ಬೆಂಗಳೂರು: ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ತಮಿಳುನಾಡಿನಲ್ಲಿ ಇಬ್ಬರು ಪ್ರತಿ ಪಕ್ಷದ ನಾಯಕರನ್ನು 24 ಗಂಟೆಗಳ ಅವಧಿಯೊಳಗೆ ಕೊಲೆ ಮಾಡಲಾಗಿದೆ. ಕೊಲೆಯಾದವರಲ್ಲಿ ಒಬ್ಬರು ಬಿಜೆಪಿ ಮತ್ತು ಇನ್ನೊಬ್ಬರು ಎಐಎಡಿಎಂಕೆಯ ನಾಯಕರಾಗಿದ್ದಾರೆ. ಅವರಿಬ್ಬರನ್ನೂ ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಇದರಿಂದ ಕೆರಳಿದ ವಿರೋಧ ಪಕ್ಷದ ನಾಯಕರು ಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಯಾರಿಗೂ ಭದ್ರತೆ ಇಲ್ಲ ಎಂದು ಆರೋಪಿಸಿದ್ದಾರೆ.
ಶಿವಗಂಗೈನ ಬಿಜೆಪಿ ಕಾರ್ಯಕರ್ತನನ್ನು ಶನಿವಾರ ರಾತ್ರಿ ಗುಂಪೊಂದು ಕೊಚ್ಚಿ ಕೊಲೆ ಮಾಡಿದೆ. ಶಿವಗಂಗೈನ ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾಗಿದ್ದ ಸೆಲ್ವಕುಮಾರ್ ಅವರು ಅದೇ ಪ್ರದೇಶದಲ್ಲಿ ತಮ್ಮ ಒಡೆತನದ ಇಟ್ಟಿಗೆ ಗೂಡುಗಳಿಂದ ದ್ವಿಚಕ್ರ ವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆಸಿ ಕೊಲ್ಲಲಾಗಿದೆ. ಅವರು ತಮ್ಮ ದ್ವಿಚಕ್ರ ವಾಹನದಲ್ಲಿದ್ದಾಗ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ವ್ಯಕ್ತಿಗಳ ಗುಂಪು ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿತ್ತು.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ, “ಸಮಾಜ ವಿರೋಧಿ ಶಕ್ತಿಗಳಿಗೆ ಸರ್ಕಾರ ಅಥವಾ ಪೊಲೀಸರ ಬಗ್ಗೆ ಯಾವುದೇ ಭಯವಿಲ್ಲ. ಪೊಲೀಸರನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿರುವ ಮುಖ್ಯಮಂತ್ರಿಗಳು ರಾಜಕೀಯ ನಾಟಕವಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
ಪುದುಚೇರಿ ಗಡಿಗೆ ಹತ್ತಿರವಿರುವ ಕಡಲೂರು ಪ್ರದೇಶದಲ್ಲಿ ಎಐಎಡಿಎಂಕೆ ಕಾರ್ಯಕರ್ತನನ್ನು ಹತ್ಯೆ ಮಾಡಲಾಗಿದೆ. ತಿರುಪಪುಲಿಯೂರ್ ನಿವಾಸಿ ಪದ್ಮನಾಭನ್ ಕೊಲೆಯಾದ ವ್ಯಕ್ತಿ. ಘಟನೆಯ ದಿನದಂದು ಅವರು ಬಾಗೂರು ಗ್ರಾಮದ ಕಡೆಗೆ ಹೋಗುತ್ತಿದ್ದಾಗ ಕೆಲವು ಅಪರಿಚಿತ ವ್ಯಕ್ತಿಗಳು ಅವರನ್ನು ಸುತ್ತುವರೆದಿದ್ದರು. ಈ ವೇಳೆ ವಾಗ್ವಾದ ನಡೆದಿತ್ತು.ಬಳಿಕ ಅದು ಅವರ ಸಾವಿನಲ್ಲಿ ಕೊನೆಗೊಂಡಿತು.
ಕಡಲೂರು ಜಿಲ್ಲೆಯ ನವನೀತ ನಗರ ಪ್ರದೇಶದ ಮುರಳಿ ಮತ್ತು ಶ್ರೀಧರ್ ಎಂಬ ಇಬ್ಬರು ವ್ಯಕ್ತಿಗಳನ್ನು ವಿಚಾರಣೆಗಾಗಿ ಕರೆದೊಯ್ಯಲಾಗಿದೆ ಎಂದು ಬಹೌರ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಪಿ.ಕೆ.ಸಜಿತ್ ತಿಳಿಸಿದ್ದಾರೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಅವರು ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಎಂ.ಕೆ.ಸ್ಟಾಲಿನ್ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: School Teacher : ಶಾಲಾ ಕೊಠಡಿಯಲ್ಲೇ ಚಾಪೆ ಹಾಸಿ, ಮಕ್ಕಳಿಗೆ ಗಾಳಿ ಹಾಕಲು ಹೇಳಿ ಗಡದ್ದಾಗಿ ನಿದ್ದೆ ಹೊಡೆದ ಟೀಚರ್!
ತಮಿಳುನಾಡಿನಲ್ಲಿ ರಾಜಕೀಯ ಪಕ್ಷದ ನಾಯಕರಿಂದ ಹಿಡಿದು ಸಾಮಾನ್ಯ ಮಹಿಳೆಯರವರೆಗೆ ಯಾರಿಗೂ ಭದ್ರತೆ ಇಲ್ಲ ಎಂದು ಹೇಳಿದ್ದಾರೆ. ರಾಜ್ಯದ ಡಿಎಂಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪಳನಿಸ್ವಾಮಿ, ಪ್ರತಿದಿನ ಕೊಲೆಗಳು ಮತ್ತು ದರೋಡೆಗಳು ನಡೆಯುತ್ತಿವೆ/ ಜನವರಿಯಿಂದ 595 ಕೊಲೆಗಳು ನಡೆದಿವೆ ಎಂದು ಆರೋಪಿಸಿದರು.
ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಕೊಲೆಗಳು ಮತ್ತು ದರೋಡೆಗಳು ಪ್ರತಿದಿನ ನಡೆಯುತ್ತಿವೆ. ತಮಿಳುನಾಡಿನಲ್ಲಿ ಕೊಲೆಗಳು ನಡೆಯದೆ ದಿನವೇ ಇಲ್ಲ . ಜನವರಿಯಿಂದ ಇಲ್ಲಿಯವರೆಗೆ 595 ಕೊಲೆಗಳು ನಡೆದಿವೆ ಎಂದು ಪಳನಿಸ್ವಾಮಿ ಹೇಳಿದ್ದಾರೆ.