Site icon Vistara News

The Kerala Story: ದಿ ಕೇರಳ ಸ್ಟೋರಿ ಬಿಡುಗಡೆಗೆ 2 ದಿನ ಬಾಕಿ; ಗುಪ್ತಚರ ದಳದಿಂದ ತಮಿಳುನಾಡಿಗೆ ಎಚ್ಚರಿಕೆ

AR Rahman shared a video of a Hindu wedding in a mosque

#image_title

ಚೆನ್ನೈ: ಟ್ರೇಲರ್​ ರಿಲೀಸ್​ ಆಗುತ್ತಿದ್ದಂತೆ ದೊಡ್ಡಮಟ್ಟ ವಿವಾದ ಸೃಷ್ಟಿಸಿರುವ ದಿ ಕೇರಳ ಸ್ಟೋರಿ (The Kerala Story ) ಸಿನಿಮಾ ಮೇ 5ರಂದು ರಾಷ್ಟ್ರಾದ್ಯಂತ ಬಿಡುಗಡೆಯಾಗಲಿದೆ. ಕೇರಳದ ಹಿಂದು ಮತ್ತು ಕ್ರಿಶ್ಚಿಯನ್​ ಯುವತಿಯರನ್ನು ಬ್ರೇನ್​ವಾಶ್ ಮಾಡಿ,​ ಇಲ್ಲಿಂದ ಸಿರಿಯಾ ಮತ್ತು ಅಫ್ಘಾನಿಸ್ತಾನದಂಥ ದೇಶಗಳಿಗೆ ಕರೆದುಕೊಂಡು ಹೋಗಿ, ಇಸ್ಲಾಮ್​ಗೆ ಮತಾಂತರಗೊಳಿಸಿ, ಐಸಿಸ್​ ಉಗ್ರಸಂಘಟನೆಗೆ ಸೇರಿಸುವ ಕತೆಯನ್ನು ಒಳಗೊಂಡಿರುವ ದಿ ಕೇರಳ ಸ್ಟೋರಿ ಬಿಡುಗಡೆಗೆ ಈಗಾಗಲೇ ಒಂದು ವರ್ಗದ ಜನರು ಕಟುವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಥಿಯೇಟರ್​ ರಿಲೀಸ್​ಗೆ ಇನ್ನೆರಡು ದಿನಗಳು ಬಾಕಿ ಇರುವಾಗಲೇ ಗುಪ್ತಚರ ದಳಗಳು ತಮಿಳುನಾಡಿಗೆ ಎಚ್ಚರಿಕೆ ನೀಡಿವೆ. ದಿ ಕೇರಳ ಸ್ಟೋರಿ ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ತಮಿಳುನಾಡಿನಲ್ಲಿ ಭಾರಿ ಪ್ರಮಾಣದಲ್ಲಿ ಪ್ರತಿಭಟನೆ ನಡೆಯಬಹುದು ಎಂದು ಹೇಳಿವೆ.

