ಇಂದು ನವ ದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ವಿದ್ಯಾರ್ಥಿಗಳು-ಪಾಲಕರು ಮತ್ತು ಶಿಕ್ಷಕರೊಂದಿಗೆ ಪರೀಕ್ಷಾ ಪೆ ಚರ್ಚಾ (Pariksha pe charcha 2023) ನಡೆಸಿ, ವಿವಿಧ ಸಲಹೆಗಳನ್ನು ನೀಡಿದರು. ಹಾಗೇ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿದರು. ಇದೇ ವೇಳೆ ಅವರು ತಮಿಳು ಭಾಷೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ವಿವಿಧ ಭಾಷೆಗಳನ್ನು ಕಲಿಯುವುದರ ಅವಶ್ಯಕತೆ ಏನು ಎಂದು ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶದ ವಿದ್ಯಾರ್ಥಿನಿಯರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ, ‘ಅಕ್ಕಪಕ್ಕದ ರಾಜ್ಯಗಳ ಮೂರ್ನಾಲ್ಕು ಭಾಷೆಗಳನ್ನಾದರೂ ಕಲಿತಿಟ್ಟುಕೊಳ್ಳಬೇಕು. ಇದರಿಂದ ನೀವು ಆ ಪ್ರದೇಶಗಳಿಗೆ ಹೋದಾಗ, ಇನ್ನಿತರ ಕೆಲವು ಸಂದರ್ಭಗಳಲ್ಲಿ ಅನುಕೂಲವಾಗುತ್ತದೆ. ಭಾಷೆ ವ್ಯಕ್ತಿಗಳನ್ನು, ವಿವಿಧ ಪ್ರಾದೇಶಿಕ ಸಂಸ್ಕೃತಿಯನ್ನು ಬೆಸೆಯುತ್ತದೆ. ಈಗಿನ ಯುವಜನರು ಯಾವುದೇ ಭಾಷೆಯನ್ನು ಅತ್ಯಂತ ವೇಗವಾಗಿ ಕಲಿಯುವ ಜಾಣ್ಮೆ ಹೊಂದಿರುತ್ತಾರೆ. ಮತ್ತೊಂದು ಭಾಷೆಯನ್ನು ಅರ್ಧಂಬರ್ಧ ಕಲಿತಿದ್ದರೂ ನಿಮಗೆ ಅದು ಕೂಡ ಅನುಕೂಲವೇ’ ಎಂದು ಹೇಳಿದರು.
ಇದೇ ವೇಳೆ ತಮಿಳು ಭಾಷೆಯ ಉಲ್ಲೇಖ ಮಾಡಿದ ಪ್ರಧಾನಿ ನರೇಂದ್ರ ಮೋದಿ, ‘ವಿಶ್ವದ ಅತ್ಯಂತ ಪುರಾತನ ಭಾಷೆ ತಮಿಳು. ಆ ತಮಿಳು ನಮ್ಮ ಭಾರತದ್ದು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಿದೆ. ಇಷ್ಟು ದೊಡ್ಡ ಭಾಷಾ ಸಂಪತ್ತು ನಮ್ಮ ದೇಶದಲ್ಲಿದೆ ಎಂಬುದನ್ನು ನಾವೆಲ್ಲ ಅತ್ಯಂತ ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಆದರೆ ತಮಿಳು ಅತ್ಯಂತ ಪುರಾತನ ಭಾಷೆ ಎಂದು ಹೇಳಿಕೊಳ್ಳಲೂ ನಾವು ಹಿಂಜರಿಯುತ್ತೇವೆ. ಆದರೆ ನನಗಂತೂ ಈ ಬಗ್ಗೆ ಹೆಮ್ಮೆಯಿದೆ. ನಾನು ಈ ಹಿಂದೆ ವಿಶ್ವಸಂಸ್ಥೆಯಲ್ಲಿ ಉದ್ದೇಶಪೂರ್ವಕವಾಗಿಯೇ ಕೆಲವು ತಮಿಳು ಶಬ್ದಗಳನ್ನು ಉಲ್ಲೇಖಿಸಿದ್ದೆ’ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಅವರು ‘ಭಾರತದಲ್ಲಿ ವೈವಿಧ್ಯತೆ ಇದೆ. ನಮ್ಮಲ್ಲಿ ನೂರಾರು ಭಾಷೆಗಳಿವೆ. ಈ ಭಾಷೆಗಳೇ ನಮ್ಮ ಪಾಲಿನ ಸಂಪತ್ತ-ಐಶ್ವರ್ಯ. ನಾವು ತಬಲಾ, ಕೊಳಲು, ಪಿಯಾನೋ ಮತ್ತಿತರ ಕಲೆಗಳನ್ನು ಕಲಿಯುವುದರಿಂದ ಕೌಶಲ ಹೆಚ್ಚುತ್ತದೆ. ಅದೇ ರೀತಿ ನಮ್ಮ ಭಾಷೆ ಹೊರತು ಪಡಿಸಿ, ಇನ್ನೊಂದೆರಡು ಭಾಷೆಗಳನ್ನಾದರೂ ಕಲಿತಿಟ್ಟುಕೊಂಡರೆ ಎಲ್ಲ ದೃಷ್ಟಿಯಿಂದಲೂ ಅನುಕೂಲವಾಗುತ್ತದೆ. ನಾವೆಷ್ಟು ಸಹಜವಾಗಿ ಆಹಾರ ತಿನ್ನುತ್ತೇವೆಯೋ, ಅಷ್ಟೇ ಸಹಜವಾಗಿ ಭಾಷೆಯನ್ನೂ ಕಲಿತಿಟ್ಟುಕೊಳ್ಳಬೇಕು’ ಎಂದು ಹೇಳಿದರು.
ವಿಶ್ವದ ಅತ್ಯಂತ ಪುರಾತನ ಭಾಷೆ ತಮಿಳೋ, ಸಂಸ್ಕೃತವೋ, ಕನ್ನಡವೋ ಎಂಬ ಬಗ್ಗೆ ಹಲವು ಗೊಂದಲಗಳು ಇವೆ. ಈ ಮಧ್ಯೆ ಅನೇಕರು ತಮಿಳು ಎಲ್ಲ ಭಾಷೆಗಳಿಗಿಂತಲೂ ಹಳೇ ಭಾಷೆ ಎಂದೇ ಹೇಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 2021ರಲ್ಲಿ ಮನ್ ಕೀ ಬಾತ್ನಲ್ಲಿಯೂ ಒಮ್ಮೆ ತಮಿಳಿನ ಮಹತ್ವ ಸಾರಿದ್ದರು. ವಿಶ್ವದ ಪುರಾತನ ಭಾಷೆಯಾದ ತಮಿಳು ಅತ್ಯಂತ ಸುಂದರ ಭಾಷೆ. ನಾನದನ್ನು ಕಲಿಯದೆ ಇರುವುದನ್ನು ಪಶ್ಚಾತ್ತಾಪವಿದೆ ಎಂದಿದ್ದರು.