ತಮಿಳುನಾಡಿನಲ್ಲಿ ಅಬಕಾರಿ ಸಚಿವ ವಿ.ಸೆಂಥಿಲ್ ಬಾಲಾಜಿ (Tamil Nadu Minister Senthil Balaji) ಅವರನ್ನು ಇ.ಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಬಂಧನ ಮಾಡಿದ್ದು ಇದೀಗ ಅಲ್ಲಿನ ಡಿಎಂಕೆ ಪಕ್ಷ ಮತ್ತು ಬಿಜೆಪಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಸೆಂಥಿಲ್ ಬಂಧನವಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ್ದ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ‘ಇದು ಬಿಜೆಪಿಯ ದ್ವೇಷದ ರಾಜಕಾರಣ. ತಮಿಳುನಾಡಿನಲ್ಲಿ ಡಿಎಂಕೆ ಕೇಡರ್ ತಂಟೆಗೆ ಬರಬೇಡಿ’ ಎಂದು ಎಚ್ಚರಿಕೆ ನೀಡಿದ್ದರು. ಎಂ.ಕೆ.ಸ್ಟಾಲಿನ್ರ ಈ ಮಾತಿಗೆ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ತಿರುಗಿಬಿದ್ದಿದ್ದಾರೆ.
ರಾಜ್ಯದ ಶಿವಗಂಗಾದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಕೆ.ಅಣ್ಣಾಮಲೈ ‘ನಮ್ಮ ಬಿಜೆಪಿ ಕೇಡರ್ಗೆ ಎಚ್ಚರಿಕೆ ನೀಡುವ ಮೂಲಕ ಮುಖ್ಯಮಂತ್ರಿ ಸ್ಟಾಲಿನ್ ಅವರು ತಮ್ಮ ಗಡಿ ದಾಟಿದ್ದಾರೆ. ಈ ಹಿಂದೆ ಅವರ ಸಹೋದರಿ ಕನಿಮೋಳಿ ಬಂಧನ (2ಜಿ ಹಗರಣದಲ್ಲಿ 2011ರಲ್ಲಿ ಡಿಎಂಕೆ ನಾಯಕಿ ಕನಿಮೋಳಿ ಬಂಧನವಾಗಿತ್ತು) ಆಗಿದ್ದಾಗಲೂ ಸ್ಟಾಲಿನ್ ಅವರು ಇಷ್ಟೆಲ್ಲ ಸಂಕಟಪಟ್ಟಿರಲಿಲ್ಲ. ಕೋಪಗೊಂಡಿರಲಿಲ್ಲ. ವಿ.ಸೆಂಥಿಲ್ ಬಾಲಾಜಿ ಅವರು ಡಿಎಂಕೆ ಪಾಲಿಗೆ ಹಣದ ಹರಿವಾಗಿದ್ದರು ಎಂಬುದಕ್ಕೆ ಈಗ ಎಂ.ಕೆ.ಸ್ಟಾಲಿನ್ಗೆ ಬರುತ್ತಿರುವ ಸಿಟ್ಟೇ ಉದಾಹರಣೆ’ ಎಂದು ವ್ಯಂಗ್ಯ ಮಾಡಿದ್ದಾರೆ. ಹಾಗೇ, ಡಿಎಂಕೆ ಕೇಡರ್ ತಂಟೆಗೆ ಬರಬೇಡಿ ಎಂದ ಎಂ.ಕೆ.ಸ್ಟಾಲಿನ್ಗೆ ಅಣ್ಣಾಮಲೈ ಮರು ಬೆದರಿಕೆ ಹಾಕಿದ್ದಾರೆ. ‘ತಾಕತ್ತಿದ್ದರೆ ನಮ್ಮ ಬಿಜೆಪಿ ಕೇಡರ್ನ್ನು ಮುಟ್ಟಲು ಪ್ರಯತ್ನಿಸಿ ಸಾಕು. ನಿಮ್ಮ ಬೆದರಿಕೆಗಳಿಗೆಲ್ಲ ನಾವು ಹೆದರುತ್ತೇವೆ ಎಂದು ಭಾವಿಸಲೇಬೇಡಿ. ನೀವೇನು ಕೊಡುತ್ತೀರೋ, ಅದನ್ನೇ ವಾಪಸ್ ಪಡೆಯುತ್ತೀರಿ’ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಸಚಿವ ಸೆಂಥಿಲ್ ಬಾಲಾಜಿ ಬಂಧನದ ಬೆನ್ನಲ್ಲೇ ಸಿಬಿಐ ವಿರುದ್ಧ ಮಹತ್ವದ ಹೆಜ್ಜೆ ಇಟ್ಟ ತಮಿಳುನಾಡು ಸರ್ಕಾರ!
ವಿ. ಸೆಂಥಿಲ್ ಬಾಲಾಜಿ ಅವರು 2011ರಿಂದ 2015ರವರೆಗೆ ಎಐಎಡಿಎಂಕೆ ಸರ್ಕಾರ (ಜಯಲಲಿತಾ ಮುಖ್ಯಮಂತ್ರಿ ಅವಧಿ)ವಿದ್ದಾಗ ಸಾರಿಗೆ ಸಚಿವರು ಆಗಿದ್ದರು. ಈ ಅವಧಿಯಲ್ಲಿ ಅವರು ಉದ್ಯೋಗಕ್ಕಾಗಿ ಹಣ ಪಡೆದು ಕೋಟ್ಯಂತರ ರೂಪಾಯಿ ಹಗರಣ ಮಾಡಿದ್ದಾರೆ. ಸುಮಾರು 200 ಕೋಟಿ ರೂಪಾಯಿ ಕಿಕ್ಬ್ಯಾಕ್ ಪ್ರಕರಣ ಇದಾಗಿದೆ. ಹಣ ಅಕ್ರಮ ವರ್ಗಾವಣೆ ನಡೆಸಿದ್ದಾರೆ ಎಂಬ ಆರೋಪದಡಿ ಅವರನ್ನು ಈಗ ಇಡಿ ಬಂಧಿಸಿದೆ. ಬಂಧನವಾಗುತ್ತಿದ್ದಂತೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಸೆಂಥಿಲ್ಗೆ ಚೆನ್ನೈನ ಸರ್ಕಾರಿ ಆಸ್ಪತ್ರೆಲ್ಲಿ ಬೈಪಾಸ್ ಸರ್ಜರಿ ಮಾಡಿ ಚಿಕಿತ್ಸೆ ಕೊಡಲಾಗುತ್ತಿದೆ.