ನವ ದೆಹಲಿ: ಕೇಂದ್ರ ಸರ್ಕಾರದ ಸೇನಾ ನೇಮಕಾತಿ ಯೋಜನೆ ಅಗ್ನಿಪಥ್ ವಿರೋಧಿಸಿ ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಎಲ್ಲ ಅರ್ಜಿಗಳನ್ನೂ ಸರ್ವೋಚ್ಛ ನ್ಯಾಯಾಲಯ ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಿದೆ. ಈ ಯೋಜನೆಯ ಬಗ್ಗೆ ದೆಹಲಿ ಹೈಕೋರ್ಟ್‌ನ ದೃಷ್ಟಿಕೋನ ಏನು? ಅಗ್ನಿಪಥ್‌ನಲ್ಲಿ ಒಪ್ಪಬಹುದಾದ ಮತ್ತು ಅಸಮ್ಮತವಾದ ವಿಷಯಗಳೇನು ಇವೆ ಎಂಬುದನ್ನು ದೆಹಲಿ ಹೈಕೋರ್ಟ್ ಹೇಗೆ ವಿಮರ್ಶಿಸುತ್ತದೆ ಎಂಬುದನ್ನು ನಾವು ತಿಳಿಯಬೇಕಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಅಷ್ಟೇ ಅಲ್ಲ, ಅಗ್ನಿಪಥ್ ಯೋಜನೆ ವಿರೋಧಿಸಿ ಕೇರಳ, ಪಾಟ್ನಾ, ಪಂಜಾಬ್ & ಹರ್ಯಾಣ ಮತ್ತು ಉತ್ತರಾಖಂಡ್‌ನ ಹೈಕೋರ್ಟ್‌ಗಳಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು, ಮಧ್ಯಸ್ಥಿಕೆ ಅರ್ಜಿಗಳೆಂದು ಪರಿಗಣಿಸಿ ದೆಹಲಿಗೆ ವರ್ಗಾಯಿಸಬಹುದು. ಅಂದರೆ ಈ ಕೋರ್ಟ್‌ಗಳಲ್ಲಿ ಅರ್ಜಿ ಸಲ್ಲಿಸಿರುವವರು ಅದನ್ನು ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಿಕೊಳ್ಳಬಹುದು ಎಂದೂ ಸುಪ್ರೀಂಕೋರ್ಟ್ ತಿಳಿಸಿದೆ.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಅಗ್ನಿಪಥ್ ಯೋಜನೆ ಅವೈಜ್ಞಾನಿಕವಾಗಿದೆ. ಇದರಡಿಯಲ್ಲಿ ನೇಮಕಗೊಳ್ಳುವ ಅಗ್ನಿವೀರರು ನಾಲ್ಕು ವರ್ಷ ಕಳೆದ ಬಳಿಕ ಅತಂತ್ರವಾಗುತ್ತಾರೆ. ಇದೊಂದು ಉದ್ಯೋಗ ಭರವಸೆ ಇಲ್ಲದ ಯೋಜನೆ. ಹಾಗಾಗಿ ಕೇಂದ್ರ ಸರ್ಕಾರ ಇದನ್ನು ಹಿಂಪಡೆಯಬೇಕು ಎಂದು ಆರೋಪಿಸಿ ಹಲವರು ವಿವಿಧ ಹೈಕೋರ್ಟ್‌ಗಳಿಗೆ, ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇಂದು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಧನಂಜಯ ವೈ ಚಂದ್ರಚೂಡ್, ಸೂರ್ಯಕಾಂತ್ ಮತ್ತು ಎ.ಎಸ್. ಬೋಪಣ್ಣ ಅವರನ್ನೊಳಗೊಂಡ ಪೀಠ, ʼಎಲ್ಲ ಅರ್ಜಿಗಳನ್ನೂ ಒಮ್ಮೆಲೇ ಸುಪ್ರೀಂಕೋರ್ಟ್‌ಗೆ ಸಲ್ಲಿಸುವ ಅಗತ್ಯವಿರುವುದಿಲ್ಲ. ಇದರಿಂದಾಗಿ ಹೈಕೋರ್ಟ್‌ನ ದೃಷ್ಟಿಕೋನ, ವಿಮರ್ಶೆ ಮತ್ತು ಅಬ್ಸರ್ವೇಶನ್ ಏನೆಂಬುದನ್ನು ನಾವು ತಿಳಿಯಲಾಗುವುದಿಲ್ಲʼ ಎಂದು ಹೇಳಿದೆ.
ಇದನ್ನೂ ಓದಿ: ಅಗ್ನಿಪಥ್ ವಿರುದ್ಧದ ಅರ್ಜಿಗಳ ವಿಚಾರಣೆ: ಜುಲೈ 20ಕ್ಕೆ ದಿನ ನಿಗದಿ ಮಾಡಿದ ದಿಲ್ಲಿ ಹೈಕೋರ್ಟ್