ನವದೆಹಲಿ: 2002ರಲ್ಲಿ ಗುಜರಾತ್‌ನಲ್ಲಿ ನಡೆದ ಗುಜರಾತ್ ಹತ್ಯಾಕಾಂಡದ ವೇಳೆ ಬಿಲ್ಕಿಸ್ ಬಾನೊ (Bilkis Bano Case) ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ ಅಪರಾಧಿಗಳನ್ನು ಗುಜರಾತ್ ಸರ್ಕಾರ ಬಿಡುಗಡೆಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ವಿಶೇಷ ನ್ಯಾಯಪೀಠ ರಚಿಸಲು ಸಮ್ಮತಿ ಸೂಚಿಸಿದೆ. ಸನ್ನಡತೆ ಆಧಾರದ ಮೇಲೆ 11 ಅಪರಾಧಿಗಳನ್ನು ಗುಜರಾತ್ ಸರ್ಕಾರ ಕಳೆದ ವರ್ಷದ ಆಗಸ್ಟ್ 15ರಂದು ಬಿಡುಗಡೆ ಮಾಡಿದೆ.
11 ಅತ್ಯಾಚಾರಿಗಳ ಬಿಡುಗಡೆ ಪ್ರಶ್ನಿಸಿ ಬಿಲ್ಕಿಸ್ ಬಾನೊ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು, ವಿಶೇಷ ಪೀಠ ರಚನೆಗೆ ಸಮ್ಮತಿ ಸೂಚಿಸಿತು. ಬಿಲ್ಕಿಸ್ ಬಾನೊ ಪರ ವಾದ ಮಂಡಿಸಿದ ವಕೀಲೆ ಶೋಭಾ ಗುಪ್ತಾ, “ಪ್ರಕರಣದ ಕುರಿತು ತುರ್ತು ವಿಚಾರಣೆ ನಡೆಯಬೇಕು ಹಾಗೂ ಇದಕ್ಕಾಗಿ ವಿಶೇಷ ಪೀಠ ರಚಿಸಬೇಕು” ಎಂದು ಮನವಿ ಮಾಡಿದರು. ಆಗ ನ್ಯಾಯಾಲಯವು ವಿಶೇಷ ಪೀಠ ರಚಿಸಲು ಸಮ್ಮತಿ ಸೂಚಿಸಿತು.
ಇದಕ್ಕೂ ಮೊದಲು ಕೂಡ ಸುಪ್ರೀಂ ಕೋರ್ಟ್‌ನಲ್ಲಿ ಬಿಲ್ಕಿಸ್ ಬಾನೊ ಅರ್ಜಿ ಕುರಿತು ವಿಚಾರಣೆ ನಡೆಯಬೇಕಿತ್ತು. ಆದರೆ, ಕೆಲ ತಿಂಗಳ ಹಿಂದೆ ಸಂತ್ರಸ್ತೆ ಸಲ್ಲಿಸಿದ ಅರ್ಜಿಯ ವಿಚಾರಣೆಯಿಂದ ನ್ಯಾಯಮೂರ್ತಿ ಬೇಲಾ ತ್ರಿವೇದಿ ಅವರು ಹಿಂದೆ ಸರಿದಿದ್ದರು. ಯಾವುದೇ ನಿರ್ದಿಷ್ಟ ಕಾರಣ ನೀಡದೆ ಬೇಲಾ ತ್ರಿವೇದಿ ಅವರು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಅತ್ಯಾಚಾರಿಗಳ ಬಿಡುಗಡೆಗೆ ಪ್ರತಿಪಕ್ಷಗಳು, ಬಿಜೆಪಿಯ ಕೆಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಬಿಡುಗಡೆಯಾದ ಅಪರಾಧಿಗಳು ಯಾರು?
ಬಿಲ್ಕಿಸ್ ಬಾನೊ ಅತ್ಯಾಚಾರ ಕೇಸ್ನಲ್ಲಿ ಜೈಲು ಸೇರಿ, ಕಳೆದ ಸ್ವಾತಂತ್ರ್ಯ ದಿನದಂದು ಬಿಡುಗಡೆಯಾದವರ ಹೆಸರು, ಜಸ್ವಂತ್ ಭಾಯಿ ನಾಯ್, ಗೋವಿಂದಭಾಯಿ ನಾಯ್, ಶೈಲೇಶ್ ಭಟ್, ರಾಧೇಶ್ಯಾಮ್ ಶಾ, ಬಿಪಿನ್ ಚಂದ್ರ ಜೋಶಿ, ಕೇಸರಭಾಯಿ ವೋಹಾನಿಯಾ, ಪ್ರದೀಪ್ ಮೋರ್ಧಿಯಾ, ಬಕಾಭಾಯಿ ವೋಹಾನಿಯಾ, ರಾಜುಭಾಯಿ ಸೋನಿ, ಮಿತೇಶ್ ಭಟ್ ಮತ್ತು ರಮೇಶ್ ಚಂದನಾ ಎಂದಾಗಿದೆ.
ಗುಜರಾತ್ ಸರ್ಕಾರ ಆರೋಪಿಗಳನ್ನು 1992ರ ಕ್ಷಮಾದಾನ ನೀತಿಯ ಅನ್ವಯ ಬಿಡುಗಡೆಗೊಳಿಸಿದೆ. ಅಂದರೆ ಹಲವು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ, ಸನ್ನಡತೆ ತೋರಿದ್ದನ್ನೇ ಮುಖ್ಯ ಆಧಾರವನ್ನಿಟ್ಟುಕೊಂಡು ಅವರಿಗೆ ಜೈಲಿನಿಂದ ಮುಕ್ತಿ ಕೊಟ್ಟಿದೆ. ಆದರೆ ಈ ವಿಚಾರದಲ್ಲಿ ಕಾನೂನು ಹೋರಾಟ ಮುಂದುವರಿದಿದೆ. ದೇಶದ ಹಲವೆಡೆ ಬಿಲ್ಕಿಸ್ ಬಾನೊ ಅತ್ಯಾಚಾರಿಗಳ ಬಿಡುಗಡೆಯನ್ನು ಖಂಡಿಸಿ ಪ್ರತಿಭಟನೆ ನಡೆದಿವೆ.
ಇದನ್ನೂ ಓದಿ: Bilkis Bano Case | ಬಿಲ್ಕಿಸ್ ಬಾನೊ ಅತ್ಯಾಚಾರಿಗಳ ಬಿಡುಗಡೆ, ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಬೇಲಾ ತ್ರಿವೇದಿ