Site icon Vistara News

Rahul Gandhi: ರಾಹುಲ್ ಗಾಂಧಿ ವಿರುದ್ಧ ಮತ್ತೊಂದು ಮಾನನಷ್ಟ ಮೊಕದ್ದಮೆ; ಸಮನ್ಸ್ ನೀಡಿದ ಬಿಹಾರ ಕೋರ್ಟ್​

Ayodhya seer invites congress leader Rahul Gandhi to stay at ashram

ಪಾಟ್ನಾ: ಈಗಾಗಲೇ 2019ರ ಮಾನನಷ್ಟ ಮೊಕದ್ದಮೆಯಲ್ಲಿ ದೋಷಿ ಎಂದು ಸಾಬೀತಾಗಿ, 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi)ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗ ಬಿಜೆಪಿ ನಾಯಕ, ಬಿಹಾರ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ (Sushil Kumar Modi) ಅವರು ರಾಹುಲ್ ಗಾಂಧಿ ವಿರುದ್ಧ ಬಿಹಾರ ಕೋರ್ಟ್​ನಲ್ಲಿ ಮತ್ತೊಂದು ಮಾನನಷ್ಟ ಮೊಕದ್ದಮೆ (Rahul Gandhi defamation case) ಹೂಡಿದ್ದಾರೆ. ಈ ಸಂಬಂಧ ಏಪ್ರಿಲ್​ 12ರಂದು ಹಾಜರಾಗಿ ಹೇಳಿಕೆ ದಾಖಲಿಸುವಂತೆ ಬಿಹಾರ ಕೋರ್ಟ್ ರಾಹುಲ್ ಗಾಂಧಿಗೆ ಸಮನ್ಸ್ ನೀಡಿದೆ.

2019ರ ಲೋಕಸಭಾ ಚುನಾವಣೆ ವೇಳೆ ಕೋಲಾರದಲ್ಲಿ ಪ್ರಚಾರ ಸಭೆ ನಡೆಸಿ ಮಾತನಾಡಿದ್ದ ರಾಹುಲ್ ಗಾಂಧಿ ‘ಎಲ್ಲ ಕಳ್ಳರ ಸರ್​ನೇಮ್​ ಮೋದಿ ಎಂದೇ ಇರುತ್ತದೆ’ ಎಂದು ಹೇಳಿದ್ದರು. ಅವರ ಈ ಹೇಳಿಕೆ ವಿರುದ್ಧ ಗುಜರಾತ್​ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಸೂರತ್​ ಕೋರ್ಟ್​ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದೇ ಮಾರ್ಚ್​ 23ರಂದು ತೀರ್ಪು ನೀಡಿದ ಸೂರತ್​ ಕೋರ್ಟ್​ ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ನೀಡಿದೆ. ಹಾಗೇ, 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸದ್ಯ 30 ದಿನಗಳ ಜಾಮೀನು ಆಧಾರದ ಮೇಲೆ ರಾಹುಲ್ ಗಾಂಧಿ ಹೊರಗೆ ಇದ್ದಾರೆ. ಇನ್ನು 2 ವರ್ಷ ಜೈಲು ಶಿಕ್ಷೆ ಎಂದು ಕೋರ್ಟ್ ತೀರ್ಪು ನೀಡಿ 24ಗಂಟೆಯಲ್ಲಿ ಅವರ ಲೋಕಸಭೆ ಸದಸ್ಯತ್ವ ಸ್ಥಾನ ರದ್ದಾಗಿದೆ.

