ನವ ದೆಹಲಿ: ಇಸ್ಲಾಂ ವಿರುದ್ಧ ಸದಾ ಕಿಡಿಕಾರುವ, ವಿವಾದಾತ್ಮಕ ಹೇಳಿಕೆ ನೀಡುವ ವಿಎಚ್ಪಿ ನಾಯಕಿ ಸಾಧ್ವಿ ಪ್ರಾಚಿ (Sadhvi Prachi) ಇತ್ತೀಚೆಗಷ್ಟೇ ಮಧ್ಯಪ್ರದೇಶದ ರತ್ನಂನಲ್ಲಿ ಮಾತನಾಡುತ್ತ ‘ಹಿಂದು ಹೆಣ್ಣು ಮಕ್ಕಳು ತಮ್ಮ ಬ್ಯಾಗ್ನಲ್ಲಿ ಬಾಚಣಿಕೆ, ಲಿಪ್ಸ್ಟಿಕ್ ಬದಲು ಚಾಕು ಇಟ್ಟುಕೊಳ್ಳಬೇಕು. ಜಿಹಾದಿಗಳು ಸಮೀಪ ಬಂದರೆ, ಈ ಚಾಕುವಿನಿಂದಲೇ ರಕ್ಷಣೆ ಪಡೆಯಬೇಕು’ ಎಂದು ಹೇಳಿದ್ದರು. ಈ ಹೇಳಿಕೆ ವಿವಾದ ಸೃಷ್ಟಿಸಿದ್ದ ಬೆನ್ನಲ್ಲೇ ಮತ್ತೊಂದು ವಿವಾದಾತ್ಮಕ ಮಾತುಗಳನ್ನಾಡಿದ್ದಾರೆ. ಇತ್ತೀಚೆಗಷ್ಟೇ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾದ ನಟಿ ಸ್ವರಾ ಭಾಸ್ಕರ್ (Swara Bhasker) ಅವರಿಗೆ ‘ನೀವು ಆತನನ್ನು ಮದುವೆಯಾಗುವುದಕ್ಕೂ ಮೊದಲು ಒಂದು ಸಲ ಫ್ರಿಜ್ ನೋಡಬೇಕಿತ್ತು’ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಶ್ರದ್ಧಾ ವಾಳ್ಕರ್ ತನ್ನ ಪಾಲಕರನ್ನು ಧಿಕ್ಕರಿಸಿ, ಮುಸ್ಲಿಂ ಯುವಕ ಅಫ್ತಾಬ್ ಪೂನಾವಾಲಾ ಜತೆ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದಳು. ಬಳಿಕ ಆತ ಶ್ರದ್ಧಾಳನ್ನು ಹತ್ಯೆಗೈದು, 35 ಪೀಸ್ಗಳಾಗಿ ತುಂಡರಿಸಿ ಫ್ರಿಜ್ನಲ್ಲಿಟ್ಟಿದ್ದ ಸುದ್ದಿ ದೇಶದ ಪ್ರತಿಮೂಲೆಗೂ ವ್ಯಾಪಿಸಿದೆ. ಸದ್ಯ ಅಫ್ತಾಬ್ ಪೊಲೀಸರ ವಶದಲ್ಲಿ ಇದ್ದಾನೆ. ಈಗ ಸಾಧ್ವಿ ಪ್ರಾಚಿ ಅದೇ ವಿಚಾರವನ್ನಿಟ್ಟುಕೊಂಡು ನಟಿ ಸ್ವರಾ ಭಾಸ್ಕರ್ ಅವರ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: Sadhvi Prachi : ಬ್ಯಾಗಿನಲ್ಲಿ ಬಾಚಣಿಗೆ ಬದಲು ಚಾಕು ಇಟ್ಟುಕೊಳ್ಳಿ: ಹಿಂದೂ ಹೆಣ್ಣು ಮಕ್ಕಳಿಗೆ ಸಾಧ್ವಿ ಪ್ರಾಚಿ ಕರೆ
ನಟಿ ಸ್ವರಾ ಭಾಸ್ಕರ್ ಅವರು ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ರನ್ನು ಮದುವೆಯಾಗಿದ್ದನ್ನು ವಿರೋಧಿಸಿದ ಸಾಧ್ವಿ ಪ್ರಾಚಿ, ‘ಶ್ರದ್ಧಾ ವಾಳ್ಕರ್ ಅವರು 35 ತುಂಡುಗಳಾಗಿ ಕತ್ತರಿಸಲ್ಪಟ್ಟ, ಆಕೆಯ ದೇಹವನ್ನು ಫ್ರಿಜ್ನಲ್ಲಿ ಇಟ್ಟ ಸುದ್ದಿಯ ಬಗ್ಗೆ ಬಹುಶಃ ಸ್ವರಾ ಭಾಸ್ಕರ್ ಅವರು ಗಮನಕೊಟ್ಟು, ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಅನ್ನಿಸುತ್ತದೆ. ಮದುವೆ ಬಗ್ಗೆ ಇಂಥ ದೊದ್ದ ನಿರ್ಧಾರ ತೆಗೆದುಕೊಳ್ಳುವ ಮೊದಲು ಅವರು ಒಮ್ಮೆ ಫ್ರಿಜ್ ನೋಡಬೇಕಿತ್ತು. ಆದರೂ ಅದು ಅವರ ಖಾಸಗಿ ವಿಷಯ ಆಗಿದ್ದರಿಂದ, ನಾನು ಹೆಚ್ಚೇನೂ ಹೇಳುವುದಿಲ್ಲ. ಆದರೆ ಶ್ರದ್ಧಾಗೆ ಏನಾಯಿತೋ, ಅದು ಸ್ವರಾಗೂ ಆಗಬಹುದು’ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ‘ಸ್ವರಾ ಭಾಸ್ಕರ್ ಅವರು ಯಾವಾಗಲೂ ಹಿಂದೂ ಧರ್ಮದ ವಿರೋಧಿ. ಅವರು ಖಂಡಿತವಾಗಿಯೂ ಹಿಂದು ಧರ್ಮದವನ ಕೈ ಹಿಡಿಯುವುದಿಲ್ಲ ಎಂದು ನನಗೆ ಮೊದಲೇ ಗೊತ್ತಿತ್ತು, ಅದು ಸತ್ಯವಾಯಿತು’ ಎಂದೂ ಸಾಧ್ವಿ ಹೇಳಿದ್ದಾರೆ.