ತೆಲಂಗಾಣ: ಗ್ರಾಹಕನಿಗೆ ಫುಡ್ ಡೆಲಿವರಿ ಕೊಡಲು ಮನೆ ಬಾಗಿಲಿಗೆ ಹೋಗಿದ್ದ ಸ್ವಿಗ್ಗಿ ಏಜೆಂಟ್ ಆ ಕಟ್ಟಡದ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಅದಕ್ಕೆ ಕಾರಣ ಗ್ರಾಹಕ ಸಾಕಿದ್ದ ನಾಯಿ.
ಇಂಥದ್ದೊಂದು ಮನಕಲಕುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಸ್ವಿಗ್ಗಿ ಫುಡ್ ಡೆಲಿವರಿ ಹುಡುಗ, 23 ವರ್ಷದ ಮೊಹಮ್ಮದ್ ರಿಜ್ವಾನ್, ಜನವರಿ 11ರಂದು ಆಹಾರ ತೆಗೆದುಕೊಂಡು ಬಂಜಾರಾ ಹಿಲ್ಸ್ನಲ್ಲಿರುವ ಲುಂಬಿನಿ ರಾಕ್ ಕ್ಯಾಸಲ್ ಅಪಾರ್ಟ್ಮೆಂಟ್ನ ಮೂರನೇ ಮಹಡಿಗೆ ಹೋಗಿದ್ದ. ಆತ ಡೆಲಿವರಿ ಕೊಡಬೇಕಿದ್ದ ಮನೆಯಲ್ಲೇ, ನಾಯಿಯ ರೂಪದಲ್ಲಿ ಆತನ ಸಾವು ಕುಳಿತಿತ್ತ. ಆ ಗ್ರಾಹಕನ ಮನೆಯಲ್ಲಿ ಸಾಕಿದ್ದ ಜರ್ಮನ್ ಶೆಫರ್ಡ್ ನಾಯಿ ಮೊಹಮ್ಮದ್ ರಿಜ್ವಾನ್ನನ್ನು ಅಟ್ಟಿಸಿಕೊಂಡು ಬಂದಿದೆ. ರಿಜ್ವಾನ್ ಮನೆ ಬಾಗಿಲ ಬಳಿ ಕಾಲಿಡುತ್ತಿದ್ದಂತೆ ಆ ನಾಯಿ ಅದೆಷ್ಟು ಕ್ರೌರ್ಯ ಸ್ವರೂಪದಲ್ಲಿ ಅವನನ್ನು ಅಟ್ಟಿಸಿಕೊಂಡು ಬಂದಿತೆಂದರೆ, ಆತ ಇನ್ನೇನೂ ಮಾಡಲು ತೋಚದೆ ಆ ಮೂರನೇ ಮಹಡಿಯಿಂದ ಕೆಳಗೆ ಹಾರಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ರಿಜ್ವಾನ್ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಶ್ವಾನದ ಮಾಲೀಕರ ನಿರ್ಲಕ್ಷ್ಯದಿಂದಲೇ ರಿಜ್ವಾನ್ ಮೃತಪಟ್ಟಿದ್ದಾಗಿ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಬಂಜಾರಾ ಹಿಲ್ಸ್ ಠಾಣೆ ಇನ್ಸ್ಪೆಕ್ಟರ್ ನರೇಂದರ್ ಹೇಳಿಕೆ ನೀಡಿದ್ದಾರೆ. ರಿಜ್ವಾನ್ ಸಹೋದರ ಪ್ರತಿಕ್ರಿಯೆ ನೀಡಿ, ‘ನನ್ನ ಸಹೋದರ ಪಾರ್ಸೆಲ್ ಕೊಡಲೆಂದು ಬಂಜಾರಾ ಹಿಲ್ಸ್ನ ಅಪಾರ್ಟ್ಮೆಂಟ್ಗೆ ಹೋಗಿದ್ದ. ಆದರೆ ನಾಯಿಯಿಂದ ತಪ್ಪಿಸಿಕೊಳ್ಳಲು ಹೋಗಿ, ತೀವ್ರಗಾಯಗೊಂಡು ಮೃತಪಟ್ಟಿದ್ದಾನೆ. ತೆಲಂಗಾಣ ಸರ್ಕಾರ ನಮಗೆ ನ್ಯಾಯ ಒದಗಿಸಬೇಕು. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Navaratri Special | ನವರಾತ್ರಿ ಹಿನ್ನೆಲೆ ರೈಲುಗಳಲ್ಲಿ ವಿಶೇಷ ಆಹಾರ, ಬುಕ್ ಮಾಡುವುದು ಹೇಗೆ? ಬೆಲೆ ಎಷ್ಟು?