2019ರಲ್ಲಿ ಮೋದಿ ಸರ್ನೇಮ್ಗೆ (Modi Sir Name Case) ಮಾಡಿದ್ದ ಅಪಮಾನದ ಕೇಸ್ನಲ್ಲಿ 2ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಹುಲ್ ಗಾಂಧಿ (Rahul Gandhi), ಶಿಕ್ಷೆ ರದ್ದುಕೋರಿ ಸುಪ್ರೀಂಕೋರ್ಟ್ಗೆ (Supreme Court) ಮೇಲ್ಮನವಿ ಸಲ್ಲಿಸಿದ್ದಾರೆ. ರಾಹುಲ್ ಗಾಂಧಿ ಅವರ ಮೇಲ್ಮನವಿ ಅರ್ಜಿಯನ್ನು ಜುಲೈ 21ಕ್ಕೆ ವಿಚಾರಣೆಗೆ ಒಳಪಡಿಸಲು ಸರ್ವೋಚ್ಚ ನ್ಯಾಯಾಲಯ ಒಪ್ಪಿದೆ. ಸೂರತ್ ನ್ಯಾಯಾಲಯ ನೀಡಿದ್ದ 2ವರ್ಷಗಳ ಜೈಲು ಶಿಕ್ಷೆಗೆ ತಡೆ ನೀಡಲು ಸೂರತ್ ಸೆಷನ್ಸ್ ಕೋರ್ಟ್ ಮತ್ತು ಗುಜರಾತ್ ಹೈಕೋರ್ಟ್ ನಿರಾಕರಿಸಿದ ನಂತರ ರಾಹುಲ್ ಗಾಂಧಿಯವರು ಜುಲೈ 15ರಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
2019ರ ಲೋಕಸಭೆ ಚುನಾವಣೆ ವೇಳೆ ಕೋಲಾರದಲ್ಲಿ ಭಾಷಣ ಮಾಡಿದ್ದ ರಾಹುಲ್ ಗಾಂಧಿ ನೀರವ್ ಮೋದಿ, ಲಲಿತ್ ಮೋದಿಯನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ವ್ಯಂಗ್ಯ ಮಾಡಿದ್ದರು. ಮೋದಿ ಎಂಬ ಉಪನಾಮ ಹೊಂದಿರುವವರೆಲ್ಲ ಕಳ್ಳರೇ ಎಂದಿದ್ದರು. ರಾಹುಲ್ ಗಾಂಧಿ ಈ ಮಾತಿನ ವಿರುದ್ಧ ಬಿಜೆಪಿ ನಾಯಕ ಪೂರ್ಣೇಶ್ ಮೋದಿ, ಸೂರತ್ ಕೋರ್ಟ್ನಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ವಿಚಾರಣೆ ನಡೆಸಿದ್ದ ಜಿಲ್ಲಾ ಮ್ಯಾಜಿಸ್ಟ್ರೇಟ್ ಎಚ್.ಎಚ್.ವರ್ಮಾ ಅವರು ಮಾರ್ಚ್ 23ರಂದು ‘ರಾಹುಲ್ ಗಾಂಧಿ ದೋಷಿ’ ಎಂದು ತೀರ್ಪು ನೀಡಿದ್ದರು. 2ವರ್ಷ ಜೈಲು ಶಿಕ್ಷೆ ವಿಧಿಸಿದ್ದರು. ಅದರ ಬೆನ್ನಲ್ಲೇ ರಾಹುಲ್ ಗಾಂಧಿ ಸಂಸದನ ಸ್ಥಾನದಿಂದ ಅನರ್ಹಗೊಂಡಿದ್ದರು. ಈ ಶಿಕ್ಷೆಯಿಂದ ಪಾರಾಗಲು ರಾಹುಲ್ ಗಾಂಧಿ ಕಾನೂನು ಹೋರಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: Opposition Meet : ರಾಹುಲ್ ಗಾಂಧಿ ಫುಲ್ ಬ್ಯುಸಿ ; ನಾಳೆಗೆ ನಿಗದಿಯಾಗಿದ್ದ ಸಚಿವರ ಜತೆಗಿನ ಸಭೆ ರದ್ದು
ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಹುಲ್ ಗಾಂಧಿ ಸದ್ಯ ಜಾಮೀನು ಆಧಾರದಲ್ಲಿ ಹೊರಗಿದ್ದಾರೆ. ಅವರು ಸಂಸದನ ಸ್ಥಾನದಿಂದ ಅನರ್ಹಗೊಂಡ ಬಳಿಕ ಉಳಿದ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಪಕ್ಷಗಳ ಸಭೆಯಲ್ಲಿ ರಾಹುಲ್ ಗಾಂಧಿ ಪಾಲ್ಗೊಂಡಿದ್ದಾರೆ. ಸುಪ್ರೀಂಕೋರ್ಟ್ ಅರ್ಜಿ ವಿಚಾರಣೆ ನಡೆಸಲು ಒಪ್ಪಿರುವುದರಿಂದ ಸದ್ಯ ಅವರ ಶಿಕ್ಷೆಯ ವಿಚಾರದಲ್ಲಿ ಏನು ತೀರ್ಪು ಹೊರಬೀಳಬಹುದು ಎಂಬ ಕುತೂಹಲ ಮೂಡಿದೆ.