ಇದೀಗ ಮೋದಿ ಉಪನಾಮಕ್ಕೆ ಮಾಡಿದ ಅವಹೇಳನದ ವಿಚಾರವಾಗಿಯೇ ಸುಶೀಲ್ ಮೋದಿ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಸುಶೀಲ್​ ಕುಮಾರ್ ಮೋದಿ, ಈ ಕೇಸ್​ನಲ್ಲಿ ಸಾಕ್ಷಿಗಳಾದ ಮಾಜಿ ಸಚಿವ ನಿತಿನ್​ ನವೀನ್​ (ಬಂಕಿಪುರ ಶಾಸಕ), ದಿಘಾ ಶಾಸಕ ಸಂಜೀವ್​ ಚೌರಾಸಿಯಾ, ಭಾರತೀಯ ಜನತಾ ಯುವ ಮೋರ್ಚಾ ಮುಖಂಡ ಮನೀಶ್ ಕುಮಾರ್​ ಅವರ ಹೇಳಿಕೆಗಳನ್ನು ಕೋರ್ಟ್​​ನಲ್ಲಿ ದಾಖಲು ಮಾಡಲಾಗಿದ್ದು, ರಾಹುಲ್ ಗಾಂಧಿಯವರು ಏಪ್ರಿಲ್​ 12ರಂದು ಕೋರ್ಟ್​ಗೆ ಭೇಟಿಕೊಟ್ಟು, ತಮ್ಮ ಹೇಳಿಕೆ ನೀಡಲಿದ್ದಾರೆ. ಅಡಿಷನಲ್​ ಚೀಫ್​ ಜ್ಯೂಡಿಶಿಯಲ್​ ಮ್ಯಾಜಿಸ್ಟ್ರೇಟ್​ ಆದಿ ದೇವ್​ ಅವರು ಕೇಸ್​ ವಿಚಾರಣೆ ನಡೆಸಲಿದ್ದು, ಸುಶೀಲ್​ ಮೋದಿ ಪರ ವಕೀಲರಾದ ಎಸ್​. ಡಿ.ಸಂಜಯ್​ ವಾದಿಸಲಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧ ಲಂಡನ್​ ಕೋರ್ಟ್​ನಲ್ಲಿ ಮೊಕದ್ದಮೆ ಹೂಡಲು ಲಲಿತ್​ ಮೋದಿ ನಿರ್ಧಾರ; ಪಪ್ಪು ನೀವು ಪೂರ್ತಿ ಮೂರ್ಖನಾಗಿ ಎಂದು ಟ್ವೀಟ್​

ಲಲಿತ್​ ಮೋದಿಯಿಂದಲೂ ಕಾನೂನು ಸಮರದ ಎಚ್ಚರಿಕೆ
ಇನ್ನೊಂದೆಡೆ ಇಂಡಿಯನ್ ಪ್ರೀಮಿಯರ್ ಲೀಗ್​ (ಐಪಿಎಲ್​) ಸಂಸ್ಥಾಪಕ, ಮಾಜಿ ಮುಖ್ಯಸ್ಥ ಲಲಿತ್ ಮೋದಿ ಕೂಡ ಕಾಂಗ್ರೆಸ್ ನಾಯಕ, ಅನರ್ಹ ಸಂಸದ ರಾಹುಲ್ ಗಾಂಧಿ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ. ಅಷ್ಟಲ್ಲದೆ, ಯುಕೆ ಕೋರ್ಟ್​​ನಲ್ಲಿ ರಾಹುಲ್ ಗಾಂಧಿ ವಿರುದ್ಧ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ನಾನು ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ಮಾಡಿದ್ದೇನೆ ಎಂದು ಹೇಳಲಾಗುತ್ತಿದೆ. ಆದರೆ ಕಳೆದ 15ವರ್ಷಗಳಲ್ಲಿ ಒಂದು ರೂಪಾಯಿ ನಾನು ತೆಗೆದುಕೊಂಡಿದ್ದನ್ನೂ ಸಾಕ್ಷೀಕರಿಸಲು ಸಾಧ್ಯವಾಗಲಿಲ್ಲ. ತನಿಖೆ ನಡೆಯುತ್ತಿದೆ. ನಾನು ಹುಟ್ಟುಹಾಕಿದ ಮಹತ್ವದ ಕ್ರೀಡೆ ಐಪಿಎಲ್​ ಈಗ ಜಗತ್ತಿನಾದ್ಯಂತ ಮಹತ್ವ ಪಡೆದಿದೆ. ರಾಹುಲ್ ಗಾಂಧಿಯವರೇ ನಾನು ನಿಮ್ಮಂತೆ ದೋಷಿ ಎನ್ನಿಸಿಕೊಂಡಿಲ್ಲ ಎಂದೂ ಹೇಳಿದ್ದಾರೆ.

Exit mobile version