ಆಗ್ರಾ: ಜಗತ್‌ಪ್ರಸಿದ್ಧ ಆಗ್ರಾ ತಾಜ್‌ಮಹಲ್‌ನ ನೆಲ ಮಹಡಿ ಮತ್ತು ಮೇಲಿನ ಭಾಗದಲ್ಲಿರುವ ಕೋಣೆಗಳನ್ನು ಕಾಯಂ ಆಗಿ ಮುಚ್ಚಲಾಗಿದೆ. ಈ ಕಟ್ಟಡವು ಮೊದಲು ಶಿವಾಲಯವಾಗಿತ್ತೆಂಬ ರಹಸ್ಯ ಈ ಕೋಣೆಗಳಲ್ಲಿ ಅಡಗಿರಬಹುದು ಎಂಬ ಅರ್ಜಿದಾರರೊಬ್ಬರ ವಾದಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ಪ್ರಾಚ್ಯ ವಸ್ತು ಇಲಾಖೆ ನೀಡಿದೆ. ಈ ಕೋಣೆಗಳನ್ನು ಕಾಯಂ ಆಗಿ ಮುಚ್ಚಲಾಗಿಲ್ಲ. ಇತ್ತೀಚೆಗಷ್ಟೇ ಕಾಯಕಲ್ಪ ಕಾಮಗಾರಿಗಾಗಿ ತೆರೆಯಲಾಗಿದೆ. ಕಟ್ಟಡದ ಕುರಿತ ದಾಖಲೆಗಳನ್ನು ಅದೆಷ್ಟೋ ವರ್ಷಗಳಿಂದ ಹಲವು ಬಾರಿ ಪರಿಶೀಲನೆ ನಡೆಸಲಾಗಿದೆ. ಆದರೆ, ಯಾವತ್ತೂ ಅಲ್ಲಿ ಯಾವುದೇ ಮೂರ್ತಿಗಳಿರುವ ಉಲ್ಲೇಖಗಳು ಇಲ್ಲ ಎಂದು ಪ್ರಾಚ್ಯ ವಸ್ತು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮೂರು ತಿಂಗಳ ಹಿಂದಷ್ಟೇ ಕೋಣೆಗಳ ಬಾಗಿಲುಗಳನ್ನು ತೆರೆದು ದುರಸ್ತಿ ಮತ್ತು ಕಾಯಕಲ್ಪದ ಕೆಲಸಗಳನ್ನು ಮಾಡಲಾಗಿದೆ. ಇದುವರೆಗೆ ಹಲವು ದಾಖಲೆ ಮತ್ತು ವರದಿಗಳನ್ನು ಪರಿಶೀಲಿಸಲಾಗಿದೆ. ಅದರಲ್ಲಿ ಯಾವುದರಲ್ಲೂ ಮೂರ್ತಿಗಳಿರುವ ಉಲ್ಲೇಖಗಳಿಲ್ಲ ಎಂದು ಅವರು ತಿಳಿಸಿದ್ದಾರೆ.
22 ಅಲ್ಲ 100 ಕೋಣೆಗಳು ಮುಚ್ಚಿವೆ
ಈ ಅಧಿಕಾರಿಯ ಪ್ರಕಾರ, ತಾಜ್ ಮಹಲ್ ಸಮುಚ್ಚಯದಲ್ಲಿ ಮುಚ್ಚಿರುವುದು ಕೇವಲ 22 ಕೋಣೆಗಳಲ್ಲ. ನೂರು ಕೋಣೆಗಳು ಮುಚ್ಚಿವೆ. ಸುರಕ್ಷತೆ ಮತ್ತು ಭದ್ರತಾ ಕಾರಣಗಳಿಗಾಗಿ ಇವುಗಳನ್ನು ಸಾರ್ವಜನಿಕರಿಗೆ ತೆರೆದಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು. ನೆಲಮಹಡಿ ಮತ್ತು ಮೇಲಿನ ಮಹಡಿಗಳಲ್ಲಿರುವ ಕೆಲವು ಕೋಣೆಗಳು, ನಾಲ್ಕು ಮಿನಾರುಗಳು ಮೂಲೆ ಬುರುಜುಗಳಲ್ಲಿರುವ ಕೆಲವು ಕೋಣೆಗಳನ್ನು ಮುಚ್ಚಲಾಗಿವೆ ಎಂದು ತಿಳಿಸಿದ್ದಾರೆ.
ವಿವಾದ ಹುಟ್ಟಿದ್ದೆಲ್ಲಿಂದ?
