Site icon Vistara News

ಸಂಸತ್ತಿನ ಗಾಂಧಿ ಪ್ರತಿಮೆ ಬಳಿ ಕುಳಿತು ತಂದೂರಿ ಚಿಕನ್‌ ತಿಂದ್ರಾ ಪ್ರತಿಪಕ್ಷಗಳ ಸಂಸದರು?

TMC MPs

ನವ ದೆಹಲಿ: ರಾಜ್ಯಸಭೆ (Rajya Sabha) ಯಿಂದ ಅಮಾನತುಗೊಂಡು ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಂಸದರ ವಿರುದ್ಧ ಬಿಜೆಪಿ ನಾಯಕ ಶೆಹಜಾದ್‌ ಪೂನಾವಾಲಾ ಗಂಭೀರ ಆರೋಪ ಮಾಡಿದ್ದಾರೆ. ʼಸಂಸತ್ತಿನ ಎದುರಿನ ಗಾಂಧಿ ಪ್ರತಿಮೆ ಕೆಳಗೆ ಕುಳಿತು ಇವರೆಲ್ಲ ತಂದೂರಿ ಚಿಕನ್‌ ತಿಂದಿದ್ದಾರೆ. ಇವರೇನು ಪ್ರತಿಭಟನೆ ಮಾಡುತ್ತಿದ್ದಾರೋ, ಪ್ರಹಸನ ಮಾಡುತ್ತಿದ್ದಾರೋ ಅಥವಾ ಪಿಕ್ನಿಕ್‌ಗೆ ಬಂದಿದ್ದಾರೋʼ? ಎಂದು ಪ್ರಶ್ನೆ ಮಾಡಿದ್ದಾರೆ.

ʼರಾಜ್ಯಸಭೆಯಿಂದ ಅಮಾನತುಗೊಂಡು ಪ್ರತಿಭಟನೆ ನಡೆಸುತ್ತಿರುವ ಕೆಲವು ಸದಸ್ಯರು ಗಾಂಧಿ ಪ್ರತಿಮೆ ಎದುರೇ ಕುಳಿತು ಚಿಕನ್‌ ತಿಂದಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿದೆ. ಪ್ರಾಣಿವಧೆಯನ್ನು ಗಾಂಧೀಜಿ ಬಲವಾಗಿ ವಿರೋಧಿಸುತ್ತಿದ್ದರು. ಅಂಥದ್ದರಲ್ಲಿ ಇವರೆಲ್ಲ ಅವರ ಪ್ರತಿಮೆ ಕೆಳಗೇ ಕುಳಿತು ಚಿಕನ್‌ ಸೇವಿಸಿದ್ದಾರೆ ಎಂದು ಪೂನಾವಾಲಾ ಹೇಳಿದ್ದಾಗಿ ಎಎನ್‌ಐ ಸುದ್ದಿ ಮಾಧ್ಯಮ ವರದಿ ಮಾಡಿದೆ.

ಬಿಜೆಪಿ ನಾಯಕನ ಈ ಆರೋಪವನ್ನು ತೃಣಮೂಲ ಕಾಂಗ್ರೆಸ್‌ ಸಂಸದೆ ಸುಷ್ಮಿತಾ ದೇವ್‌ ಖಂಡಿಸಿದ್ದಾರೆ. ʼಗಾಂಧಿ ಪ್ರತಿಮೆ ಬಳಿ ತಂದೂರಿ ಚಿಕನ್‌ ತಿಂದಿದ್ದೇವೆ ಎಂಬುದು ಮಹಾನ್‌ ಸುಳ್ಳು. ಹಣದುಬ್ಬರ, ಬೆಲೆ ಏರಿಕೆ ಸೇರಿ ಹಲವು ಕಾರಣಗಳಿಂದ ಕೇಂದ್ರ ಸರ್ಕಾರದ ಸಚಿವರು, ಬಿಜೆಪಿಯ ನಾಯಕರು ಅಪಖ್ಯಾತಿಗೆ ಒಳಗಾಗಿದ್ದಾರೆ. ನಾವು, ಜನಸಾಮಾನ್ಯರು ಕೇಳುವ ಪ್ರಶ್ನೆಗೆ ಅವರ ಬಳಿ ಉತ್ತರವೇ ಇಲ್ಲ. ಹೀಗಾಗಿ ಹತಾಶೆಯಿಂದ ನಮ್ಮ ವಿರುದ್ಧ ಇಂಥ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್‌ ನಾಯಕರು ಮುಚ್ಚಿದ ಬಾಗಿಲ ಹಿಂದೆ ಎಲ್ಲವನ್ನೂ ತಿನ್ನುತ್ತಾರೆ. ಹೀಗಾಗಿ ನಮ್ಮ ಆಹಾರದ ಬಗ್ಗೆ ಕಮೆಂಟ್‌ ಮಾಡಲು ಬರಬೇಡಿʼ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯಸಭೆಯಿಂದ ಒಂದೇ ದಿನ ಅಮಾನತುಗೊಂಡ 20 ಸಂಸದರು ಸಂಸತ್‌ ಆವರಣದಲ್ಲಿ 50 ತಾಸುಗಳ ಧರಣಿ ನಡೆಸಲು ನಿರ್ಧರಿಸಿದ್ದಾರೆ. ಅದರ ಅನ್ವಯ ಶುಕ್ರವಾರ ಸಂಜೆ 5ಗಂಟೆ ಹೊತ್ತಿಗೆ ಅವರ ಸತ್ಯಾಗ್ರಹ ಪೂರ್ಣಗೊಳ್ಳಲಿದೆ. ಈ ಮಧ್ಯೆ ಇಂದು ಮತ್ತೆ ಮೂವರು ಸಂಸದರು ರಾಜ್ಯಸಭೆಯಿಂದ ಅಮಾನತುಗೊಂಡಿದ್ದಾರೆ. ಅಂದಹಾಗೇ, ರಾಜ್ಯಸಭೆಯಿಂದ ಅಮಾನತುಗೊಂಡ ಎಲ್ಲ 23 ಸಂಸದರೂ ಒಂದು ವಾರಗಳ ಕಾಲ ಸಂಸತ್ತಿಗೆ ಕಾಲಿಡುವಂತಿಲ್ಲ ಎಂದು ಆದೇಶ ಇದೆ.

ಇದನ್ನೂ ಓದಿ: Parliament Session: ರಾಜ್ಯಸಭೆಯಲ್ಲಿ ಅಶಿಸ್ತಿನ ವರ್ತನೆ; ಮತ್ತೆ ಮೂವರು ಸಂಸದರು ಅಮಾನತು

Exit mobile version