, ಅಂತಿಮ ತೀರ್ಪು ಮುಂದೂಡತ್ತಲೇ ಬರಲಾಗುತ್ತಿದೆ. ಇದೀಗ ಅಂತಿಮವಾಗಿ ನವೆಂಬರ್​ 10ರಂದು ಹೈಕೋರ್ಟ್​ ತೀರ್ಪು ನೀಡಲಿದೆ. ಈ ಮಧ್ಯೆ ಅರ್ಜಿಯನ್ನು ಲಖನೌ ಪೀಠದಿಂದ ಪ್ರಯಾಗ್​ ರಾಜ್​ ಪೀಠಕ್ಕೆ ವರ್ಗಾಯಿಸಿ ಎಂದು ಅಜಯ್​ ಮಿಶ್ರಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅದೀಗ ತಿರಸ್ಕೃತಗೊಂಡಿದೆ.

ಇದನ್ನೂ ಓದಿ: Yogi Adityanath | ಉತ್ತರ ಪ್ರದೇಶದಲ್ಲಿ 5 ವರ್ಷದಲ್ಲಿ 166 ಕ್ರಿಮಿನಲ್​ಗಳ ಹತ್ಯೆ; ಒಂದೋ ಜೈಲಲ್ಲಿರಬೇಕು, ಇಲ್ಲ ಸಾಯಬೇಕು ಎಂದ ಯೋಗಿ

Exit mobile version