ಚೆನ್ನೈ: ತಮಿಳುನಾಡು ಸರ್ಕಾರ ಸಂಪುಟವನ್ನು (Tamil Nadu Cabinet Reshuffle) ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (Chief Minister MK Stalin) ಅವರು ಪುನರಚನೆ ಮಾಡಿದ್ದು, ಬಹುಮುಖ್ಯವಾಗಿ ಅಲ್ಲಿನ ಹಣಕಾಸು ಸಚಿವರಾಗಿದ್ದ ಪಿ. ತಿಯಾಗ ರಾಜನ್ ಅವರಿಂದ ಆ ಖಾತೆಯನ್ನು ವಾಪಸ್ ಪಡೆದು, ತಂಗಮ್ ತೆನ್ನರಸು ಅವರಿಗೆ ನೀಡಿದ್ದಾರೆ. ತಂಗಮ್ ತೆನ್ನರಸು ಅವರು ಇಷ್ಟು ದಿನ ಕೈಗಾರಿಕಾ ಸಚಿವಾಲಯದ ಜವಾಬ್ದಾರಿ ಹೊತ್ತಿದ್ದರು. ಪಿ. ತಿಯಾಗ್ ರಾಜನ್ ಅವರಿಗೆ ಮಾಹಿತಿ-ತಂತ್ರಜ್ಞಾನ ಖಾತೆಯನ್ನು ನೀಡಲಾಗಿದ್ದು, ಕೈಗಾರಿಕಾ ಇಲಾಖೆಗೆ ಡಾ. ಟಿಆರ್ಬಿ ರಾಜಾ ಅವರು ನೂತನ ಸಚಿವರಾಗಿದ್ದಾರೆ.
ತಮ್ಮಿಂದ ಹಣಕಾಸು ಖಾತೆ ಜವಾಬ್ದಾರಿಯನ್ನು ವಾಪಸ್ ಪಡೆದು, ತಂಗಮ್ ತೆನ್ನರಸು ಅವರಿಗೆ ವಹಿಸುತ್ತಿದ್ದಂತೆ ಟ್ವೀಟ್ ಮಾಡಿ ಹೇಳಿಕೆ ಬಿಡುಗಡೆ ಮಾಡಿರುವ ತಿಯಾಗ್ ರಾಜನ್ ‘ಎಂ.ಕೆ.ಸ್ಟಾಲಿನ್ ಅವರ ನೇತೃತ್ವದಲ್ಲಿ ನಾನು ನನ್ನ ಹಣಕಾಸು ಸಚಿವಾಲಯದ ಜವಾಬ್ದಾರಿಯನ್ನು ಎರಡು ವರ್ಷ ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದೇನೆ. 2021-22ನೇ ಸಾಲಿನಲ್ಲಿ, ಕೊವಿಡ್ ಸಾಂಕ್ರಾಮಿಕದ ಮಧ್ಯೆ ಒಂದು ಪರಿಷ್ಕೃತ ಬಜೆಟ್ ಮಂಡನೆ ಮಾಡಿದ್ದೇನೆ ಮತ್ತು 2022-23, 2023-24ನೇ ಸಾಲಿನ ವಾರ್ಷಿಕ ಬಜೆಟ್ ಮಂಡಿಸಿದ್ದೇನೆ. ಹಲವು ವರ್ಷಗಳಿಂದಲೂ ಇರುವ ಸಾಲ ಸಮಸ್ಯೆ , ಹಣದ ಕೊರತೆ ಮಧ್ಯೆಯೂ ನಾವು ಹಲವು ಸಾಮಾಜಿಕ ಕಲ್ಯಾಣ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಿದ್ದೇವೆ. ಈ ಎಲ್ಲವೂ ನಾನು ಹಣಕಾಸು ಮಂತ್ರಿಯಾಗಿದ್ದಾಗಲೇ ಆಗಿದ್ದು ಖುಷಿ ಕೊಟ್ಟಿದೆ. ನನ್ನ ಪಾಲಿಗೆ ಮಹತ್ವದ ದಿನಗಳು’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Annamalai : ಅಣ್ಣಾಮಲೈ ವಿರುದ್ಧ ಸಿಎಂ ಸ್ಟಾಲಿನ್ ಮಾನನಷ್ಟ ಮೊಕದ್ದಮೆ, ಏನಿದು ಕೇಸ್?
ತಮಿಳುನಾಡಿನಲ್ಲಿ 2021ರಲ್ಲಿ ವಿಧಾನಸಭೆ ಚುನಾವಣೆ ನಡೆದು ಎಂ.ಕೆ.ಸ್ಟಾಲಿನ್ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷ ಗೆದ್ದು ಅಧಿಕಾರ ಹಿಡಿದಿದೆ. ಆಗ ರಚನೆಯಾಗಿದ್ದ ಸಂಪುಟದಲ್ಲಿ ಈ ಎರಡು ವರ್ಷಗಳ ಕಾಲ ಸ್ಟಾಲಿನ್ ಅವರು ಯಾವುದೇ ಬದಲಾವಣೆ ಮಾಡಿರಲಿಲ್ಲ. ಈಗ ಒಟ್ಟು ನಾಲ್ವರು ಸಚಿವರ ಖಾತೆಗಳನ್ನು ಬದಲಾವಣೆ ಮಾಡಿದ್ದಾರೆ.