ನವ ದೆಹಲಿ: 2019ರಲ್ಲಿ ಮೋದಿ ಉಪನಾಮಕ್ಕೆ ಅವಮಾನ ಮಾಡಿದ ಕೇಸ್ನಲ್ಲಿ ಸೂರತ್ ಕೋರ್ಟ್ನಿಂದ ದೋಷಿ ಎಂದು ಪರಿಗಣಿತರಾಗಿ, ಸಂಸದನ ಸ್ಥಾನವನ್ನೂ ಕಳೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಯವರು ‘ಕೆಳ ನ್ಯಾಯಾಲಯ ತಮಗೆ ನೀಡಿದ್ದ ಶಿಕ್ಷೆಗೆ ತಡೆ ನೀಡುವಂತೆ ಸೂರತ್ ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈಗ ಅಲ್ಲಿಯೂ ರಾಹುಲ್ ಗಾಂಧಿಗೆ ಹಿನ್ನಡೆಯಾಗಿದೆ. ಅವರ ಅರ್ಜಿಯನ್ನು ಸೆಷನ್ಸ್ ಕೋರ್ಟ್ ವಜಾಗೊಳಿಸಿದೆ. ಇದು ರಾಹುಲ್ ಗಾಂಧಿಯವರಿಗೆ ಸಂಕಷ್ಟ ತಂದಿಟ್ಟಿದ್ದು, ಅವರೀಗ ಮತ್ತೆ ಮೇಲ್ಮನವಿ ಸಲ್ಲಿಸಬೇಕಾಗಿದೆ.
2019ರ ಲೋಕಸಭಾ ಚುನಾವಣೆ ವೇಳೆ ರಾಹುಲ್ ಗಾಂಧಿಯವರು ಕೋಲಾರದಲ್ಲಿ ಮಾತನಾಡಿ, ‘ಎಲ್ಲ ಕಳ್ಳರ ಉಪನಾಮವೂ ಮೋದಿ ಎಂದೇ ಇರುತ್ತದೆ’ ಎಂದು ಹೇಳಿದ್ದರು. ಅವರ ಈ ಹೇಳಿಕೆ ವಿರುದ್ಧ ತಿರುಗಿಬಿದ್ದಿದ್ದ ಗುಜರಾತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಸೂರತ್ ಕೋರ್ಟ್ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಕೇಸ್ ವಿಚಾರಣೆ ನಡೆಸಿದ್ದ ನ್ಯಾಯಾಲಯ ಮಾರ್ಚ್ 23ರಂದು ತೀರ್ಪು ನೀಡಿ ‘ಮೋದಿ ಉಪನಾಮಕ್ಕೆ ಅಪಮಾನ ಮಾಡಿದ್ದ ಕೇಸ್ನಲ್ಲಿ ರಾಹುಲ್ ಗಾಂಧಿಯವರು ದೋಷಿ ಎಂದು ಪರಿಗಣಿಸಿ, ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಅದರ ಬೆನ್ನಲ್ಲೇ ರಾಹುಲ್ ಗಾಂಧಿಯನ್ನು ಸಂಸದನ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಇನ್ನು ರಾಹುಲ್ ಗಾಂಧಿಗೆ 30 ದಿನಗಳ ಜಾಮೀನು ನೀಡಿದ್ದ ಕಾರಣ ಅವರು ಶಿಕ್ಷೆಯಿಂದ ಪಾರಾಗಲು ಸೂರತ್ ಸೆಷನ್ಸ್ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿ, ‘ಸೂರತ್ನ ಕೆಳ ನ್ಯಾಯಾಲಯ ಕೊಟ್ಟಿದ್ದ ತೀರ್ಪಿಗೆ ತಡೆ ನೀಡುವಂತೆ’ ಕೋರಿದ್ದರು. ಆದರೆ ಇಲ್ಲಿಯೂ ಸೋಲಾಗಿದೆ.
ಶಿಕ್ಷೆಗೆ ತಡೆಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಹೆಚ್ಚುವರಿ ಸೆಷನ್ಸ್ ಜಡ್ಜ್ ಆರ್ಪಿ ಮೊಗೇರಾ ಅವರು ಏಪ್ರಿಲ್ 13ರಂದು ವಿಚಾರಣೆ ನಡೆಸಿ, ಏಪ್ರಿಲ್ 20ಕ್ಕೆ ಶಿಕ್ಷೆ ಕಾಯ್ದಿರಿಸಿದ್ದರು. ರಾಹುಲ್ ಗಾಂಧಿ ಪರ ವಾದ ಮಂಡಿಸಿದ ಚೀಮಾ, “ರಾಹುಲ್ ಗಾಂಧಿ ಅವರು ನೀಡಿದ ಹೇಳಿಕೆಯನ್ನು ಕೂಲಂಕಷವಾಗಿ ಪರಿಶೀಲಿಸಬೇಕಿದೆ. ಅವರು ಆಡಿದ ಮಾತುಗಳನ್ನು ಬೇರೆ ಅರ್ಥದಲ್ಲಿ ಬಿಂಬಿಸಲಾಗಿದೆ. ನರೇಂದ್ರ ಮೋದಿ ಅವರನ್ನು ಟೀಕಿಸಿದ್ದನ್ನೇ ಮಾನಹಾನಿ ರೀತಿ ಬಿಂಬಿಸಲಾಗಿದೆ. ಹಾಗಾಗಿ, ಸೂರತ್ ನ್ಯಾಯಾಲಯದ ತೀರ್ಪಿನ ಮರುಪರಿಶೀಲನೆ ಅಗತ್ಯವಿದೆ” ಎಂದು ಹೇಳಿದ್ದರು. ವಾದ-ಪ್ರತಿವಾದವನ್ನೆಲ್ಲ ಆಲಿಸಿದ್ದ ಜಡ್ಜ್ ತೀರ್ಪು ಕೊಟ್ಟಿರಲಿಲ್ಲ. ಇಂದು ಆ ಅರ್ಜಿಯನ್ನೇ ವಜಾಗೊಳಿಸಿದ್ದಾರೆ. ಈ ಮೂಲಕ ಶಿಕ್ಷೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.