ಖ್ಯಾತ ಇತಿಹಾಸಜ್ಞರಾಗಿರುವ ಪಿ.ಎನ್ ಓಕ್ ಅವರು 1989ರಲ್ಲಿ ಬರೆದ ಪುಸ್ತಕವೊಂದು ಪ್ರಕಟವಾದ ಬಳಿಕ ತಾಜ್ ಮಹಲ್ ವಿವಾದದ ಸುಳಿಗೆ ಸಿಲುಕಿದೆ. ತಾಜ್ ಮಹಲ್ ಮೂಲತಃ ತೇಜೋಮಹಲ್ ಎನ್ನುವುದು ಪುಸ್ತಕದ ಪ್ರಮುಖ ವಾದ. ಅಂದರೆ, ಇದು ಮೂಲತಃ ಒಂದು ಹಿಂದೂ ದೇವಾಲಯವಾಗಿದ್ದು, ರಜಪೂತ ದೊರೆಯೊಬ್ಬರು ಕಟ್ಟಿಸಿದ್ದಾರೆ ಎನ್ನುವುದು ಓಕ್ ವಾದ.
ಆದರೆ, ಹಲವಾರು ಇತಿಹಾಸಜ್ಞರು ಈ ವಾದ ಸರಿಯಲ್ಲ ಎಂದು ಹೇಳಿದ್ದಾರೆ. 2000ನೇ ಇಸವಿಯಲ್ಲಿ ಓಕ್ ಅವರು ತಾಜ್ ಮಹಲ್ ಹಿಂದೂ ದೊರೆಯೊಬ್ಬ ಕಟ್ಟಿದ ದೇಗುಲ ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ಸುಪ್ರೀಂಕೋರ್ಟ್ ಮೊರೆ ಹೊಕ್ಕಿದ್ದರು. ಆದರೆ, ಸುಪ್ರೀಂಕೋರ್ಟ್ ಅವರ ವಾದವನ್ನು ತಳ್ಳಿ ಹಾಕಿತ್ತು.
ಏನಿದು ವಿವಾದದ ಮೂಲ
ತಾಜ್ ಮಹಲ್ ಮತ್ತು ಶಿವಾಲಯ ಎಂಬ ಜಜ್ಞಾಸೆ ಮತ್ತೆ ಆರಂಭವಾಗಲು ಕಾರಣವಾಗಿದ್ದು ಬಿಜೆಪಿ ನಾಯಕರೊಬ್ಬರು ಸಲ್ಲಿಸಿದ ಅರ್ಜಿ. ತಾಜ್ ಮಹಲ್‌ನ 22 ಕೋಣೆಗಳನ್ನು ಕಾಯಂ ಆಗಿ ಮುಚ್ಚಲಾಗಿದೆ. ಪ್ರಾಚ್ಯ ವಸ್ತು ಇಲಾಖೆ ಭದ್ರತಾ ಕಾರಣವನ್ನು ನೀಡುತ್ತಿದೆ. ಆದರೆ, ಈ ಕೋಣೆಗಳಲ್ಲಿ ತಾಜ್ ಮಹಲ್ ಶಿವಾಲಯ ಎಂಬುದಕ್ಕೆ ಪೂರಕವಾದ ದಾಖಲೆಗಳಿವೆ. ಇದನ್ನು ತೆರೆದು ಪರಿಶೀಲಿಸಲು ಆದೇಶ ನೀಡಿದರೆ ನಿಜವಾದ ರಹಸ್ಯ ಹೊರಬೀಳಲಿದೆ ಎಂದು ಅರ್ಜಿದಾರರು ವಾದಿಸಿದ್ದರು.
ಆದರೆ, ಅಲಹಾಬಾದ್ ಕೋರ್ಟ್ ಅರ್ಜಿದಾರರ ವಾದವನ್ನು ತಳ್ಳಿ ಹಾಕಿತ್ತು. ಇದು ಪ್ರಾಚ್ಯ ವಸ್ತು ಇಲಾಖೆಗೆ ಸೇರಿದ ವಿಷಯ. ಅಧಿಕಾರಿಗಳು ಇದರ ಬಗ್ಗೆ ತೀರ್ಮಾನ ನಡೆಸುತ್ತಾರೆ ಎಂದು ಹೇಳುವ ಮೂಲಕ ಕೋಣೆಗಳನ್ನು ತೆರೆದು ಸರ್ವೆ ನಡೆಸಬೇಕು ಎಂಬ ಬೇಡಿಕೆಯನ್ನು ತಳ್ಳಿ ಹಾಕಿತ್ತು.
ಇದೀಗ ಪ್ರಾಚ್ಯ ವಸ್ತು ಇಲಾಖೆಯ ಈ ಅಧಿಕಾರಿ ಕೋಣೆಗಳಲ್ಲಿ ಕಟ್ಟಡವು ಹಿಂದೂ ದೇಗುಲ ಎಂದು ಹೇಳಬಹುದಾದ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಹೇಳಿರುವುದು ಹೊಸ ತಿರುವನ್ನು ಪಡೆದಂತಾಗಿದೆ. ಹೀಗಾಗಿ ಮುಂದೆ ಇದು ಯಾವ ತಿರುವು ಪಡೆಯಲಿದೆ ಎಂದು ಕಾದು ನೋಡಬೇಕಾಗಿದೆ.