ನವ ದೆಹಲಿ: ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದಡಿ ಬರುವ ಐಐಎಂ ಕೊಯಿಕ್ಕೋಡ್ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೊಯಿಕ್ಕೋಡ್) ಸ್ವಾಯತ್ತ ಸಾರ್ವಜನಿಕ ಉದ್ಯಮ ನಿರ್ವಹಣೆ ತರಬೇತಿ ಶಿಕ್ಷಣ ಸಂಸ್ಥೆ ಆಯೋಜಿಸಿರುವ ನಾಲ್ಕು ದಿನಗಳ ತರಬೇತಿಯಲ್ಲಿ, ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ಅಧಿಕಾರಿಗಳೂ (Taliban Foreign Ministry) ಕೂಡ ಪಾಲ್ಗೊಳ್ಳುತ್ತಿದ್ದಾರೆ. ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಕಾರ್ಯಕ್ರಮದಡಿ ‘An Indian Immersion’ ಎಂಬ ಹೆಸರಿನಲ್ಲಿ ಈ ತರಬೇತಿ ನಡೆಯುತ್ತಿದೆ. ಈಗಾಗಲೇ ಪ್ರಾರಂಭವಾಗಿದ್ದು, ಮಾರ್ಚ್ 17ರವರೆಗೆ ನಡೆಯಲಿದೆ.
ಇದರಲ್ಲಿ ವಿವಿಧ ದೇಶಗಳ ವಿದೇಶಾಂಗ ವ್ಯವಹಾರಗಳ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದಾರೆ. ಅದರಲ್ಲೂ ತಾಲಿಬಾನ್ ವಿದೇಶಾಂಗ ಸಚಿವಾಲಯದ ಅಧಿಕಾರಿಗಳೂ ರಿಜಿಸ್ಟರ್ ಮಾಡಿಕೊಂಡಿದ್ದು ವಿಶೇಷ ಎನ್ನಿಸಿದೆ. ಅಲ್ಲದೆ, ಹೀಗೆ ಇನ್ನೊಂದು ದೇಶ ನಡೆಸುತ್ತಿರುವ ಕಾರ್ಯಕ್ರಮದಲ್ಲಿ ತಾಲಿಬಾನಿಗಳು ಭಾಗವಹಿಸುತ್ತಿರುವುದು ಇದೇ ಮೊದಲಬಾರಿಯಾಗಿದೆ.
ಭಾರತದ ವ್ಯಾಪಾರ/ಉದ್ಯಮ ವಲಯ, ಸಾಂಸ್ಕೃತಿಕ ಪರಂಪರೆ, ನಿಯಂತ್ರಕ ಪರಿಸರ ವ್ಯವಸ್ಥೆ ಬಗ್ಗೆ ವಿದೇಶಿ ಪ್ರತಿನಿಧಿಗಳಲ್ಲಿ ಆಳವಾದ ಅರಿವು ಮೂಡಿಸುವ ಸಲುವಾಗಿಯೇ ಈ ತರಬೇತಿ ಆಯೋಜಿಸಲಾಗಿದೆ ಎಂದು ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಕಾರ್ಯಕ್ರಮದ ವೆಬ್ಸೈಟ್ನಲ್ಲಿ ಉಲ್ಲೇಖಿಸಲಾಗಿದೆ. ಈ ತರಬೇತಿಯಲ್ಲಿ ಬೇರೆ ಕೆಲವು ದೇಶಗಳ ಪ್ರತಿನಿಧಿಗಳೂ ಪಾಲ್ಗೊಂಡಿದ್ದಾರೆ. ಅಂದಹಾಗೇ, ಈ ಕೋರ್ಸ್ ಆನ್ಲೈನ್ ಮೂಲಕ ಮಾಡುವಂಥದ್ದಾಗಿದ್ದು, ನೋಂದಾಯಿಸಿಕೊಂಡವರು ತಮ್ಮ ದೇಶದಲ್ಲೇ ಇದ್ದು ಭಾಗವಹಿಸಬಹುದಾಗಿದೆ.
ಇದನ್ನೂ ಓದಿ: Taliban Government : ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾಲಿಬಾನ್ ಆಡಳಿತ ಬರುತ್ತೆ: ಹೇಳಿಕೆ ಸಮರ್ಥಿಸಿದ ಪ್ರತಾಪ್‌ಸಿಂಹ