ಚೆನ್ನೈ: ತಮಿಳುನಾಡು ರಾಜ್ಯ ಬಿಜೆಪಿ ಎಸ್ಸಿಎಸ್ಟಿ ಘಟಕದ ಖಜಾಂಚಿ ಮತ್ತು ವಲಾರ್ಪುರಂ ಪಂಚಾಯಿತಿ ಅಧ್ಯಕ್ಷನಾಗಿದ್ದ ಪಿಪಿಜಿ ಶಂಕರ್ ಅವರನ್ನು ಚೆನ್ನೈನ ಹೊರವಲಯದ ಪೂನಮಲ್ಲಿಯಲ್ಲಿರುವ ನಜರತ್‌ಪೇಟೆ ಎಂಬಲ್ಲಿ ಹತ್ಯೆಗೈಯ್ಯಲಾಗಿದೆ. ಅದ್ಯಾವುದೋ ಮದುವೆಗೆ ಹೋಗಿದ್ದ ಶಂಕರ್ ಗುರುವಾರ ರಾತ್ರಿ ಕಾರಿನಲ್ಲಿ ಮನೆಗೆ ವಾಪಸ್ ಬರುತ್ತಿದ್ದರು.
ಚೆನ್ನೈ-ಬೆಂಗಳೂರು ಹೈವೇದಲ್ಲಿ ಬರುತ್ತಿದ್ದ ಶಂಕರ್ರನ್ನು ಒಂದಷ್ಟು ದುಷ್ಕರ್ಮಿಗಳು ಟಾರ್ಗೆಟ್ ಮಾಡಿದ್ದಾರೆ. ಶಂಕರ್ ಇದ್ದ ವಾಹನದತ್ತ ಮೊದಲು ಬಾಂಬ್ ಎಸೆದಿದ್ದಾರೆ. ಆಗ ಶಂಕರ್ಗೆ ಕಾರಿನ ಮೇಲೆ ನಿಯಂತ್ರಣ ಹೋಯಿತು. ಕೂಡಲೇ ಅವರು ವಾಹನದಿಂದ ಇಳಿದು ಪರಾರಿಯಾಗಲು ಪ್ರಯತ್ನಿಸಿದರೂ ದುಷ್ಕರ್ಮಿಗಳು ಬಿಡಲಿಲ್ಲ. ಶಂಕರ್ನನ್ನು ಬೆನ್ನಟ್ಟಿ ಹೋಗಿ ಸುತ್ತುವರಿದು, ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಈ ವೇಳೆ ಆ ಸ್ಥಳದಲ್ಲಿ ಇನ್ನೂ ಜನ-ವಾಹನ ಸಂಚಾರವಿತ್ತು. ಸಾರ್ವಜನಿಕರ ಎದುರಲ್ಲೇ ಹತ್ಯೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ಶಂಕರ್ ಕೂಡ ತೀರ ಸಾಚಾ ಅಲ್ಲ, ಆತನ ವಿರುದ್ಧವೂ 15 ಕ್ರಿಮಿನಲ್ ಕೇಸ್ಗಳಿವೆ ಎಂದೂ ಪೊಲೀಸರು ತಿಳಿಸಿದ್ದಾರೆ.
ತಮಿಳುನಾಡು ಬಿಜೆಪಿ ಮುಖಂಡ ಪಿಪಿಜಿ ಶಂಕರ್ ಹತ್ಯೆಯನ್ನು ರಾಜ್ಯ ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ಅವರು ಖಂಡಿಸಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ ಆಡಳಿತದಲ್ಲಿ ಅಪರಾಧಗಳು ಹೆಚ್ಚಾಗಿವೆ ಎಂದು ಹೇಳಿದ್ದಾರೆ. ‘ಸಾರ್ವಜನಿಕರ ಜೀವ, ಆಸ್ತಿಯನ್ನು ರಕ್ಷಿಸಬೇಕಾದ ಪೊಲೀಸರು ಇಲ್ಲಿನ ಆಡಳಿತ ಪಕ್ಷದ ಪ್ರಚಾರ ಇಲಾಖೆಯಂತೆ ಕೆಲಸ ಮಾಡುತ್ತಿದ್ದಾರೆ. ಗೃಹ ಇಲಾಖೆಯ ಜವಾಬ್ದಾರಿ ಹೊತ್ತಿರುವ ಮುಖ್ಯಮಂತ್ರಿ ಸ್ಟಾಲಿನ್ ಅವರು ರಾಜ್ಯದ ಕಾನೂನು-ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಅವರನ್ನು ನಂಬರ್ 1 ಸಿಎಂ ಎಂದು ಕರೆಯುವ ಇಲ್ಲಿನ ಜನರಿಗೆ ಸ್ಟಾಲಿನ್ ವಂಚನೆ ಮಾಡುತ್ತಿದ್ದಾರೆ. ಶಂಕರ್ ಹತ್ಯೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಿ, ಶಿಕ್ಷೆ ನೀಡಬೇಕು. ಇಂಥ ಘಟನೆಗಳು ಮುಂದುವರಿದಿದ್ದೇ ಆದರೆ ಇಡೀ ನಾಡಿನಾದ್ಯಂತ ನಾವು ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ’ ಎಂದು ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ. ಮೃತ ಶಂಕರ್ ಅವರ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.