Site icon Vistara News

ಸಚಿವ ಸೆಂಥಿಲ್ ಬಾಲಾಜಿ ಬಂಧನದ ಬೆನ್ನಲ್ಲೇ ತಮಿಳುನಾಡು ಬಿಜೆಪಿ ಕಾರ್ಯದರ್ಶಿ ಅರೆಸ್ಟ್​

Tamil Nadu BJP state secretary SG Suryah

#image_title

ಚೆನ್ನೈ: ತಮಿಳುನಾಡಿನಲ್ಲಿ ಡಿಎಂಕೆ ನಾಯಕ, ವಿದ್ಯುತ್​ ಮತ್ತು ಅಬಕಾರಿ ಸಚಿವ ವಿ.ಸೆಂಥಿಲ್ ಬಾಲಾಜಿ ಬಂಧನವಾದ ಬೆನ್ನಲ್ಲೇ ಹಲವು ಬಗೆಯ ಬೆಳವಣಿಗೆಗಳು ನಡೆಯುತ್ತಿವೆ. ಹಣ ಅಕ್ರಮ ವರ್ಗಾವಣೆ ಕೇಸ್​​ನಡಿ ಬಾಲಾಜಿಯವರನ್ನು ಇ.ಡಿ. (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಬಂಧಿಸಿದ್ದನ್ನು, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್​ ಮತ್ತು ಡಿಎಂಕೆ ಪಕ್ಷದ ಇತರ ನಾಯಕರು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಬಿಜೆಪಿ ವಿರುದ್ಧ ಒಂದೇ ಸಮನೆ ವಾಗ್ದಾಳಿ ನಡೆಸುತ್ತಿದ್ದಾರೆ. ಅದೆಲ್ಲದರ ಮಧ್ಯೆ ಈಗ ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್​.ಜಿ ಸೂರ್ಯ ((SG Suryah Arrested) ಅವರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಸೂರ್ಯ ಅವರು ಸಾಮಾಜಿಕ ಸಮಸ್ಯೆಗಳು ಬಗ್ಗೆ ಮಾತನಾಡಿದ್ದರು. ಡಿಎಂಕೆ ಮತ್ತು ಅದರ ಮೈತ್ರಿ ಪಕ್ಷದ ಇಬ್ಬಗೆ ನೀತಿಯನ್ನು ಖಂಡಿಸಿದ್ದಕ್ಕೆ ಅವರನ್ನು ಬಂಧಿಸಲಾಗಿದೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ. ಹಾಗೇ, ಸೂರ್ಯಾ ಬಂಧನವನ್ನು ಖಂಡಿಸಿದ್ದಾರೆ.

ಇದನ್ನೂ ಓದಿ: ಸಚಿವ ಸೆಂಥಿಲ್ ಬಾಲಾಜಿ ಬಂಧನದ ಬೆನ್ನಲ್ಲೇ ಸಿಬಿಐ ವಿರುದ್ಧ ಮಹತ್ವದ ಹೆಜ್ಜೆ ಇಟ್ಟ ತಮಿಳುನಾಡು ಸರ್ಕಾರ!

ಬಿಜೆಪಿ ಕಾರ್ಯದರ್ಶಿ ಎಸ್​.ಜಿ. ಸೂರ್ಯ ಅವರು ಸ್ವಲ್ಪ ದಿನಗಳ ಹಿಂದೆ ಮದುರೈ ಸಂಸದ, ಸಿಪಿಐ (ಎಂ) ಮುಖಂಡ ವೆಂಕಟೇಶನ್​ ಅವರನ್ನು ಟೀಕಿಸಿದ್ದರು. ಮಲತುಂಬಿದ ಚರಂಡಿಯನ್ನು ಸ್ವಚ್ಛಗೊಳಿಸುತ್ತಿದ್ದ ಸ್ವಚ್ಛತಾ ಕಾರ್ಯಕರ್ತನೊಬ್ಬ ಮೃತಪಟ್ಟ ಬಳಿಕ ಟ್ವೀಟ್ ಮಾಡಿದ್ದ ಅವರು ‘ನಿಮ್ಮ ಪ್ರತ್ಯೇಕತಾವಾದದ ರಾಜಕೀಯವು, ಆ ಮಲತುಂಬಿದ ಮೋರಿಗಿಂತಲೂ ಕೆಟ್ಟದಾಗಿ, ಗಬ್ಬು ನಾರುತ್ತಿದೆ. ಸ್ನೇಹಿತರೇ, ಒಬ್ಬ ಮನುಷ್ಯನಾಗಿ ಬದುಕುವ ಮಾರ್ಗ ಕಂಡುಕೊಳ್ಳಿ’ ಎಂದು ಹೇಳಿದ್ದರು. ಸಿಪಿಐ (ಎಂ) ಪಕ್ಷವು, ಡಿಎಂಕೆಯ ಮೈತ್ರಿ ಪಕ್ಷವೇ ಆಗಿದ್ದರಿಂದ, ಈ ಸಂಸದನ ವಿರುದ್ಧ ಮಾಡಿದ್ದ ಟ್ವೀಟ್ ಕಾರಣಕ್ಕೇ ಸೂರ್ಯ ಬಂಧನವಾಗಿದೆ ಎಂಬ ಆರೋಪ ಕೇಳಿಬಂದಿದೆ. ಹಾಗಂತ ಮಧುರೈ ಪೊಲೀಸರು ಇನ್ನೂ ನಿಖರ ಕಾರಣವನ್ನು ತಿಳಿಸಿಲ್ಲ.

ಬಿಜೆಪಿ ಕಾರ್ಯದರ್ಶಿ ಸೂರ್ಯ ಬಂಧನವನ್ನು ಬಿಜೆಪಿ ತಮಿಳುನಾಡು ರಾಜ್ಯ ಅಧ್ಯಕ್ಷ ಕೆ.ಅಣ್ಣಾಮಲೈ ಖಂಡಿಸಿದ್ದಾರೆ. ‘ತಮಿಳುನಾಡು ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್​.ಜಿ.ಸೂರ್ಯ ಅವರ ಬಂಧನ ಖಂಡನಾರ್ಹ. ಡಿಎಂಕೆ ಮತ್ತು ಅದರ ಮೈತ್ರಿ ಪಕ್ಷಗಳ ಇಬ್ಬಗೆ ನೀತಿಯನ್ನು ವಿರೋಧಿಸಿದ್ದೇ ಅವರ ತಪ್ಪು. ಇಂಥ ಬಂಧನಗಳನ್ನೆಲ್ಲ ನಮ್ಮನ್ನು ತಡೆಯುವುದಿಲ್ಲ. ನಾವು ಸತ್ಯವನ್ನು ಹೇಳುತ್ತಲೇ ಇರುತ್ತೇವೆ’ ಎಂದಿದ್ದಾರೆ.

Exit mobile version