ದಿ ಕೇರಳ ಸ್ಟೋರಿ ಸಿನಿಮಾ ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆ ರಾಜಕೀಯವಾಗಿಯೂ ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿದೆ. ಬಿಜೆಪಿ ಮತ್ತು ಇತರ ಹಿಂದು ಸಂಘಟನೆಗಳು ಸಿನಿಮಾವನ್ನು ಹೊಗಳಿವೆ. ಇದು ಕೇರಳದ ವಸ್ತುಸ್ಥಿತಿ ಎಂದು ಹೇಳಿವೆ. ಆದರೆ ಕಾಂಗ್ರೆಸ್​, ಕೇರಳದ ಆಡಳಿತ ಪಕ್ಷ ಸಿಪಿಐ (ಎಂ) ಮತ್ತಿತರ ರಾಜಕೀಯ ಪಕ್ಷಗಳು ದಿ ಕೇರಳ ಸ್ಟೋರಿಗೆ ವಿರೋಧ ವ್ಯಕ್ತಪಡಿಸಿವೆ. ಮುಸ್ಲಿಮರನ್ನು ವಿಲನ್​ಗಳಂತೆ ಬಿಂಬಿಸಲಾಗಿದೆ. ಕೋಮು ಸೌಹಾರ್ದತೆ ಕದಡುವ ಈ ಸಿನಿಮಾ ಯಾವ ಕಾರಣಕ್ಕೂ ಬಿಡುಗಡೆಯಾಗಬಾರದು ಎಂದು ಹೇಳಿದ್ದಾರೆ. ಸಿನಿಮಾ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ‘ಕೇರಳವು ಧಾರ್ಮಿಕ ಪ್ರತ್ಯೇಕತಾವಾದಿಗಳ ಕೇಂದ್ರ ಎಂದು ಬಿಂಬಿಸಿ, ರಾಜ್ಯದ ವಿರುದ್ಧ ಅಪಪ್ರಚಾರ ಮಾಡುವುದಕ್ಕೋಸ್ಕರ ಸಂಘ ಪರಿವಾರದವರೆಲ್ಲ ಸೇರಿ ಈ ದಿ ಕೇರಳ ಸ್ಟೋರಿ ಸಿನಿಮಾವನ್ನು ಬೆಂಬಲಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸಂಸದ ಶಶಿ ತರೂರ್​ ಅವರೂ ಕೂಡ ಸಿನಿಮಾದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ‘ಇದು ನಿಮ್ಮ ಕೇರಳದ ಸ್ಟೋರಿಯಾಗಿರಬಹುದು. ನಮ್ಮ ಕೇರಳದಲ್ಲಿ ಇಂಥ ಕತೆಯಿಲ್ಲ ಎಂದಿದ್ದಾರೆ. ‘ನಾನು ಸಿನಿಮಾವನ್ನು ನಿಷೇಧಿಸುವಂತೆ ಹೇಳುತ್ತಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಯಾರೋ ದುರುಪಯೋಗಪಡಿಸಿಕೊಂಡಾಕ್ಷಣ ಅದರ ಮೌಲ್ಯವೇನೂ ಕೆಡುವುದಿಲ್ಲ. ಆದರೆ ದಿ ಕೇರಳ ಸ್ಟೋರಿ ಎಂಬುದು ವಾಸ್ತವವನ್ನು ತಪ್ಪಾಗಿ ನಿರೂಪಿಸಿದ ಸಿನಿಮಾ ಎಂಬುದನ್ನು ಇಲ್ಲಿನ ಜನ ದೊಡ್ಡ ಧ್ವನಿಯಲ್ಲಿ, ಸ್ಪಷ್ಟವಾಗಿ ಹೇಳಬಹುದು. ಆ ಹಕ್ಕು ಅವರಿಗೆ ಇದೆ’ ಎಂದು ತರೂರ್​ ಹೇಳಿದ್ದಾರೆ. ಇನ್ನು ಬಿಜೆಪಿಯಂತೂ ಸಿನಿಮಾ ಬಿಡುಗಡೆಗೆ ತುದಿಗಾಲಲ್ಲಿ ನಿಂತಿದೆ.

ಇದನ್ನೂ ಓದಿ: The Kerala Story: ದಿ ಕೇರಳ ಸ್ಟೋರಿಗೆ ಎ ಸರ್ಟಿಫಿಕೇಟ್​; 10 ದೃಶ್ಯಗಳಿಗೆ ಕತ್ತರಿ ಹಾಕಿದ ಸೆನ್ಸಾರ್ ಮಂಡಳಿ

ಅಂದಹಾಗೇ, ದಿ ಕೇರಳ ಸ್ಟೋರಿ ಸಿನಿಮಾವನ್ನು ವಿಫುಲ್ ಅಮೃತ್​ಲಾಲ್ ಶಾ ನಿರ್ಮಿಸಿದ್ದು, ಸುದಿಪ್ತೋ ಸೇನ್​ ನಿರ್ದೇಶನ ಮಾಡಿದ್ದಾರೆ. ಆದಾ ಶರ್ಮಾ, ಯೋಗಿತಾ ಬಿಹಾನಿ, ಸಿದ್ದಿ ಇದ್ನಾನಿ, ಸೋನಿಯಾ ಬಲಾನಿ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಕೇರಳದ ಸುಮಾರು 32 ಸಾವಿರ ಯುವತಿಯರು ರಾಜ್ಯದಿಂದ ಹೋಗಿ ಐಸಿಸ್​ ಸಂಘಟನೆ ಸೇರಿದ್ದಾರೆ ಎಂಬುದನ್ನು ಸಿನಿಮಾದ ಟ್ರೇಲರ್ ಹೇಳಿದೆ. ಇನ್ನು ಈ ಸಿನಿಮಾಕ್ಕೆ ಸೆನ್ಸಾರ್ ಮಂಡಳಿ ಎ ಸರ್ಟಿಫಿಕೇಟ್​ ನೀಡಿದ್ದು, ಒಟ್ಟು 10 ದೃಶ್ಯಗಳಿಗೆ ಕತ್ತರಿ ಹಾಕಿದೆ ಎಂದು ವರದಿಯಾಗಿದೆ.

Exit mobile version