Site icon Vistara News

Bilkis Bano Case | ಬಿಲ್ಕಿಸ್​ ಬಾನೊ ಅತ್ಯಾಚಾರ ಆರೋಪಿಗಳು ಮತ್ತೆ ಜೈಲು ಸೇರ್ತಾರಾ?

Bilkis Bano Case

What Is Bilkis Bano Case? How She Won In Supreme Court?

ನವ ದೆಹಲಿ: ಬಿಲ್ಕಿಸ್​ ಬಾನೊ ಅತ್ಯಾಚಾರ ಪ್ರಕರಣದ 11 ಆರೋಪಿಗಳನ್ನು ಗುಜರಾತ್​ ಸರ್ಕಾರ ಜೈಲಿನಿಂದ ಬಿಡುಗಡೆ ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​​ಗೆ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ಇಂದು ನಡೆಯಲಿದೆ. 2002ರಲ್ಲಿ ಗುಜರಾತ್​​ನ ಗೋದ್ರಾದಲ್ಲಿ ನಡೆದ ಗಲಭೆಯ ವೇಳೆ, ತನ್ನ ಪುಟ್ಟ ಮಗಳು, ಪತಿ ಮತ್ತು ಕುಟುಂಬದವರೊಂದಿಗೆ ಊರು ಬಿಟ್ಟು ಹೊರಟಿದ್ದ ಐದು ತಿಂಗಳ ಗರ್ಭಿಣಿ ಬಿಲ್ಕಿಸ್​ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರವಾಗಿತ್ತು ಮತ್ತು ಆಕೆಯ ಕುಟುಂಬದವರ ಹತ್ಯೆ ಮಾಡಲಾಗಿತ್ತು. ಈ ಕೇಸ್​​ನಲ್ಲಿ ಸುಮಾರು 19 ಜನರ ವಿರುದ್ಧ ಕೇಸ್​ ದಾಖಲಾಗಿತ್ತು. ಅದರಲ್ಲಿ 11 ಜನರ ವಿರುದ್ಧ ಆರೋಪ ಸಾಬೀತಾಗಿ ಜೈಲಿಗೆ ಕಳಿಸಲಾಗಿತ್ತು. ಆದರೆ ಈ ಸಲ ಸ್ವಾತಂತ್ರ್ಯೋತ್ಸವದಂದು ಈ ಆರೋಪಿಗಳನ್ನೆಲ್ಲ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ.

ಬಿಲ್ಕಿಸ್ ಬಾನೊ ಅತ್ಯಾಚಾರ ಕೇಸ್​ ಆರೋಪಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿದ್ದನ್ನು ಪ್ರಶ್ನಿಸಿ ಮತ್ತು ಅವರಿಗೆ ಜೈಲು ಶಿಕ್ಷೆ ಮುಂದುವರಿಸಬೇಕು ಎಂದು ಆಗ್ರಹಿಸಿ ಸಿಪಿಐ (ಎಂ) ಸದಸ್ಯೆ ಸುಭಾಷಿಣಿ ಅಲಿ, ತೃಣಮೂಲ ಕಾಂಗ್ರೆಸ್​ ಸಂಸದೆ ಮಹುವಾ ಮೊಯಿತ್ರಾ ಮತ್ತು ಇನ್ನಿತರ ಮಹಿಳಾ ಹಕ್ಕು ಹೋರಾಟಗಾರ್ತಿಯರು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳಾಗಿ ಜೈಲು ಸೇರಿದ್ದವರ ಬಿಡುಗಡೆ ವಿರೋಧಿಸಿ, ಹಿರಿಯ ವಕೀಲರಾದ ಕಪಿಲ್ ಸಿಬಲ್​ ಮತ್ತು ಅಪರ್ಣಾ ಭಟ್​ ಮೂಲಕ ಸಲ್ಲಿಕೆಯಾಗಿರುವ ಈ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ನೇತೃತ್ವದ ಪೀಠ ಒಪ್ಪಿದೆ.

ಬಿಲ್ಕಿಸ್​ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಆರೋಪಿಗಳಿಗೆ 2008ರಲ್ಲಿ, ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಜೈಲಿಗೆ ಕಳಿಸಿತ್ತು. ಈ ತೀರ್ಪಿನ ವಿರುದ್ಧ ಆರೋಪಿಗಳು ಬಾಂಬೆ ಹೈಕೋರ್ಟ್​ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್​ ಕೂಡ ಸಿಬಿಐ ಕೋರ್ಟ್​​ನ ಆದೇಶವನ್ನೇ ಎತ್ತಿಹಿಡಿದಿತ್ತು. ಇದೀಗ 15ವರ್ಷಗಳ ಬಳಿಕ, ಆರೋಪಿಯೊಬ್ಬ ಮತ್ತೆ ಸುಪ್ರೀಂಕೋರ್ಟ್​ಗೆ ಮನವಿ ಮಾಡಿದ್ದ. ನಾವು 15 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದೇವೆ. ನಮ್ಮ ಬಿಡುಗಡೆಗೆ ಪರಿಗಣಿಸಬೇಕು ಎಂದು ಕೇಳಿಕೊಂಡಿದ್ದ. ಆತನ ಅರ್ಜಿ ವಿಚಾರಣೆ ನಡೆಸಿದ್ದ, ಸುಪ್ರೀಂಕೋರ್ಟ್​ ನ್ಯಾಯಮೂರ್ತಿ ಅಜಯ್ ರಸ್ಟೋಗಿ ಮತ್ತು ವಿಕ್ರಮ್​ ನಾಥ್​ ನೇತೃತ್ವದ ಪೀಠ, ‘ಆರೋಪಿಗಳಿಗೆ ಕ್ಷಮಾದಾನ ನೀಡುವಂತೆ ಗುಜರಾತ್​ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು’.

ಆದರೆ ಅತ್ಯಾಚಾರ ಆರೋಪಿಗಳ ಬಿಡುಗಡೆಯಾಗುತ್ತಿದ್ದಂತೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಕಾಂಗ್ರೆಸ್​ನ ರಾಹುಲ್​ ಗಾಂಧಿ, ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್​ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೇರಿ ಅನೇಕರು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಆರೋಪಿಗಳನ್ನು ಮತ್ತೆ ಜೈಲಿಗೆ ಕಳಿಸಬೇಕು ಎಂದು 6000ಕ್ಕೂ ಅಧಿಕ ಜನರು ಸುಪ್ರೀಂಕೋರ್ಟ್​​ಗೆ ಒತ್ತಾಯ ಮಾಡಿದ್ದರು.

ಇದನ್ನೂ ಓದಿ: Bilkis Bano Case | ಬಿಲ್ಕಿಸ್‌ ಬಾನೊ ಅತ್ಯಾಚಾರಿಗಳ ಬಿಡುಗಡೆ ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ

Exit mobile version